ಮಂಗಳವಾರ, ಜೂನ್ 28, 2022
25 °C

ಭಟ್ಟಂಗಿಗಳಿಂದಾಗಿ ವಿಜಯನಗರ ಸಾಮ್ರಾಜ್ಯ ಪತನ: ಕುತೂಹಲ ಮೂಡಿಸಿದ ಸಿ.ಟಿ. ರವಿ ಕಥೆ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ಸಂಭವಿಸುತ್ತಿರುವ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸಾಮಾಜಿಕ ತಾಣದಲ್ಲಿ 'ಅಳಿಯ ರಾಮರಾಯ'ರ ಕಥೆಯೊಂದನ್ನು ಪೋಸ್ಟ್‌ ಮಾಡಿದ್ದು ಕುತೂಹಲ ಕೆರಳಿಸಿದೆ.

ಭಟ್ಟಂಗಿಗಳನ್ನು ನೇಮಿಸಿಕೊಂಡು ಹೇಗೆ ರಾಮರಾಯ ತನ್ನ ಸಾಮ್ರಾಜ್ಯವನ್ನು ಕಳೆದುಕೊಂಡ ಎಂಬುದನ್ನು ವಿಸ್ತೃತವಾಗಿ ವಿವರಿಸಿರುವ ಕಥೆಯಲ್ಲಿ, 'ಅನುಮಾನಂ ಪೆದ್ದ ರೋಗಂ'. ರಾಮರಾಯನ ದೊಡ್ಡ ಸಮಸ್ಯೆಯಿದು. ಎಲ್ಲರ ಮೇಲೆಯೂ ಅನುಮಾನ ಪಡುತ್ತಿದ್ದ ಎಂದು ಯಾರನ್ನು ಉದ್ದೇಶಿಸಿ ಉಲ್ಲೇಖಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಆಯಾಕಟ್ಟಿನಲ್ಲಿದ್ದ ಸಾಮ್ರಾಜ್ಯ ನಿಷ್ಠರನ್ನು ಒಬ್ಬೊಬ್ಬರಾಗಿ ಹೊರನೂಕಿ, ಆ ಜಾಗದಲ್ಲಿ ತನ್ನ ಹೊಗಳು ಭಟ್ಟರನ್ನು ನೇಮಕ ಮಾಡಲು ತೊಡಗಿದ ಪರಿಣಾಮವಿದು ಎಂಬುದನ್ನು ಸಿ.ಟಿ. ರವಿ ಸೂಚ್ಯವಾಗಿ ಹೇಳಿದ್ದಾರೆ.

ಪ್ರಜೆಗಳನ್ನು ಬಲಿಕೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯವೆಷ್ಟು ದಿನ ಉಳಿದೀತು? ಎಂಬ ಪ್ರಶ್ನೆಯು ಯಾರನ್ನು ಉದ್ದೇಶಿಸಿ, ಯಾವ ಸಾಮ್ರಾಜ್ಯವನ್ನು ಉದ್ದೇಶಿಸಿ ಹೇಳಿದ್ದಾಗಿದೆ ಎಂಬ ಬಗ್ಗೆ ಭಾರಿ ಕುತೂಹಲ ವ್ಯಕ್ತವಾಗಿದೆ.

ಸಿ.ಟಿ. ರವಿ ಅವರು ಫೇಸ್ಬುಕ್‌ನಲ್ಲಿ ಬರೆದುಕೊಂಡಿರುವ ಕಥೆಯಿದು:

ನಿನ್ನೆ ರಾತ್ರಿ ಮರೆಯಲಾಗದ ಮಹಾಸಾಮ್ರಾಜ್ಯ ವಿಜಯನಗರದ ಏಳುಬೀಳುಗಳ ಕಥೆಯನ್ನು ಓದುತ್ತಿದ್ದೆ. ಆಗ ನನ್ನ ನೆನಪಿನಂಗಳದಲ್ಲಿ ವಿ.ನಾಗರಾಜ್ ಅವರು ಹೇಳಿದ "ಅಳಿಯ ರಾಮರಾಯ"ರ ಕಥೆ ನೆನಪಾಯಿತು ‌.

ಹದಿಮೂರನೆಯ ಶತಮಾನದಲ್ಲಿ ಭಾರತದ ದಕ್ಷಿಣ ಭಾಗ ಇತಿಹಾಸದಲ್ಲಿ ಕಂಡು ಕೇಳರಿಯದ ಭಯಾನಕ ದಾಳಿಯನ್ನು ಎದುರಿಸಬೇಕಾಯಿತು. ಮಲ್ಲಿಕಾಫರ್ ಎಂಬ ಅನಾಗರೀಕ ದಾಳಿಕೋರನ ನೇತೃತ್ವದಲ್ಲಿ ಖಿಲ್ಜಿಯ ಸೈನ್ಯ ದಕ್ಷಿಣದ ನಾಲ್ಕು ಪ್ರಮುಖ ಸಾಮ್ರಾಜ್ಯಗಳನ್ನು ಇತಿಹಾಸ ಪುಟದಿಂದ ಅಳಿಸಿ ಹಾಕಿತ್ತು. ದೇವಗಿರಿಯ ಯಾದವರು, ವಾರಂಗಲ್ಲಿನ ಕಾಕತೀಯರು, ದ್ವಾರಸಮುದ್ರದ ಹೊಯ್ಸಳರು ಹಾಗೂ ಮಧುರೆಯ ಪಾಂಡ್ಯರು ಆಳುತ್ತಿದ್ದ ಸಮೃದ್ಧ ರಾಜ್ಯಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಇತಿಹಾಸಕ್ಕೆ ತಳ್ಳಲ್ಪಟ್ಟರು. ಕನ್ನಡ ನಾಡಿನ ಹೆಮ್ಮೆಯ ಅರಸು ಮನೆತನ ಹೊಯ್ಸಳರ ರಾಜಧಾನಿ ದ್ವಾರಸಮುದ್ರ ಅನಾಗರೀಕರ ದಾಳಿಗೆ ತುತ್ತಾಗಿ ಹಳೆಬೀಡಾಯಿತು.

ಮಾತೆಯರ ಆಕ್ರಂದನ, ಮನೆ ಮಕ್ಕಳ ಮಾರಣಹೋಮ, ಅತ್ಯಾಚಾರ, ದೇವಸ್ಥಾನಗಳ ಲೂಟಿ, ಗೋಹತ್ಯೆ, ಖಡ್ಗದ ಬಾಯಿಯ ಮತಾಂತರ ಎಗ್ಗಿಲ್ಲದೆ ಸಾಗಿತ್ತು. ಸಹಸ್ರಾರು ವರ್ಷಗಳ ಕಲೆ, ಸಂಸ್ಕೃತಿ, ಪರಂಪರೆ ನಾಶದ ಅಂಚಿಗೆ ತಳ್ಳಲ್ಪಟ್ಟಿತು. "ಸರ್ವೇ ಜನ ಸುಖಿನೋ ಭವಂತು" ಎಂದು ಪ್ರಾರ್ಥಿಸುತ್ತಿದ್ದ ಸಂಸ್ಕೃತಿಯೊಂದು ವಿಗ್ರಹ ಭಂಜಕರಿಂದ ಮೂಲ ದೇವರುಗಳನ್ನು ಉಳಿಸಿಕೊಳ್ಳಲು, ದೇಗುಲದ ಮೂರ್ತಿಗಳನ್ನು ಬಚ್ಚಿಡುತ್ತಾ, ಸಂಕಟಪಡುತ್ತಿದ್ದರು. ಮುಂದೆ ಏನು ಗತಿ ದೇವರೇ ಎಂದು ಮೊರೆ ಇಡುತ್ತಿದ್ದರು. ದಾಳಿಗೆಂದು ಬಂದವರು ಕೇವಲ ಸಾಮ್ರಾಜ್ಯ ಆಕಾಂಕ್ಷಿಗಳಾಗಿರಲಿಲ್ಲ, ಸಂಪತ್ತಿನ ಸೂರೆ ಒಂದೇ ಅವರ ಗುರಿಯಾಗಿರಲ್ಲ. ಸಂಪತ್ತಿನ ಸಂಗ್ರಹದೊಂದಿಗೆ, ಖಡ್ಗದ ಮೊನೆಯನ್ನು ತೋರಿಸಿ ಮತಾಂತರಿಸುವ, ಭಾರತದ ಸಂಸ್ಕೃತಿಯನ್ನು ನಾಶಗೊಳಿಸುವ ಹುನ್ನಾರವೂ ಇವರುಗಳದ್ದಾಗಿತ್ತು.

ಇಂಥಹ ಸಂಕಷ್ಟದ ಕಾಲಘಟ್ಟದಲ್ಲಿ ಧರ್ಮ ಸಂಪ್ರದಾಯ, ಪರಂಪರೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಬಲಿಷ್ಠವಾದ ಸಾಮ್ರಾಜ್ಯವೊಂದರ ಅಗತ್ಯತೆಯ ಇತ್ತು. ಈ ಸಂದರ್ಭದಲ್ಲಿ ಜನನವಾದ ಸಾಮ್ರಾಜ್ಯ ವಿಜಯನಗರ. ಮಹರ್ಷಿ ವಿದ್ಯಾರಣ್ಯರು ಅಳಿದುಳಿದ ಸಾಮಂತರೆನ್ನೆಲ್ಲಾ ಒಟ್ಟುಗೂಡಿಸಿ, ಸನಾತನ ಧರ್ಮದ ಸಂರಕ್ಷಣೆಯ ಸಂಕಲ್ಪ ಮಾಡಿಸಿ, ಹರಿಹರ ಬುಕ್ಕರ ನಾಯಕತ್ವದಲ್ಲಿ ಸ್ಥಾಪನೆಯಾದ ಮಹಾಸಾಮ್ರಾಜ್ಯ "ವಿಜಯನಗರ ಸಾಮ್ರಾಜ್ಯ".

ಧರ್ಮಕ್ಕೆ, ಸಮಾಜಕ್ಕೆ ಮತ್ತು ಸಾಮ್ರಾಜ್ಯಕ್ಕೆ ನಿಷ್ಠರಾದ ಗಂಡುಗಲಿಗಳು ದಕ್ಷಿಣದ ಆಯಕಟ್ಟಿನ ಜಾಗದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದರು. ಕಳೆದುಹೋದ ಭೂಭಾಗಗಳನ್ನು ಜಯಿಸುತ್ತಾ ಸಾಮ್ರಾಜ್ಯವನ್ನು ವಿಸ್ತರಿಸಿದರು. ಅನಾಗರೀಕ ವಿಗ್ರಹ ಭಂಜಕರ ದಾಳಿಯಿಂದ ನಾಶವಾದ ದೇವಾಲಯಗಳ ಪುನರುತ್ಥಾನ ಕಾರ್ಯ ಮಾಡಿದರು. ಅಣೆಕಟ್ಟು, ಕೆರೆಕಟ್ಟೆ, ಕಾಲುವೆಗಳ ಪುನರ್ನಿರ್ಮಾಣ ಮಾಡುವ ಮೂಲಕ ಕೃಷಿಯ ಅಭಿವೃದ್ಧಿಗೆ ಸೋಪಾನ ಹಾಕಿದರು. ಇದರೊಂದಿಗೆ ಕಲೆ, ಸಾಹಿತ್ಯ, ಕೌಶಲ್ಯದ ಅಭಿವೃದ್ಧಿ ಪ್ರೋತ್ಸಾಹ ನೀಡಿದರು. ವ್ಯಾಪಾರ, ವಾಣಿಜ್ಯೋದ್ಯಮದ ವಿಸ್ತರಣೆ ನಡೆಸಿದರು. ಇಂಥಹ ಬಲಿಷ್ಠ ಅಡಿಪಾಯದ ಮೇಲೆ ನಿಂತಂತಹ ಸಾಮ್ರಾಜ್ಯದಲ್ಲಿ ಅಷ್ಟೈಶ್ವರ್ಯ ಲಕ್ಷ್ಮಿಯರು, ವಿದ್ಯಾಧಿದೇವತೆ ಸರಸ್ವತಿ ವಿಜಯ ನಗರ ಸಾಮ್ರಾಜ್ಯದಲ್ಲಿಯೇ ನೆಲೆನಿಂತರು.

ಆಹಾ ಅದೆಂಥ ವೈಭವ, ದೇಶ-ವಿದೇಶಗಳ ರಾಯಭಾರಿಗಳು ಬಂದು ವೈಭವವನ್ನು ಹಾಡಿಹೊಗಳಿದರು. ಇಂಥಹ ವೈಭವದ ನಾಡಿನ ಮೇಲೆ ದುರುಳರ ದುಷ್ಟ ಕಣ್ಣು ಬೀಳದೆ ಇದ್ದೀತೆ? ಹರಿಹರ ಬುಕ್ಕರಿಂದ ಶ್ರೀ ಕೃಷ್ಣದೇವರಾಯನ ಕಾಲದವರೆಗೂ ಸಾಮ್ರಾಜ್ಯನಿಷ್ಠರದ್ದೇ ಕಾರು-ಬಾರು. ತಿಮ್ಮರಸರಂತಹ ನಿಷ್ಠರು ಸಾಮ್ರಾಜ್ಯವನ್ನು ಜತನದಿಂದ ಕಾಪಾಡುತ್ತಿದ್ದರು.

ಹೀಗೆ ಅಧಿಕಾರ ಅಳಿಯ ರಾಮರಾಯನ ಕೈಗೆ ಬಂತು. ಆತನೂ ಮಹಾಸಾಹಸಿ, ಸಾಹಸದಿಂದ ಹಲವು ಯುದ್ಧಗಳನ್ನು ಗೆದ್ದಂತಹ ಅಪ್ರತಿಮ ಸಾಹಸಿ, ಕೂಟ ನೀತಿಯಲ್ಲಿ ನಿಪುಣ. ಆದರೆ ಆತನ ದೊಡ್ಡ ಸಮಸ್ಯೆ ಎಂದರೆ ಎಲ್ಲರ ಮೇಲೂ ಅನುಮಾನ. "ಅನುಮಾನಂ ಪೆದ್ದ ರೋಗಂ" ಎಂಬ ಮಾತಿನಂತೆ ಆತ ಆಯಕಟ್ಟಿನ ಜಾಗಗಳಲ್ಲಿ ಇದ್ದ ಸಾಮ್ರಾಜ್ಯ ನಿಷ್ಠರನ್ನು ಒಬ್ಬೊಬ್ಬರಾಗಿ ಹೊರನೂಕಿ, ಆ ಜಾಗದಲ್ಲಿ ತನ್ನ ಹೊಗಳು ಭಟ್ಟರನ್ನು ನೇಮಕ ಮಾಡಲು ತೊಡಗಿದೆ. ಸುತ್ತಡೆಯಲ್ಲಿ ಹೊಗಳು ಭಟ್ಟರದ್ದೇ ಕಾರುಬಾರು, ಆಯಕಟ್ಟಿನ ಜಾಗದಲ್ಲಿ ಇರಬೇಕಾದವರು ರಾಜಧಾನಿಯಲ್ಲಿ ಸ್ಥಿರವಾದರು. ಸಾಮ್ರಾಜ್ಯದ ನೈಜ ವಿಚಾರಗಳನ್ನು ರಾಜನಿಗೆ ತಲುಪಿಸುವವರೆಲ್ಲ ಮೂಲೆಗುಂಪಾದರು, ಅವರದ್ದು ಅರಣ್ಯರೋದನವಾಯಿತು. ಭಟ್ಟಂಗಿಗಳು ಅಳಿಯ ರಾಮರಾಯ ಕೇಳಬಯಸುವ ಮಾತುಗಳನ್ನಷ್ಟೇ ಹೇಳಲು ಆರಂಭಿಸಿದರು, ನೈಜ ಸಂಗತಿಗಳನ್ನು ಮರೆಮಾಚಿದರು.

ನಂಬಬೇಕಾದವರನ್ನು ನಂಬದ ಅಳಿಯ ರಾಮರಾಯನ ವೈಭೋಗದ ಜೀವನ, ಸ್ವಾರ್ಥ ಕೇಂದ್ರಿತ ಅಧಿಕಾರ ಜನಮಾನಸದಲ್ಲಿ ಬಿತ್ತಿದ ಅಸಹನೆಯ ಬೀಜ, ನಿಧಾನಕ್ಕೆ ಮರವಾಗಿ ಬೆಳೆಯತೊಡಗಿತು. ಇದೆ ಸಮಯಕ್ಕೆ ಬಿಜಾಪುರದ ಆದಿಲ್ ಶಾಹಿಗಳ ನೇತೃತ್ವದಲ್ಲಿ ವಿರೋಧಿಗಳೆಲ್ಲ ಒಗ್ಗೂಡಿದರು. ತಪ್ಪು ಯುದ್ಧನೀತಿ, ಮೈಮರೆವು, ವೃದ್ಧಾಪ್ಯ, ತತ್ವ ಹೀನ ರಾಜಕಾರಣ ಮಾಡಿ ಸಾಮ್ರಾಜ್ಯ ವಿರೋಧಿಗಳನ್ನೆಲ್ಲಾ ಆಯಕಟ್ಟಿನ ಜಾಗದಲ್ಲಿ ಕೂರಿಸಿದ ಫಲ, ಅವರೆಲ್ಲ ಯುದ್ಧಕಾಲದಲ್ಲಿ ಕೈ ಕೊಟ್ಟರು. ಆದಿಲ್ ಶಾಹಿಗಳ ಸೈನ್ಯದ ಮೂರು ಪಟ್ಟು ದೊಡ್ಡ ಸೈನ್ಯವಿದ್ದೂ ತಾಳಿಕೋಟೆ, ರಕ್ಕಸತಂಗಡಿಯ ಯುದ್ಧದಲ್ಲಿ ವಿಜಯನಗರ ಅರಸು ಸೋಲಬೇಕಾಯಿತು. ದಿಕ್ಕೆಟ್ಟ ಅಳಿಯ ರಾಮರಾಯನನ್ನು, ಮೋಸದಿಂದ ವಧಿಸಿ, ಭರ್ಜಿಯಲ್ಲಿ ರುಂಡವನ್ನು ಎತ್ತಿ ಹಿಡಿದಾಕ್ಷಣ ವಿಜಯನಗರ ಸೇನೆ ದಿಕ್ಕೆಟ್ಟು ಓಡಿತ್ತು. ಮುನ್ನಡೆಸುವ ಸಾಮರ್ಥ್ಯವಿರುವ ನಾಯಕನಿಲ್ಲದೆ ಸೈನ್ಯ ದಿಕ್ಕಾಪಾಲಾಗಿತ್ತು. ಆ ಕ್ಷಣದಲ್ಲಿ ಈ ಭಟ್ಟಂಗಿಗಳ ಬದಲಾಗಿ ಯಾರಾದರೂ ಸಾಮ್ರಾಜ್ಯ ನಿಷ್ಠನೊಬ್ಬ ಸೈನ್ಯವನ್ನು ಮುನ್ನಡೆಸಿದ್ದರೆ ಇತಿಹಾಸದ ಗತಿಯೇ ಬದಲಾಗುತ್ತಿತ್ತು. ಏನು ಮಾಡುವುದು ವ್ಯಕ್ತಿಗತ ಲಾಭಕ್ಕೆ ಆಯಕಟ್ಟಿನ ಸ್ಥಳದಲ್ಲಿದ್ದವರೆಲ್ಲ ರಾಮರಾಯನ ಸಾವಿನ ನಂತರ ತಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಕೈಗೆ ಸಿಕ್ಕಿದ್ದನ್ನು ತುಂಬಿಸಿಕೊಂಡು ಹೊರಟರು. ಅರಾಜಕತೆ ತಾಂಡವವಾಡಿ, ಆರು ತಿಂಗಳು ಲೂಟಿ ಮಾಡಿದ ಅಸಹಿಷ್ಣು ರಕ್ಕಸರು ಸಿಕ್ಕಿದ್ದಕ್ಕೆಲ್ಲಾ ಕೊಳ್ಳಿ ಇಟ್ಟರು.

ಇತಿಹಾಸದಿಂದ ಪಾಠ ಕಲಿಯಬೇಕಾದ ನಾವು ಎಷ್ಟು ಕಲಿತಿದ್ದೇವೆ? ಪ್ರಜೆಗಳನ್ನು ಬಲಿಕೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯವೆಷ್ಟು ದಿನ ಉಳಿದೀತು? ಮರೆಯಲಾಗದ ಮಹಾಸಾಮ್ರಾಜ್ಯದ ಪತನ ನಮಗೆ ಪಾಠ ಕಲಿಸಲಾರದೆ?

"ಹೇ ವಿರೂಪಾಕ್ಷ ನೀನೇ ರಕ್ಷಿಸು ಅನವರತ".

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು