ಸೋಮವಾರ, ಏಪ್ರಿಲ್ 19, 2021
31 °C
ಪ್ರಯೋಗಾಲಯಗಳ ಪೂರ್ಣ ಸಾಮರ್ಥ್ಯ ಬಳಕೆಗೆ ಮುಂದಾದ ಆರೋಗ್ಯ ಇಲಾಖೆ

ಕೋವಿಡ್: ಅಗ್ಗದ ಪರೀಕ್ಷೆಗೆ ವಿದಾಯ!

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಪರೀಕ್ಷೆ–ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ ಒಂದು ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಗುರಿ ಹಾಕಿಕೊಂಡಿರುವ ಆರೋಗ್ಯ ಇಲಾಖೆ, ಅಗ್ಗದ ಮತ್ತು ಕೆಲವೇ ನಿಮಿಷಗಳಲ್ಲಿ ಫಲಿತಾಂಶ ನೀಡುವ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ಕೈಬಿಡಲು ಮುಂದಾಗಿದೆ.

ಅದರ ಬದಲಾಗಿ, ಪ್ರಯೋಗಾಲಯಗಳ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಆರ್‌ಟಿ–ಪಿಸಿಆರ್‌ ಪರೀಕ್ಷೆಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಯೋಜನೆ ರೂಪಿಸಿದೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿ, ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ. ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ), ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಸೇರಿದಂತೆ ಕೋವಿಡ್ ಕಾಯಿಲೆಯ ಲಕ್ಷಣ ಇರುವವರು ಹಾಗೂ ಸೋಂಕಿತರ ಸಂಪರ್ಕಿತರಿಗೆ ಪರೀಕ್ಷೆ ನಡೆಸುವಂತೆ ತಜ್ಞರು ಸೂಚಿಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಬಳಿಕ ರೈಲು ನಿಲ್ದಾಣ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಒಂದು ದಿನದ ಅವಧಿಯಲ್ಲಿ ನಡೆಸಲಾಗುತ್ತಿದ್ದ ಪರೀಕ್ಷೆಗಳಲ್ಲಿ ಶೇ 30ರಷ್ಟು ಪರೀಕ್ಷೆಗಳಿಗೆ ಇದೇ ವಿಧಾನ ಅನುಸರಿಲಾಗುತ್ತಿತ್ತು.

ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಹೋಲಿಸಿದಲ್ಲಿ ಇದರ ಶುಲ್ಕ ಅರ್ಧದಷ್ಟು ಕಡಿಮೆಯಿದೆ. ಖಾಸಗಿ ಪ್ರಯೋಗಾಲಯಕ್ಕೆ ತೆರಳಿ ಮಾಡಿಸಿಕೊಳ್ಳುವ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ₹ 800 ಶುಲ್ಕ ವಿಧಿಸಲಾಗುತ್ತಿದೆ. ರ್‍ಯಾಪಿಡ್ ಆ್ಯಂಡಿಜೆನ್ ಪರೀಕ್ಷೆಗೆ ₹ 400 ನಿಗದಿಪಡಿಸಲಾಗಿದೆ. ಆದರೆ, ಪರೀಕ್ಷೆಯ ಫಲಿತಾಂಶದ ಬಗ್ಗೆ ತಜ್ಞರೇ ಆಕ್ಷೇಪ ವ್ಯಕ್ತಪಡಿಸಿ, ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದರು. ಹೀಗಾಗಿ, ಇಲಾಖೆಯು ಈಗ ಆ್ಯಂಟಿಜೆನ್ ಪರೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ಕೈಬಿಟ್ಟು, ಆರ್‌ಟಿ–ಪಿಸಿಆರ್ ಪರೀಕ್ಷೆಗಳಿಗೆ ಆದ್ಯತೆ ನೀಡಲು ಮುಂದಾಗಿದೆ. ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ವ್ಯಕ್ತಿಗಳ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.

‘ಪ್ರಾರಂಭಿಕ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಾಲಯಗಳು ಇರಲಿಲ್ಲ. ಹಾಗಾಗಿ, ಆ್ಯಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಕೆಲವು ಪ್ರಕರಣಗಳಲ್ಲಿ ಆ್ಯಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಎಂಬ ಫಲಿತಾಂಶ ಬಂದರೂ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ತಜ್ಞರು ಕೂಡ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಆದ್ಯತೆ ನೀಡಲು ಶಿಫಾರಸು ಮಾಡಿದ್ದಾರೆ. ಹಾಗಾಗಿ, ಎಲ್ಲರಿಗೂ ಆರ್‌ಟಿ–ಪಿಸಿಆರ್ ನಡೆಸಲು ಮುಂದಾಗಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಗುರಿಗಿಂತ ಅಧಿಕ ಸಾಮರ್ಥ್ಯ

ಕೋವಿಡ್ ಪರೀಕ್ಷೆಯಲ್ಲಿ ಬೆಳಗಾವಿ, ರಾಯಚೂರು, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಬೀದರ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳು ಹಿಂದುಳಿದಿದ್ದು, ಅಲ್ಲಿ ಕಡಿಮೆ ಸಂಖ್ಯೆಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಕಳೆದ ಕೆಲ ದಿನಗಳಿಂದ ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಬೆಂಗಳೂರು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಉಡುಪಿ, ಕೊಡಗು, ಬೆಳಗಾವಿ ಹಾಗೂ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಲು ಇಲಾಖೆ ಆರೋಗ್ಯ ಸಿಬ್ಬಂದಿಗೆ ಸೂಚಿಸಿದೆ.

ರಾಜ್ಯದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಿಂದ (ಐಸಿಎಂಆರ್) 183 ಪ್ರಯೋಗಾಲಯಗಳು ಮಾನ್ಯತೆ ಪಡೆದಿವೆ. ಇದರಲ್ಲಿ 63 ಸರ್ಕಾರಿ ಪ್ರಯೋಗಾಲಯಗಳಾಗಿವೆ. ಖಾಸಗಿ ಹಾಗೂ ಸರ್ಕಾರಿ ಪ್ರಯೋಗಾಲಯಗಳಿಂದ ದಿನವೊಂದಕ್ಕೆ 1.50 ಲಕ್ಷಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ.

* ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಸಂಪರ್ಕಿತರು ಸೇರಿಎಲ್ಲರಿಗೂ ಆರ್‌ಟಿ–ಪಿಸಿಆರ್ ವಿಧಾನದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

-ಡಾ.ಕೆ.ವಿ. ತ್ರಿಲೋಕ್ ಚಂದ್ರ, ಆರೋಗ್ಯ ಇಲಾಖೆ ಆಯುಕ್ತ

ಕೋವಿಡ್ ಪರೀಕ್ಷೆಗಳ ಅಂಕಿ–ಅಂಶ

41.17 ಲಕ್ಷ

ರಾಜ್ಯದಲ್ಲಿ ನಡೆಸಲಾದ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳು

1.60 ಕೋಟಿ

ಆರ್‌ಟಿ–ಪಿಸಿಆರ್ ಹಾಗೂ ವಿವಿಧ ಮಾದರಿ ಪರೀಕ್ಷೆಗಳು

2.01 ಕೋಟಿ

ವಿವಿಧ ಮಾದರಿಯಲ್ಲಿ ನಡೆಸಲಾದ ಒಟ್ಟು ಪರೀಕ್ಷೆಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು