ಬೆಳಗಾವಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೊಬೈಲ್ ಫೋನ್ ಅಪ್ಲಿಕೇಷನ್ (ಆ್ಯಪ್) ಬಳಸಿ ಬೆಳೆ ಸಮೀಕ್ಷೆ ಮಾಡುವ ಕಾರ್ಯಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವತಃ ಮಾಹಿತಿ ದಾಖಲಿಸುತ್ತಿದ್ದಾರೆ.
ಇಲ್ಲಿ 14.82 ಲಕ್ಷ ಕ್ಷೇತ್ರಗಳಲ್ಲಿ (ಜಮೀನುಗಳು) ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಹೋದ ತಿಂಗಳು 2ನೇ ವಾರದಲ್ಲಿ ಇಲಾಖೆಯಿಂದ ಸಮೀಕ್ಷೆಗೆ ಚಾಲನೆ ನೀಡಲಾಗಿತ್ತು. ರೈತರು ತಾವಾಗಿಯೇ ತಮ್ಮ ಮೊಬೈಲ್ ಫೋನ್‌ನಲ್ಲೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗಿತ್ತು. ಕೆಲವೇ ದಿನಗಳಲ್ಲಿ ಅಂದರೆ ಮಂಗಳವಾರ ಬೆಳಿಗ್ಗೆ ವೇಳೆಗೆ 3.90 ಲಕ್ಷ ಕೃಷಿಕರು (ಶೇ 26.24ರಷ್ಟು) ಮಾಹಿತಿ ದಾಖಲಿಸಿದ್ದಾರೆ. ತಾವು ಬೆಳೆದಿರುವ ಬೆಳೆಗಳ ಕುರಿತ ಸಚಿತ್ರ ವರದಿಯನ್ನು ನೇರವಾಗಿ ಸಂಬಂಧಿಸಿದ ತಂತ್ರಾಂಶಕ್ಕೆ ರವಾನಿಸಿದ್ದಾರೆ. ಕೃಷಿ ಇಲಾಖೆಯವರು ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಸಮೀಕ್ಷೆಯ ಮಾಹಿತಿ ನೀಡುತ್ತಿದ್ದಾರೆ.
ರಾಜ್ಯದಲ್ಲೇ ಹೆಚ್ಚು: ‘ ಜಿಲ್ಲೆಯಲ್ಲಿ 1,182 ಹಳ್ಳಿಗಳಲ್ಲೂ ರೈತರಿಂದಲೇ ಬೆಳೆ ಸಮೀಕ್ಷೆ ಹಿಸ್ಸಾವಾರು (ಜಮೀನು) ನಡೆದಿದೆ. ಈ ವಿಷಯದಲ್ಲಿ ಬೆಳಗಾವಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ನಮ್ಮಲ್ಲಿ ಕೃಷಿ ಪ್ರದೇಶವೂ ಜಾಸ್ತಿ ಇದೆ. ಇದು ರೈತರಿಗೆ ಮಹತ್ವದ್ದಾಗ ಮತ್ತು ಮೂಲ ಹಾಗೂ ಅತ್ಯಂತ ಮೌಲ್ಯಯುತ ಮಾಹಿತಿ ದಾಖಲಿಸುವ ಕಾರ್ಯಕ್ರಮವಾಗಿದೆ. ಹಿಂದಿನ ವರ್ಷಗಳಲ್ಲಿ, ಮಾಹಿತಿ ಸಮರ್ಪಕವಾಗಿ ದಾಖಲಾಗಿಲ್ಲ ಎನ್ನುವ ಆರೋಪಗಳು ಅಥವಾ ಅಸಮಾಧಾನ ವ್ಯಕ್ತವಾಗುತ್ತಿದ್ದವು. ಹೀಗಾಗಿ, ಈ ಬಾರಿ ಅವರಿಗೇ ಸರ್ಕಾರ ಅವಕಾಶ ನೀಡಿದೆ. ಇದರಿಂದಾಗಿ ತಪ್ಪು ಮಾಹಿತಿ ಸಂಗ್ರಹವಾಗುವುದು ಕಡಿಮೆಯಾಗುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಿಂದಿನ ಮುಂಗಾರಿನಲ್ಲಿ 1,572 ಖಾಸಗಿ ನಿವಾಸಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಈ ಬಾರಿ ಅವರನ್ನು ರೈತರಿಗೆ ತರಬೇತಿ ಕೊಡಲು ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಏನಿದರ ಮಹತ್ವ?:
‘ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ಮಾಹಿತಿಯನ್ನು ನಿಗದಿತ ತಂತ್ರಾಂಶದಲ್ಲಿ ದಾಖಲಿಸಬೇಕಾಗಿತ್ತು. ಈಗ ರೈತರು ನೀಡುವ ಮಾಹಿತಿ ‘ಭೂಮಿ’ ತಂತ್ರಾಂಶಕ್ಕೆ ನೇರವಾಗಿ ಹೋಗಿ, ಪಹಣಿಯಲ್ಲಿ ತಾನೇ ದಾಖಲಾಗುತ್ತದೆ. ಇದರಿಂದ, ರೈತರು ಪಹಣಿಪತ್ರದಲ್ಲಿ ತಪ್ಪಾಗಿದೆ ಎಂದು ದೂರುವಂತಹ ಪ್ರಮೇಯಗಳು ಎದುರಾಗುವುದಿಲ್ಲ’ ಎನ್ನುತ್ತಾರೆ ಅವರು.
ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಸಾಂಖ್ಯಿಕ ಇಲಾಖೆಯ ಜಂಟಿಯಾಗಿ ಸಮೀಕ್ಷೆ ಪ್ರಕ್ರಿಯೆ ನಡೆದಿದೆ. ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ತಾಲ್ಲೂಕು ಆಡಳಿತ ಪರಿಶೀಲಿಸಲಿದೆ. ಸಾಂಖ್ಯಿಕ ಇಲಾಖೆಯಿಂದ ನಡೆಸಲಾಗುವ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಬೆಳೆ ವಿಸ್ತೀರ್ಣ ಎಣಿಕಾ ಕಾರ್ಯದಲ್ಲಿ ಈ ಮಾಹಿತಿ ಬಳಸಲಾಗುವುದು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ತಯಾರಿಸಲು ಹಾಗೂ ಬೆಳೆ ವಿಮೆ ಯೋಜನೆಯಡಿ ರೈತರ ತಾಕುವಾರು ಬೆಳೆ ಪರಿಶೀಲಿಸಲು ಇದನ್ನು ಆಧರಿಸಲಾಗುವುದು. ಆರ್‌ಟಿಸಿಯಲ್ಲಿ ಬೆಳೆ ದಾಖಲಿಸುವಾಗ ಈ ಮಾಹಿತಿ ಪರಿಗಣಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಸಮೀಕ್ಷೆಯ ಮಾಹಿತಿ
ತಾಲ್ಲೂಕು; ಜಮೀನುಗಳ ಸಂಖ್ಯೆ; ಸಮೀಕ್ಷೆಯಾದ ಜಮೀನು
ಗೋಕಾಕ; 96,061; 20,963
ಸವದತ್ತಿ; 1,00,83; 40,341
ಮೂಡಲಗಿ; 72,101; 15,053
ಅಥಣಿ; 1,39,499; 38,970
ರಾಮದುರ್ಗ; 80,612; 36,378
ಕಿತ್ತೂರ; 44,151; 21,530
ಚಿಕ್ಕೋಡಿ; 1,48,575; 29,388
ಬೆಳಗಾವಿ; 1,64,187; 23,034
ಕಾಗವಾಡ; 52,687; 16,181
ನಿಪ್ಪಾಣಿ; 1,07,971; 21,518
ರಾಯಬಾಗ; 1,27,852; 40,504
ಬೈಲಹೊಂಗಲ; 79,763; 33,933
ಹುಕ್ಕೇರಿ; 1,58,801; 30,804
ಖಾನಾಪುರ; 1,10,223; 20,565
ಒಟ್ಟು; 14,82,566; 3,88,982
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.