ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆಗೆ ‘ಕ್ರಿಪ್ಟೊ ಕರೆನ್ಸಿ’ ಬಂಡವಾಳ; ರಾಜ್ಯದಾದ್ಯಂತ ದೂರುಗಳ ಸಂಖ್ಯೆ ಹೆಚ್ಚಳ

‘ಬಿಟ್‌ ಕಾಯಿನ್’ ಹಗರಣ ಬೆಳಕಿಗೆ ಬಂದ ಬಳಿಕ ಜನರಲ್ಲಿ ಕುತೂಹಲ
Last Updated 21 ನವೆಂಬರ್ 2021, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಟ್‌ ಕಾಯಿನ್’ ಹಗರಣ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದಂತೆ, ‘ಕ್ರಿಪ್ಟೊ ಕರೆನ್ಸಿ’ ಮೇಲೆ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸಬಹುದೆಂಬ ಆಸೆಗೆ ಬಿದ್ದು ‘ಕ್ರಿಪ್ಟೊ ಕರೆನ್ಸಿ’ ಮೇಲೆ ಹೂಡಿಕೆ ಮಾಡುತ್ತಿರುವ ಸಾಕಷ್ಟು ಮಂದಿ, ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಚಾಲ್ತಿಯಲ್ಲಿರುವ ನೋಟುಗಳಿಗೆ ಪರ್ಯಾಯವಾಗಿ ವ್ಯವಹರಿಸಲು ಡಿಜಿಟಲ್‌ ರೂಪದಲ್ಲಿ ‘ಕ್ರಿಪ್ಟೊ ಕರೆನ್ಸಿ’ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಕೆಲ ಮಧ್ಯವರ್ತಿ ಏಜೆನ್ಸಿಗಳು, ಕಮಿಷನ್ ಆಧಾರದಲ್ಲಿ ಕ್ರಿಪ್ಟೊ ಕರೆನ್ಸಿ ಖರೀದಿ ಹಾಗೂ ಮಾರಾಟ ವ್ಯವಹಾರ ಮಾಡುತ್ತಿವೆ. ಜೊತೆಯಲ್ಲೇ ಕೆಲ ವಂಚಕ ಕಂ‍ಪನಿಗಳು, ಕ್ರಿಪ್ಟೊ ಕರೆನ್ಸಿಯನ್ನೇ ಬಂಡವಾಳ ಮಾಡಿಕೊಂಡು ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

‘ಕ್ರಿಪ್ಟೊ ಕರೆನ್ಸಿ’ಗಳಲ್ಲಿ ಒಂದಾದ ‘ಬಿಟ್ ಕಾಯಿನ್’ ಹಗರಣದ ಸೂತ್ರಧಾರ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧನದ ನಂತರ ಜನರಲ್ಲೂ ಕುತೂಹಲ ಮೂಡಿದೆ. ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿರುವ ಕೆಲವರು, ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆ ಪೈಕಿ ಅನೇಕರು, ವಂಚಕ ಕಂಪನಿಗಳಿಂದ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಗಳ ಮೆಟ್ಟಿಲೇರಿದ್ದಾರೆ.

‘ಬಹುತೇಕ ಜನರಿಗೆ ಕ್ರಿಪ್ಟೊ ಕರೆನ್ಸಿ ವ್ಯವಹಾರದ ಬಗ್ಗೆ ಮಾಹಿತಿ ಇಲ್ಲ. ಅಂತರ್ಜಾಲದ ಮಾಹಿತಿ ನಂಬಿ ಕಂಪನಿಗಳ ಪ್ರತಿನಿಧಿಗಳನ್ನು ಸಂಪರ್ಕಿಸುತ್ತಿರುವ ಸಾರ್ವಜನಿಕರು, ವೈಯಕ್ತಿಕ ಮಾಹಿತಿಗಳನ್ನು ಕೊಟ್ಟು ವಂಚನೆಗೀಡಾಗುತ್ತಿದ್ದಾರೆ. ಈ ಬಗ್ಗೆ ಠಾಣೆಗಳಲ್ಲಿ ನಿತ್ಯವೂ ಪ್ರಕರಣಗಳು ದಾಖಲಾಗುತ್ತಿವೆ’ ಎಂದು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

₹ 5.70 ಲಕ್ಷ ಕಳೆದುಕೊಂಡರು: ಬೆಂಗಳೂರು ದಕ್ಷಿಣ ಸೈಬರ್ ಕ್ರೈಂ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ನಾಗೇಂದ್ರ ಎಂಬುವರು, ಬಿಟ್ ಕಾಯಿನ್ ಮೇಲೆ ₹ 5.70 ಲಕ್ಷ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಠಾಣೆಗೆ ದೂರು ನೀಡಿದ್ದಾರೆ.

‘ಅಂತರ್ಜಾಲ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ನಾಗೇಂದ್ರ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ಬಿಟ್‌ ಕಾಯಿನ್‌ ಟ್ರೇಡಿಂಗ್ ಮಾಡುತ್ತಿರುವುದಾಗಿ ಹೇಳಿದ್ದರು. ‘ಹಣ ಹೂಡಿಕೆ ಮಾಡಿ ಬಿಟ್‌ ಕಾಯಿನ್ ಖರೀದಿಸಿ. ನೀವು ಯಾವಾಗ ಬೇಕಾದರೂ ಹೂಡಿಕೆಯನ್ನು ವಾಪಸು ಪಡೆಯಬಹುದು. ಮಾರುಕಟ್ಟೆ ದರವನ್ನೇ ವಾಪಸು ನೀಡಲಾಗುವುದು’ ಎಂದಿದ್ದರು. ಅದನ್ನು ನಂಬಿದ್ದ ನಾಗೇಂದ್ರ, ಹಂತ ಹಂತವಾಗಿ ₹ 5.70 ಲಕ್ಷ ಪಾವತಿಸಿದ್ದರು. ಬಿಟ್ ಕಾಯಿನ್ ನೀಡದೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ
ಮೂಲಗಳು ತಿಳಿಸಿವೆ.

₹20.80 ಲಕ್ಷ ವಂಚನೆ: ಇಂದಿರಾನಗರದ ನಿವಾಸಿ ರಾಕೇಶ್ ಎಂಬುವರು ಸಹ ಕ್ರಿಪ್ಟೊ ಕರೆನ್ಸಿ ನಂಬಿ ₹ 20.80 ಲಕ್ಷ ಕಳೆದುಕೊಂಡಿದ್ದಾರೆ.

‘ಟೆಲಿಗ್ರಾಂ ಆ್ಯಪ್‌ ಮೂಲಕ ರಾಕೇಶ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ಕಡಿಮೆ ದರದಲ್ಲಿ ಕ್ರಿಪ್ಟೊ ಕರೆನ್ಸಿ ಮಾರುವುದಾಗಿ ಹೇಳಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಕರೆನ್ಸಿ ಮರು ಮಾರಾಟ ವೇಳೆ ಮಾರುಕಟ್ಟೆ ದರವನ್ನೇ ಪಾವತಿಸುವುದಾಗಿ ಹೇಳಿದ್ದ ಆರೋಪಿಗಳು, ಹಣವನ್ನೂ ವಾಪಸು ನೀಡದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಟ್ಟಿಗೇನಹಳ್ಳಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 24 ವರ್ಷದ ವಿದ್ಯಾರ್ಥಿ ಅವಿಷೇಕ್ ಎಂಬುವರಿಗೂ ಕ್ರಿಪ್ಟೊ ಕರೆನ್ಸಿ ಹೆಸರಿನಲ್ಲಿ ₹ 1.07 ಲಕ್ಷ ವಂಚನೆಯಾಗಿದೆ. ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹೋಟೆಲ್‌ ಮೇಲೆ ದಾಳಿ ಮಾಡಿದ್ದ ಸಿಸಿಬಿ

‘ಕ್ರಿಪ್ಟೊ ಕರೆನ್ಸಿ’ ರೂಪದಲ್ಲಿ ಹಣ ಹೂಡಿಕೆ ಮಾಡಲು ಪ್ರಚೋದಿಸಲು ಕಾರ್ಯಕ್ರಮ ಆಯೋಜಿಸಿದ್ದ ಯಲಹಂಕದ ಹೋಟೆಲೊಂದರ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ದಾಳಿ ಮಾಡಿದ್ದರು. 'ಪೋಮ್ ಎಕ್ಸ್' ಕಂಪನಿಯ ರಾಘವೇಂದ್ರ, ನಾಗರಾಜು ಹಾಗೂ ಶಿವಮೂರ್ತಿ ಎಂಬುವರನ್ನು ಬಂಧಿಸಿದ್ದರು.

'ಒಂದು ಕ್ರಿಪ್ಟೊ‌ ಕರೆನ್ಸಿ ಮೇಲೆ 100 ಡಾಲರ್ ಹೂಡಿಕೆ ಮಾಡಿದರೆ ಶೇ 50 ರಷ್ಟು ಲಾಭ, 300 ಡಾಲರ್ ಹೂಡಿಕೆ ಮಾಡಿದರೆ ಶೇ 11, 500 ಡಾಲರ್ ಹೂಡಿದರೆ ಶೇ 12, 1,000 ಡಾಲರ್ ಹೂಡಿಕೆ ಮಾಡಿದರೆ ಶೇ 13, 5,000 ಸಾವಿರ ಡಾಲರ್ ಹೂಡಿಕೆ ಮಾಡಿದರೆ ಶೇ 14, ಹಾಗೂ 10,000 ಡಾಲರ್ ಹೂಡಿಕೆ ಮಾಡಿದರೆ ಶೇ 15ರಷ್ಟು ಲಾಭ ಕೊಡುವುದಾಗಿ ಜನರಿಗೆ ಆಮಿಷವೊಡ್ಡಿದ್ದರು' ಎಂದೂ ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕ್ರಿಪ್ಟೊ ಕರೆನ್ಸಿ’ ಬಗೆಗಳು

ಬಿಟ್‌ ಕಾಯಿನ್ (ಬಿಟಿಸಿ), ಎಥೆರಿಯಮ್ (ಇಟಿಎಚ್‌), ಬಿನಾನ್ಸ್ ಕಾಯಿನ್ (ಬಿಎನ್‌ಬಿ), ಕಾರ್ಡಾನೊ (ಎಡಿಎ), ಸೊಲಾನಾ (ಎಸ್‌ಒಎಲ್‌), ಎಕ್ಸ್‌ಆರ್‌ಪಿ, ಪೊಲ್ಕಡಾಟ್ (ಡಿಒಟಿ), ಯುಎಸ್‌ಡಿ ಕಾಯಿನ್ (ಯುಎಸ್‌ಡಿಸಿ), ಶಿಬಾ ಇನು (ಎಸ್‌ಎಚ್‌ಐಬಿ), ಟೆರ‍್ರಾ (ಎನ್‌ಯುಎನ್‌ಎ)

‘ಕ್ರಿಪ್ಟೊ ಕರೆನ್ಸಿ’ ಸಂದೇಶ ನಂಬುವ ಮುನ್ನ ಎಚ್ಚರ

‘ಕ್ರಿಪ್ಟೊ ಕರೆನ್ಸಿ’ ವ್ಯವಹಾರದ ಬಗ್ಗೆ ಇ–ಮೇಲ್, ಟೆಲಿಗ್ರಾಂ, ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ ಮೆಸೆಂಜರ್ ಮೂಲಕ ಸಂದೇಶ ಕಳುಹಿಸುವ ವಂಚಕರು, ಜನರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದಾರೆ. ಇಂಥ ಸಂದೇಶಗಳನ್ನು ನಂಬುವ ಮುನ್ನ ಜನರು ಎಚ್ಚರಿಕೆ ವಹಿಸಬೇಕು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT