ಬುಧವಾರ, ಜುಲೈ 6, 2022
22 °C
80 ವರ್ಷದ ವೃದ್ಧೆಯೂ ಆರೋಪಿ..!

ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅನಾರೋಗ್ಯ ಮತ್ತು ವಯೋಸಹಜ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದ 80 ವರ್ಷದ ವೃದ್ಧೆಯೂ ಸೇರಿದಂತೆ ಒಂದೇ ಕುಟುಂಬದ ಎಂಟು ಸದಸ್ಯರ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಆರೋಪವನ್ನು ಹೈಕೋರ್ಟ್‌ ರದ್ದುಪಡಿಸಿದೆ.

‘ನಮ್ಮ ವಿರುದ್ಧ ದಾವಣಗೆರೆಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆ ರದ್ದುಗೊಳಿಸಬೇಕು' ಎಂದು ಕೋರಿ ಚಿತ್ರದುರ್ಗದ ರಾಮದಾಸ್‌ ಕಾಂಪೌಂಡ್‌ನ ಕೊತ್ವಾಲ್‌ ನಗರ ನಿವಾಸಿ ಮೊಹಮದ್ ಶಮೀರ್‌ ಸೇರಿದಂತೆ ಪರಿವಾರದ ಎಂಟು ಜನರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಅರ್ಜಿದಾರರ ವಿರುದ್ಧ ಮೊಹಮದ್‌ ಶಮೀರ್‌ ಪತ್ನಿ ಡಿ.ಎನ್‌.ಜಾಸ್ಮೀನ್‌ ನೀಡಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ. ವರದಕ್ಷಿಣೆ ತಡೆ ಕಾಯ್ದೆ–1961ರ ಕಲಂ 3 ಮತ್ತು 4ರ ಅಡಿಯಲ್ಲಿ ಈ ರೀತಿ ದೂರು ಸಲ್ಲಿಸುವಾಗ ಮುಂದೇನಾಗುತ್ತದೆ ಎಂಬುದರ ಪರಿಣಾಮ
ಗಳನ್ನು ಫಿರ್ಯಾದುದಾರ ಪತ್ನಿ ಸರಿಯಾಗಿ ಅವಲೋಕಿಸಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟು ದೂರು ವಜಾಗೊಳಿಸಿದೆ. 

ಪ್ರಕರಣವೇನು?: ದಾವಣಗೆರೆಯ ಎಸ್.ಎಸ್‌. ಲೇ ಔಟ್‌ ‘ಎ’ ಬ್ಲಾಕ್‌ ನಿವಾಸಿಯಾದ 25 ವರ್ಷದ ಜಾಸ್ಮೀನ್‌ 2020ರ ಅಕ್ಟೋಬರ್ 24ರಂದು ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ  29 ವರ್ಷದ ಮೊಹಮದ್ ಶಮೀರ್ ಅವರನ್ನು ಮದುವೆಯಾಗಿದ್ದರು.

ಮದುವೆಯ ನಂತರ 2021ರ ಆಗಸ್ಟ್‌ 22 ರಂದು ಪೊಲೀಸರಿಗೆ ದೂರು ನೀಡಿದ್ದ ಜಾಸ್ಮಿನ್‌,  ‘ನನ್ನ ಪೋಷಕರು ಮದುವೆಯ ವೇಳೆ, ಮೊಹಮದ್‌ ಶಮೀರ್ ಅವರಿಗೆ ಐದು ಲಕ್ಷ ನಗದು, ಐದು ತೊಲ ಬಂಗಾರ, ಪಾತ್ರೆ ಪಡಗ ಹಾಗೂ ಇತರೆ ವಸ್ತುಗಳನ್ನು ನೀಡಿ ಖರ್ಚು ಹಾಕಿ ಮದುವೆ ಮಾಡಿಕೊಟ್ಟಿದ್ದರು. ಶಮೀರ್‌ ಕುಟುಂಬದವರು ಮದುವೆ ದಿನ ಮತ್ತೂ ಐದು ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಕೊಡದಿದ್ದರೆ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು. ಪರಿಣಾಮ ನಮ್ಮ ಪೋಷಕರು ಸಾಲ ಮಾಡಿ ಈ ಹಣವನ್ನು ಕೊಟ್ಟಿದ್ದರು. ಆದರೆ, ಮದುವೆಯ ನಂತರ ನನ್ನ ಗಂಡನ ತಾಯಿ, ನಾದಿನಿ, ಮೈದುನ ಹಾಗೂ ಪರಿವಾರದವರು ನನ್ನ ಜರಿಯಲಾರಂಭಿಸಿದರು. ನೀನು ಕುಳ್ಳಗಿದ್ದೀಯ, ಕೀಳು ಜಾತಿಗೆ ಸೇರಿದ್ದೀಯ ಎಂದು ಹಿಂಸೆ ನೀಡತೊಡಗಿದರು. ನನ್ನ ಶೀಲ ಶಂಕಿಸಿ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ’ ಎಂದು ಆರೋಪಿಸಿದ್ದರು.

ದೂರಿನ ಅನುಸಾರ ದಾವಣಗೆರೆ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಐಪಿಸಿಯ ವಿವಿಧ ಕಲಂಗಳು ಹಾಗೂ ವರದಕ್ಷಿಣೆ ತಡೆ ಕಾಯ್ದೆ ಆರೋಪದಡಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮೊಹಮದ್‌ ಶಮೀರ್ ಮತ್ತು ಕುಟುಂಬದ ಸದಸ್ಯರ ಪರ ಹಿರಿಯ ವಕೀಲ ಹಷ್ಮತ್‌ ಪಾಷ ವಾದ ಮಂಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು