ಶುಕ್ರವಾರ, ಸೆಪ್ಟೆಂಬರ್ 17, 2021
21 °C
ಸಿಎಂ ಬೊಮ್ಮಾಯಿ ವ್ಯಾಖ್ಯಾನ

ಸುಬ್ರಮಣಿಯನ್ ಸ್ವಾಮಿ ಫ್ರೀಲ್ಯಾನ್ಸ್‌ ಪೊಲಿಟಿಷಿಯನ್‌, ಆದರೆ ಜೀನಿಯಸ್‌: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ‘ಫ್ರೀಲ್ಯಾನ್ಸ್‌ ಪೊಲಿಟಿಷಿಯನ್‌’. ಆದರೆ, ಅವರು ಆರ್ಥಿಕ ತಜ್ಞರಾಗಿ ಜೀನಿಯಸ್‌’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಾಖ್ಯಾನಿಸಿದರು.

ಬೆಲೆ ಏರಿಕೆ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೆಲವು ತಿಂಗಳುಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್‌ ದರ ಏರಿಕೆ ಕುರಿತು ಸುಬ್ರಮಣಿಯನ್‌ ಸ್ವಾಮಿ ಮಾಡಿದ್ದ ಟ್ವೀಟ್‌ ಉಲ್ಲೇಖಿಸಿದರು.

‘ಪೆಟ್ರೋಲ್‌ ಬೆಲೆ ರಾಮನ ಭಾರತದಲ್ಲಿ ₹93, ಸೀತೆಯ ನೇಪಾಳದಲ್ಲಿ ₹51, ರಾವಣನ ಶ್ರೀಲಂಕಾದಲ್ಲಿ ₹51’ ಎಂದು ಟ್ವೀಟ್‌ ಮಾಡಿದ್ದು ನಿಮ್ಮ ಪಕ್ಷದವರೇ ಆದ ಸುಬ್ರಮಣಿಯನ್‌ ಸ್ವಾಮಿ. ಇದಕ್ಕೆ ಏನು ಹೇಳುತ್ತೀರಿ’ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯನ್ನು ಕುಟುಕಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಸ್ವಾಮಿ ಯಾವ ಪಕ್ಷದಲ್ಲಿ ಇರುತ್ತಾರೋ ಆ ಪಕ್ಷವನ್ನು ಟೀಕಿಸಲು ಹಿಂಜರಿಯವುದಿಲ್ಲ. ಜನತಾ ಪಕ್ಷ, ಜನತಾದಳದಲ್ಲಿ ಇದ್ದಾಗ ಆ ಪಕ್ಷಗಳನ್ನೇ ಟೀಕಿಸಿದ್ದರು. ಪ್ರಧಾನಿ ಚಂದ್ರಶೇಖರ್‌ ಅವರ ಮಂತ್ರಿ ಮಂಡಲದಲ್ಲಿ ಇದ್ದಾಗ ಪ್ರಧಾನಿಯನ್ನೇ ಟೀಕಿಸಿದ್ದರು. ಅವರ ಬಗ್ಗೆ ನಿಮಗೂ ಚೆನ್ನಾಗಿ ಗೊತ್ತು ನನಗೂ ಗೊತ್ತಿದೆ’ ಎಂದರು.

‘ಯಾವುದೇ ಪಕ್ಷ ಆದರೂ ಭಿನ್ನ ಅಭಿಪ್ರಾಯಗಳು ಇದ್ದೇ ಇರುತ್ತವೆ. ಕಾಂಗ್ರೆಸ್‌ನಲ್ಲಿ ಜಿ– 23 ಇದೆಯಲ್ಲ’ ಎಂದು ಬೊಮ್ಮಾಯಿ ಹೇಳಿದಾಗ, ‘ಪ್ರಜಾಪ್ರಭುತ್ವ ಅಂದ ಮೇಲೆ ಇವೆಲ್ಲ ಇರಲೇಬೇಕು’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ದಿಲ್ಲಿಯಲ್ಲಿ ಕರ್ನಾಟಕ ಕಹಳೆಯಾಗಿ: ‘ಸಂಸತ್ತಿನಲ್ಲಿ ಎತ್ತ ಬೇಕಾದ ಪ್ರಶ್ನೆಗಳನ್ನು ನೀವು ಇಲ್ಲಿ ಕೇಳುತ್ತಿದ್ದೀರಿ. ಅದಕ್ಕೆ ಈ ಸದನದಲ್ಲಿ ಉತ್ತರ ನೀಡಲು ಸಾಧ್ಯವಾಗುವುದಿಲ್ಲ. ನೀವು ದೆಹಲಿಯಲ್ಲಿ ಕರ್ನಾಟಕದ ಕಹಳೆಯಾಗಿ ಇರಬೇಕು. ಆದ್ದರಿಂದ ದೆಹಲಿಗೆ ಹೋಗಿ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ  ಅವರು ಸಿದ್ದರಾಮಯ್ಯ ಅವರನ್ನು ಛೇಡಿಸಿದರು.

‘ಇಲ್ಲ ಇಲ್ಲ ಸಿದ್ರಾಮಣ್ಣ ಕರ್ನಾಟಕದಲ್ಲೇ ಇರಬೇಕು’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. ‘ಮಾಧುಸ್ವಾಮಿ ಅವರಿಗೆ ನನ್ನ ಮೇಲೆ ಅಭಿಮಾನ ಅದಕ್ಕೆ ಹಾಗೇ ಹೇಳುತ್ತಾರೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಕೆಲವರು ನಿಮ್ಮನ್ನು ಇಲ್ಲಿಂದ ಸಾಗಬೇಕು ಎಂದು ಕಾಯುತ್ತಿದ್ದಾರೆ. ಅಲ್ಲಿಗೆ ಹೋಗುತ್ತೀರಿ ಎಂದರೆ ಅಲ್ಲಿರುವ ಕೆಲವರ ಎದೆಯೊಡೆದು ಹೋಗುತ್ತದೆ’ ಎಂದು ಮಾಧುಸ್ವಾಮಿ ಹೇಳಿದರು.

‘ಹಿಂದೆ ಎರಡು ಬಾರಿ ಲೋಕಸಭೆಗೆ ನಿಂತು ಸೋತಿದ್ದೆ. ಇನ್ನು ಹೋಗುವ ಆಸೆ ಇಲ್ಲ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಆ ಮೇಲೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು