ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧ ಮಸೂದೆಗಾಗಿ ಡಿ.15ರಂದು ವಿಶೇಷ ಅಧಿವೇಶನಕ್ಕೆ ಸರ್ಕಾರದ ತೀರ್ಮಾನ

Last Updated 11 ಡಿಸೆಂಬರ್ 2020, 14:25 IST
ಅಕ್ಷರ ಗಾತ್ರ

ಬೆಂಗಳೂರು:ಗೋಹತ್ಯೆ ನಿಷೇಧ ಮಸೂದೆ ಅಂಗೀಕರಿಸಲು ಡಿ.15 ರಂದು ಒಂದು ದಿನ ವಿಧಾನಪರಿಷತ್‌ನ ವಿಶೇಷ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ಸಂಬಂಧ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವ ಈ ಮಸೂದೆ, ವಿಧಾನಪರಿಷತ್ತಿನಲ್ಲಿ ಮಂಡನೆ ಆಗಿರಲಿಲ್ಲ. ಒಂದು ದಿನದ ವಿಶೇಷ ಅಧಿವೇಶನ ಮಸೂದೆಗೆ ನಡೆಸಿ ಅಂಗೀಕರಿಸಲು ಬಿಜೆಪಿಯಲ್ಲಿ ಒತ್ತಡ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಗೋಹತ್ಯೆ ಮಸೂದೆಯನ್ನು ಅಂಗೀಕರಿಸುವುದರ ಜತೆಗೆ ವಿಧಾನಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರ ಮೇಲಿನ ಅವಿಶ್ವಾಸ ನಿರ್ಣಯದ ನೋಟಿಸ್‌ ಚರ್ಚಿಸಲು ತೀರ್ಮಾನಿಸಲಾಗಿದೆ. ಪರಿಷತ್‌ ಕಾರ್ಯದರ್ಶಿಯರಿಗೂ ಅಧಿವೇಶನ ಕರೆಯಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಸರ್ಕಾರ ಪತ್ರ ಬರೆದಿದೆ.

ವಿಧಾನ ಪರಿಷತ್‌ ಸಭಾನಾಯಕ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸಪೂಜಾರಿ ಮತ್ತು ಪರಿಷತ್‌ನ ಐವರು ಸದಸ್ಯರು ರಾಜ್ಯಪಾಲ ವಜುಭಾಯಿವಾಲಾ ಅವರನ್ನು ಶುಕ್ರವಾರ ಭೇಟಿ ಮಾಡಿ, ಒಂದು ದಿನದ ವಿಶೇಷ ಅಧಿವೇಶನ ನಡೆಸಲು ಪರಿಷತ್ ಕಾರ್ಯದರ್ಶಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.

ಪರಿಷತ್ ಅಧಿವೇಶನ ಇದೇ 17 ರವರೆಗೆ ನಡೆಸಲು ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಸಭಾಪತಿಯವರು ಗುರುವಾರ ಏಕಾಏಕಿ ಅಧಿವೇಶನವನ್ನು ಅನಿರ್ಧಿಷ್ಟ ಕಾಲ ಮುಂದೂಡಿದರು. ಇದರ ಹಿಂದೆ ದುರುದ್ದೇಶ ಇದೆ. ಆದ್ದರಿಂದ ಡಿ.15 ರಂದು ಅಧಿವೇಶನ ಕರೆಯಲು ಸೂಚನೆ ನೀಡಬೇಕು ಎಂದು ಕೋಟ ಶ್ರೀನಿವಾಸಪೂಜಾರಿ ರಾಜ್ಯಪಾಲರ ಗಮನಕ್ಕೆ ತಂದರು.

ಈ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯಪಾಲರು ನಿಯೋಗಕ್ಕೆ ತಿಳಿಸಿದರು.

ಮಸೂದೆ ಅಂಗೀಕರಿಸಲು ವಿಶೇಷ ಅಧಿವೇಶನ

ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಪರಿಷತ್ತಿನಲ್ಲಿ ಅಂಗೀಕರಿಸುವ ಉದ್ದೇಶದಿಂದಲೇ ಮಂಗಳವಾರ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಈ ಮಸೂದೆ ಮಂಡನೆ ಆಗಲಿಲ್ಲ. ಮಂಗಳವಾರ (ಡಿ.17) ಕೊನೆಗೊಳ್ಳಬೇಕಿದ್ದ ಅಧಿವೇಶನವನ್ನು ಸಭಾಪತಿಯುವರ ಗುರುವಾರ ಸಂಜೆಯೇ ದಿಢೀರನೇ ಮುಂದೂಡಿದರು. ಸಭಾಪತಿ ಹೀಗೆ ಮಾಡಿದ್ದು ಸರಿಯಲ್ಲ. ಆ ಅಧಿಕಾರವೂ ಅವರಿಗಿಲ್ಲ. ಕಾಯ್ದೆ ಜಾರಿ ಮಾಡಲು ಅವರು ಸಹಕಾರ ನೀಡುತ್ತಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸಲೂ ತೀರ್ಮಾನಿಸಲಾಗಿದೆ ಎಂದೂ ಅವರು ತಿಳಿಸಿದರು.

ಜೆಡಿಎಸ್‌ ನೆರವು ಕೋರಿದ ಬಿಜೆಪಿ: ವಿಶೇಷ ಅಧಿವೇಶನದ ಮೂಲಕ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ ಪಡೆಯಲು ಬಿಜೆಪಿ ನಾಯಕರು ಜೆಡಿಎಸ್‌ ನಾಯಕರ ನೆರವು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT