ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ಇನ್ನೂ ಕಗ್ಗಂಟು; ನೋಂದಾಯಿತ ಸಂಘಟನೆಗಳ ಜತೆ ಇಂದು ಸಂಧಾನ

Last Updated 12 ಡಿಸೆಂಬರ್ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರು ತಮ್ಮ ಪಟ್ಟುಗಳನ್ನು ಸಡಿಲಿಸದೇ ಇರುವುದರಿಂದ ಮುಷ್ಕರ ತಕ್ಷಣಕ್ಕೆ ಅಂತ್ಯಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಎರಡು ದಿನಗಳಿಂದ ಸರ್ಕಾರಿ ಬಸ್‌ಗಳ ಸಂಚಾರ ಪೂರ್ಣಪ್ರಮಾಣದಲ್ಲಿ ಇಲ್ಲದೇ ಪ್ರಯಾಣಿಕರು ಹೈರಾಣಾಗಿದ್ದು, ಭಾನುವಾರ ನಡೆಯಲಿರುವ ಮಾತುಕತೆಯತ್ತ ಎಲ್ಲ ಚಿತ್ತ ನೆಟ್ಟಿದೆ.

ಪರಿಸ್ಥಿತಿ ಬಿಕ್ಕಟ್ಟಿನತ್ತ ತಿರುಗುತ್ತಿರುವುದು ಗೊತ್ತಾಗುತ್ತಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ರಾತ್ರಿ ತಮ್ಮ ನಿವಾಸಕ್ಕೆ ಕರೆಸಿಕೊಂಡು ಪರಿಹಾರ ಸೂತ್ರ ರೂಪಿಸಲು ಮುಂದಾದರು. ಇದರ ಫಲವಾಗಿ ಕಾರ್ಮಿಕ ಸಂಘಟನೆಗಳ ಜತೆ ಭಾನುವಾರ ಬೆಳಿಗ್ಗೆಯೇ ಮಾತುಕತೆ ನಡೆಸಲು ಸರ್ಕಾರ ನಿರ್ಧರಿಸಿತು. ಆದರೆ, ನೋಂದಾಯಿತ ಸಂಘಟನೆಗಳಿಗೆ ಮಾತ್ರ ಆಹ್ವಾನ ನೀಡುವ ತೀರ್ಮಾನಕ್ಕೆ ಸರ್ಕಾರ ಕಟ್ಟುಬಿದ್ದಿದೆ. ಸಂಧಾನ ಸಭೆಗೆ ಮುಷ್ಕರನಿರತ ನೌಕರರ ಕೂಟದ ಮುಖಂಡರನ್ನು ಆಹ್ವಾನಿಸದೆ ಇರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಬಹುದು ಎಂದೂ ಹೇಳಲಾಗಿದೆ.

ಮುಖ್ಯಮಂತ್ರಿ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಲಕ್ಷ್ಮಣ ಸವದಿ, ‘ಸಾರಿಗೆ ನೌಕರರ ಸಂಘಟನೆಗಳ ಪ್ರತಿನಿಧಿಗಳ ಜೊತೆ ಭಾನುವಾರ (ಡಿ. 13) ಬೆಳಿಗ್ಗೆ 10 ಗಂಟೆಗೆ ಸಭೆ ನಡೆಸಲಾಗುವುದು. ನಾಲ್ಕು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಸಭೆಗೆ ಬರಲು ಅವರು ಒಪ್ಪಿದ್ದಾರೆ. ಈ ಸಭೆಯಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯುವ ವಿಶ್ವಾಸವಿದೆ’ ಎಂದರು.

‘ವಿಕಾಸಸೌಧದಲ್ಲಿರುವ ನನ್ನ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಭೆಯ ತೀರ್ಮಾನಗಳನ್ನು ಮುಖ್ಯಮಂತ್ರಿ ಅವರಿಗೆ ತಿಳಿಸಲಾಗುವುದು. ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಘೋಷಿಸಲಿದ್ದಾರೆ. ಆರ್ಥಿಕ ಇತಿಮಿತಿ ನೋಡಿಕೊಂಡು ನೌಕರರ ಬೇಡಿಕೆಗಳನ್ನು ಪರಿಹರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು’ ಎಂದೂ ಹೇಳಿದರು.

ಖಾಸಗಿ ವಾಹನಗಳ ವ್ಯವಸ್ಥೆ: ಸಭೆಗೂ ಮೊದಲು ಮಾತನಾಡಿದ ಸವದಿ, ‘ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಭಾನುವಾರದಿಂದ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಬಸ್ ಪ್ರಯಾಣ ದರದಲ್ಲೇ ಖಾಸಗಿ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

‘ನೌಕರರ ಸಮಸ್ಯೆ ಹಾಗೂ ಅಹವಾಲುಗಳನ್ನು ಸಹಾನುಭೂತಿಯಿಂದ ಪರಿಗಣಿಸಲು ಸರ್ಕಾರ ಸಿದ್ದವಿದೆ’ ಎಂದೂ ಸವದಿ ಹೇಳಿದರು.

‘ನಮಗೂಸೇರಿನಾಲ್ಕುಸಂಘಟನೆಗಳಿಗೆಅಧಿಕೃತಆಹ್ವಾನಬಂದಿದೆ.ಸಭೆಯಲ್ಲಿಭಾಗವಹಿಸುತ್ತಿದ್ದೇವೆ’ ಎಂದು ಎಐಟಿಯುಸಿ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್ ತಿಳಿಸಿದ್ದಾರೆ.

ಕಾಂಗ್ರೆಸ್‌ ಬೆಂಬಲ: ಈ ಬೆಳವಣಿಗೆಗಳ ಮಧ್ಯೆಯೇ ನೌಕರರ ಮುಷ್ಕರಕ್ಕೆ ರಾಜ್ಯದಾದ್ಯಂತ ಬೆಂಬಲ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

‘ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಇದ್ದು, ಸಾರಿಗೆ ನೌಕರರ ವೇತನವನ್ನೂ ಸರ್ಕಾರ ನೀಡಿದೆ. ನೌಕರರ ಬೇಡಿಕೆ ನ್ಯಾಯಯುತವಾಗಿದ್ದರೂ ಈ ಸಂದರ್ಭದಲ್ಲಿ ಹೋರಾಟ ಬೇಡ. ಜನರ ಹಿತದೃಷ್ಟಿಯಿಂದ ನೌಕರರು ಮುಷ್ಕರ ಕೈಬಿಡಬೇಕು’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಇಂದಿನಿಂದ ಉಪವಾಸ

‘ಭಾನುವಾರ ನಡೆಯಲಿರುವ ಸಭೆಗೆ ಮುಷ್ಕರನಿರತ ನೌಕರರ ಕೂಟವನ್ನು ಆಹ್ವಾನಿಸಿಲ್ಲ. ಕರೆಯದ ಸಭೆಗೆ ನಾವು ಹೋಗುವುದಿಲ್ಲ. ಬಸ್ ಸಂಚಾರ ಸ್ಥಗಿತಗೊಳಿಸಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಹೇಳಿದರು.

‘ನಮ್ಮನ್ನು ಕರೆಯದಿದ್ದರೂ ಚಿಂತೆ ಇಲ್ಲ. ನೋಂದಾಯಿತ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆಯಲ್ಲೇ ಸಭೆ ನಡೆಸಲಿ. ಆದರೆ, ನಮ್ಮ ಬೇಡಿಕೆಗಳು ಈಡೇರಿದರೆ ಸಾಕು’ ಎಂದರು.

ಬಸ್ ಸಂಚಾರ–ನಷ್ಟದ ವಿವರ

ಕೆಎಸ್‌ಆರ್‌ಟಿಸಿ
* 187 ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡಿದ ಬಸ್‌ಗಳು
* ₹4 ಕೋಟಿ ವರಮಾನ ಖೋತಾ
* 5,000 ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿದ್ದ ಬಸ್‌ಗಳು
* 8,500 ಕೊರೊನಾ ಪೂರ್ವ ಸಂಚರಿಸುತ್ತಿದ್ದ ಬಸ್‌ಗಳು
* 5 ಬಸ್‌ಗಳು ಹಾನಿಗೀಡಾಗಿರುವುದು
----

ಬಿಎಂಟಿಸಿ

* 126 ಬಿಎಂಟಿಸಿ ವ್ಯಾಪ್ತಿಯಲ್ಲಿ ಸಂಚರಿಸಿದ ಬಸ್‌ಗಳು
* ₹2 ಕೋಟಿ ವರಮಾನ ಖೋತಾ
* 5 ಸಾವಿರ ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿದ್ದ ಬಸ್‌ಗಳು
* 6 ಸಾವಿರ ಕೊರೊನಾ ಪೂರ್ವ ಸಂಚರಿಸುತ್ತಿದ್ದ ಬಸ್‌ಗಳು
* 4 ಬಸ್‌ಗಳು ಹಾನಿಗೀಡಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT