ಗುರುವಾರ , ಜುಲೈ 7, 2022
23 °C

ಏ. 27ರ ನಂತರ ಕೋವಿಡ್ ನಿಯಂತ್ರಣ ಕ್ರಮಗಳ ಮಾರ್ಗಸೂಚಿ ಪ್ರಕಟ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್ ‌ನಾಲ್ಕನೆ ಅಲೆಯ ಆತಂಕ ಇರುವ ಕಾರಣ ಜಾಗೃತಿ ವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇರಳ ಸೇರಿದಂತೆ ಅಲ್ಲಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏ.27 ರಂದು ಪ್ರಧಾನ ಮಂತ್ರಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸೂಚನೆಗಳನ್ನು ನೀಡಲಿದ್ದಾರೆ. ನಂತರ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಹಿಂದಿನ ಅನುಭವಗಳನ್ನು ಆಧರಿಸಿ ಕೋವಿಡ್ ನಿರ್ವಹಣೆಗೆ ಸ್ಪಷ್ಟ ಮುನ್ನೆಚ್ಚರಿಕೆ ವಹಿಸಲಾಗುವುದು. ವಿಜ್ಞಾನಿಗಳು,ತಜ್ಞರ ಸಲಹೆಗಳನ್ನು ಕೂಡ ಪಡೆಯಲಾಗುವುದು. 27ರ ನಂತರ ಕೋವಿಡ್ ಶಿಷ್ಟಾಚಾರ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ದೇಶ, ರಾಜ್ಯದಲ್ಲಿಯೇ ಕುಳಿತು ಬೇರೆ ದೇಶಗಳ ವಿಳಾಸ ನೀಡಿ ಆತಂಕ ಒಡ್ಡುವ ಕೃತ್ಯಗಳನ್ನು ಮಾಡುವವರ ವಿರುದ್ಧ ತನಿಖೆ  ಮಾಡಲಾಗುವುದು. ಕೇಂದ್ರ ಸರ್ಕಾರದ ಮೂಲಕ ವಿದೇಶಗಳ ಭದ್ರತಾ ವಿಭಾಗ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗುವುದು. ಪಿಎಸ್ಐ ಅಕ್ರಮ ‌ನೇಮಕಾತಿ, ಹಳೇ ಹುಬ್ಬಳ್ಳಿ ಗಲಭೆ ಹಾಗೂ ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸೇರಿದಂತೆ ಎಲ್ಲಾ  ಪ್ರಕರಣ ಕುರಿತು ಆಳಕ್ಕೆ ಹೋಗಿ ತನಿಖೆ ಮಾಡಲಾಗುವುದು ಎಂದರು.

ಪಿಎಸ್‌ಐ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿರುವವರು ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಹುಬ್ಬಳ್ಳಿ ಗಲಭೆಯನ್ನು ಸಾಮಾನ್ಯ ಪ್ರಕರಣ ಎಂದು ಪರಿಗಣಿಸಿಲ್ಲ. ಪೊಲೀಸ್ ಠಾಣೆಯ ಮೇಲೆ ದೊಡ್ಡ ಸಂಖ್ಯೆಯಲ್ಲಿ ಸಂಘಟಿತರಾಗಿ ದಾಳಿ ಮಾಡಲು ಕುಮ್ಮಕ್ಕು ನೀಡಿದವರ ಬಗ್ಗೆ ಈಗಾಗಲೇ ಬಂಧಿತರಾದವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಘಟನೆಯ ಹಿಂದೆ ಇರುವ ಎಲ್ಲರನ್ನೂ ಶಿಕ್ಷೆಗೆ ಒಳಪಡಿಸಲಾಗುವುದು. 

ಪಕ್ಷದ ವರಿಷ್ಠರ ಜೊತೆ ಚರ್ಚಿಸಿದ ನಂತರ ಸಚಿವ ಸಂಪುಟ ವಿಸ್ತರಣೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು