ಬುಧವಾರ, ಜೂನ್ 23, 2021
22 °C

ವರ್ತಕರಿಗೆ ಪರಿಹಾರ ಕೊಡಿ: ಡಿಕೆಶಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೊಲೀಸರನ್ನು ಬಳಸಿಕೊಂಡು ಅಂಗಡಿಗಳನ್ನು ಮುಚ್ಚಿಸಿರುವ ರಾಜ್ಯ ಸರ್ಕಾರ, ವರ್ತಕರಿಗೆ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶುಕ್ರವಾರ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೆರಿಗೆ ಪಾವತಿಸಿ ವಹಿವಾಟು ನಡೆಸುತ್ತಿದ್ದ ವರ್ತಕರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಸಂಕಷ್ಟದ ಕಾಲದಲ್ಲೂ ಜನರಿಗೆ ಉದ್ಯೋಗ ನೀಡಿರುವವರನ್ನು ಅವಮಾನಿಸುತ್ತಿದೆ’ ಎಂದು ದೂರಿದರು.

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿ. ಆದರೆ, ಅದರಿಂದ ತೊಂದರೆಗೊಳಗಾದ ಜನರಿಗೆ ಪರಿಹಾರ ನೀಡಬೇಕು. ವರ್ತಕರು, ನೌಕರರು, ಅಸಂಘಟಿತ ಕಾರ್ಮಿಕರು ಎಲ್ಲರಿಗೂ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಆರ್ಥಿಕ ಸಮಸ್ಯೆಯಿಂದ ಪಾರು ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ಸಭೆ ನಡೆಸಿ, ಸಾಲದ ಕಂತುಗಳ ಪಾವತಿಗೆ ಕಾಲಾವಕಾಶ ಮತ್ತು ಬಡ್ಡಿ ವಿನಾಯಿತಿ ಕೊಡಿಸಬೇಕು ಎಂದರು.

ರೆಮ್‌ಡೆಸಿವಿರ್‌ ಔಷಧಿ, ಆಮ್ಲಜನಕ ಪೂರೈಕೆ ತ್ವರಿತ ಕ್ರಮ ಕೈಗೊಳ್ಳಬೇಕು. ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ತುರ್ತಾಗಿ ವ್ಯವಸ್ಥೆ ಮಾಡಬೇಕು. ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಸಭೆ ನಡೆಸಿದ ಸಚಿವ ಬಿ. ಶ್ರೀರಾಮುಲು ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಅಘೋಷಿತ ಲಾಕ್‌ಡೌನ್‌ ಜಾರಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಪ್ರಮುಖ ಮುಖಂಡರು, ಶಾಸಕರ ಜತೆ ಸಭೆ ನಡೆಸಿದ ಶಿವಕುಮಾರ್‌, ಚರ್ಚೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು