ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ತೀವ್ರತೆ ಹೆಚ್ಚಿಲ್ಲ: ಸುಧಾಕರ್‌

Last Updated 13 ಜೂನ್ 2022, 16:11 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ, ಅದರ ತೀವ್ರತೆ ಮತ್ತು ಮರಣ ಪ್ರಮಾಣ ಹೆಚ್ಚಳವಾಗಿಲ್ಲ. ಆದ್ದರಿಂದ ಜನರು ಆತಂಕಪಡಬೇಕಾದ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಕೆಲವು ದಿನಗಳಿಂದ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಕುರಿತು ರಾಜ್ಯ ಮಟ್ಟದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿ, ಪರಿಸ್ಥಿತಿ ಅವಲೋಕಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕೆಲವು ದಿನಗಳಿಂದ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕು ಪ್ರಕರಣಗಳ ದೃಢಪ್ರಮಾಣ ದರ ಏರಿಕೆಯಾಗುತ್ತಿದೆ. ಆದರೆ, ರೋಗದ ತೀವ್ರತೆ ಮತ್ತು ಕೋವಿಡ್‌ನಿಂದ ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಿರುವುದೂ ಹೆಚ್ಚಿನ ಪ್ರಕರಣಗಳು ವರದಿಯಾಗಲು ಕಾರಣ ಇರಬಹುದು. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಕೋವಿಡ್‌ನ ನಾಲ್ಕನೇ ಆರಂಭವಾಗಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದರು.

ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲೇ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಪರಿಸ್ಥಿತಿ ನಿಯಂತ್ರಣ ಕುರಿತು ಬಿಬಿಎಂಪಿ ಅಧಿಕಾರಿಗಳ ಜತೆ ಪ್ರತ್ಯೇಕವಾಗಿ ಸಭೆ ನಡೆಸಲಾಗುವುದು. ಕೋವಿಡ್‌ ವೈರಾಣುವಿನ ವಂಶವಾಹಿ ಕುರಿತು ಅಧ್ಯಯನ ನಡೆಸಲು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ‘ಜೆನೋಮಿಕ್‌ ಸೀಕ್ವೆನ್ಸಿಂಗ್‌ ಪ್ರಯೋಗಾಲಯ’ವನ್ನು ತಕ್ಷಣವೇ ಆರಂಭಿಸಲು ಸೂಚಿಸಲಾಗಿದೆ ಎಂದು
ತಿಳಿಸಿದರು.

ಅನ್ಯ ರೋಗಗಳಿಂದ ಬಳಲುತ್ತಿರುವವರು ಕೋವಿಡ್‌ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ ಅನ್ನು ತಡಮಾಡದೇ ಪಡೆಯಬೇಕು. ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT