ಬುಧವಾರ, ಮೇ 25, 2022
22 °C

ವಿ.ವಿ.ಗಳಿಗೆ ಸ್ವಾಯತ್ತತೆ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆಯ ಸ್ಥಾನಮಾನ ನೀಡಬೇಕು ಎಂದು ಕರ್ನಾಟಕದ ವಿಶ್ರಾಂತ ಕುಲಪತಿಗಳ ವೇದಿಕೆ (ಎಫ್‌ವಿಸಿಕೆ) ಅಭಿಪ್ರಾಯಪಟ್ಟಿದೆ.

ಸ್ವಾಯತ್ತತೆ ನೀಡದಿದ್ದರೆ ಕನಿಷ್ಠ ಒಂದೇ ಒಂದು ವಿಶ್ವವಿದ್ಯಾಲಯವನ್ನು ಜಾಗತಿಕ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸುವ ಸರ್ಕಾರದ ಮಹತ್ವಾಕಾಂಕ್ಷೆ ಕನಸಾಗಿಯೇ ಉಳಿಯುತ್ತದೆ. ಈಗ ನಡೆಯುತ್ತಿರುವ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ಇಂತಹ ಕ್ರಮ ಅಗತ್ಯವಾಗಿದೆ ಎಂದು ವೇದಿಕೆ ಪ್ರತಿಪಾದಿಸಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧ
ವಾಗಿ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಮತ್ತು ಸೆನೆಟ್‌ಗಳಿಗೆ ಶಿಕ್ಷಣ ತಜ್ಞರಲ್ಲದ ವ್ಯಕ್ತಿಗಳನ್ನು ಸರ್ಕಾರ ನಾಮ ನಿರ್ದೇಶನ ಮಾಡುತ್ತಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ಅನ್ವಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಅಧ್ಯಾಪಕರು ಮತ್ತು ಉದ್ಯೋಗಿಗಳ ನೇಮಕಾತಿ ಮಂಡಳಿಯು ವಿಶ್ವವಿದ್ಯಾಲಯದ ಅಧಿಕಾರದ ವ್ಯಾಪ್ತಿಯಲ್ಲಿರುತ್ತದೆ. ಕುಲಪತಿಗಳು ಪದ ನಿಮಿತ್ತ ಅಧ್ಯಕ್ಷರು, ಕುಲಸಚಿವರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಈ ಕಾಯ್ದೆಯನ್ನು ಉಲ್ಲಂಘಿಸಿ ಸರ್ಕಾರವು ತನ್ನದೇ ಆದ ಮಂಡಳಿಗಳನ್ನು ರಚಿಸುವ ಮೂಲಕ ವಿಶ್ವವಿದ್ಯಾಲಯದಗಳ ವಿವಿಧ ಸಿಬ್ಬಂದಿ ನೇಮಕಾತಿಯ ಅಧಿಕಾರವನ್ನು ವಹಿಸಿಕೊಳ್ಳುತ್ತಿದೆ ಎಂದು ವೇದಿಕೆಯ ಅಧ್ಯಕ್ಷ  ಡಾ.ಕೆ.ಎಸ್. ರಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಯನ್ನು ಹೈಕೋರ್ಟ್‌ ಇತ್ತೀಚೆಗೆ ಅನೂರ್ಜಿತಗೊಳಿಸಿದೆ. ನೇಮಕಾತಿಗೆ ಮೊದಲು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯದಿರುವುದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಕುಲಪತಿಗಳ ನೇಮಕಾತಿಗೆ ಹೆಸರು ಗಳನ್ನು ಶಿಫಾರಸು ಮಾಡಲು ಶೋಧನಾ ಸಮಿತಿಗೆ ನಿವೃತ್ತ ಪ್ರಾಧ್ಯಾಪಕರು, ಹಾಲಿ ಪ್ರಾಧ್ಯಾಪಕರು, ಪ್ರಾಂಶುಪಾಲರು ಅಥವಾ ಡೀನ್ ಅವರನ್ನು ನಾಮ ನಿರ್ದೇಶನ ಮಾಡುವ ಮೂಲಕ ಹಲವು ಸಂದರ್ಭಗಳಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದಿದ್ದಾರೆ.

‘ಪ್ರತಿಭಟನೆಯ ಹಕ್ಕು ಕಸಿಯುತ್ತಿರುವ ವಿಶ್ವವಿದ್ಯಾಲಯ’

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ನಿರ್ಬಂಧ ವಿಧಿಸಿ ಕುಲಸಚಿವರು ಹೊರಡಿಸಿರುವ ಸುತ್ತೋಲೆಗೆ ಎಐಡಿಎಸ್‌ಒ ಆಕ್ಷೇಪ ವ್ಯಕ್ತಪಡಿಸಿದೆ.

ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿ ನೇಮಿಸುವಂತೆ ಆಗ್ರಹಿಸಿ ಸ್ನಾತಕೋ
ತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ. ಕೊಟ್ರೇಶ್ ಅವರು ಪ್ರತಿಭಟನೆಗೆ ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಿದ್ದಾರೆ.ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿಭಾಗ ಮುಖ್ಯ
ಸ್ಥರು ಸೇರಿದಂತೆ ಯಾರೂ ಜ್ಞಾನಭಾರತಿ ಆವರಣದಲ್ಲಿ ಯಾವುದೇ ಪ್ರತಿಭಟನೆ ನಡೆಸಬಾರದೆಂದು ಕುಲಸಚಿವರು ಸೂಚಿಸಿದ್ದಾರೆ. ಆದರೆ, ವಿವಿ ಆವರಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದ್ದು ಆಡಳಿತ ಮಂಡಳಿಯೇ ಹೊರತು ಹೈಕೋರ್ಟ್ ಅಲ್ಲ ಎಂದು ಎಐಡಿಎಸ್‌ಒ ತಿಳಿಸಿದೆ.

ಪ್ರತಿಭಟನೆಯ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಮತ್ತು ಪ್ರಜಾತಾಂತ್ರಿಕ ಹಕ್ಕು. ಆಡಳಿತಗಾರರನ್ನು ಪ್ರಶ್ನಿಸಲು ಅಥವಾ ಯಾವುದೇ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಜನಸಾಮಾನ್ಯರ ಬಳಿ ಇರುವ ಬಲಶಾಲಿ ಆಯುಧ. ಆದರೆ, ಕುಲಸಚಿವರ ಈ ಕರಾಳ ಮತ್ತು ಜನತಂತ್ರ- ವಿರೋಧಿ ಸುತ್ತೋಲೆಯನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಒಕ್ಕೊರಲಿನಿಂದ ಖಂಡಿಸಬೇಕು ಹಾಗೂ ಪ್ರಬಲ ಚಳವಳಿ ಕಟ್ಟಬೇಕು. ಪ್ರತಿಭಟನೆಯ ಹಕ್ಕನ್ನು ಕಸಿಯುವ ಈ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕೆಂದು ಕುಲಸಚಿವರನ್ನು ಎಐಡಿಎಸ್‌ಒ ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ವಿ. ಕಲ್ಯಾಣ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೇಣುಗೋಪಾಲ್ ವಜಾಗೆ ಆಗ್ರಹಿಸಿ ಧರಣಿ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಕೆ.ಆರ್.ವೇಣುಗೋಪಾಲ್ ಅವರ ನೇಮಕಾತಿಯನ್ನು ಹೈಕೋರ್ಟ್‌ ರದ್ದು ಮಾಡಿರುವುದರಿಂದ ರಾಜ್ಯಪಾಲರು ಕೂಡಲೇ ಅವರನ್ನು ಕುಲಪತಿ ಸ್ಥಾನದಿಂದ ವಜಾ ಮಾಡಬೇಕು’ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರು ಆಗ್ರಹಿಸಿದ್ದಾರೆ.

ಶುಕ್ರವಾರ ಇಲ್ಲಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಎಚ್.ಸುಧಾಕರ್, ‘ಕೆ.ಆರ್.ವೇಣುಗೋಪಾಲ್‌ ಅವರು ಕುಲಪತಿ ಹುದ್ದೆಗೆ ನೇಮಕಗೊಂಡಿರು
ವುದನ್ನು ಹೈಕೋರ್ಟ್‌ ವಿಭಾಗೀಯ ಪೀಠ ರದ್ದುಪಡಿಸಿದೆ. ಆದರೆ ಈಗಲೂ ಅವರೇ ಕುಲಪತಿಯ ಅಧಿಕಾರ ನಡೆಸುತ್ತಿದ್ದಾರೆ. ತಾನು ವಿಶ್ವವಿದ್ಯಾಲಯದ ಆಡಳಿತ ಚುಕ್ಕಾಣಿ ಹಿಡಿದಿದ್ದೇನೆ ಎಂದು ಕುಲಸಚಿವರಿಗೆ ಇ–ಮೇಲ್‌ ಮೂಲಕ ಪತ್ರ ಬರೆದು, ಆಡಳಿತ ನಡೆಸುವಂತೆ ಆದೇಶಿಸಿದ್ದಾರೆ. ಈ ಮೂಲಕ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ’ ಎಂದು ದೂರಿದರು.

‘ವೇಣುಗೋಪಾಲ್ ಅವರನ್ನು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರ ಕೂಡಲೇ ವಜಾಗೊಳಿಸಬೇಕು. ಈ ಮೂಲಕ ನ್ಯಾಯಾಲಯದ ಆದೇಶ ಪಾಲಿಸಿ, ಸಾಮಾಜಿಕ ನ್ಯಾಯವನ್ನು ಕಾಪಾಡಬೇಕು’ ಎಂದು ಒತ್ತಾಯಿಸಿದರು. ‘ಕುಲಪತಿ ಸ್ಥಾನಕ್ಕೆ ಬೇರೆಯವರನ್ನು ನೇಮಕಾತಿ ಮಾಡಬೇಕು ಅಥವಾ ಪ್ರಭಾರಿ ಕುಲಪತಿಯನ್ನು ನೇಮಿಸಲು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸೋಮವಾರದಿಂದ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಸಿಂಡಿಕೇಟ್ ಸದಸ್ಯರೆಲ್ಲ ಧರಣಿ ನಡೆಸಲಿದ್ದೇವೆ’ ಎಂದೂ ಎಚ್ಚರಿಸಿದರು. ಸಿಂಡಿಕೇಟ್ ಸದಸ್ಯರಾದ ಗೋಪಿನಾಥ್, ವಿಧೇಯ ಬೆಳಗೋಡೆ ಶ್ರೀಕಂಠ, ಉದಯ್ ಕುಮಾರ್, ಪ್ರೇಮ್ ಸೋಹಾನ್ ಲಾಲ್‌ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು