ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಶಿಕ್ಷಕರ ನೇಮಕಾತಿ: ಕೊನೆಯ ದಿನಾಂಕ ಮುಗಿದ ಬಳಿಕ ಬಂತು ಪತ್ರ!

ಚಿತ್ರಕಲಾ ಶಿಕ್ಷಕರ ನೇಮಕಾತಿ: ದಾಖಲೆಗಳನ್ನು ಕಳುಹಿಸಲು ಸೂಚನೆ
Last Updated 11 ಜುಲೈ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ ಹೆಸರಿರುವ ಚಿತ್ರಕಲಾ ಶಿಕ್ಷಕರ ದಾಖಲೆಗಳ ಪರಿಶೀಲನೆಗಾಗಿ ಕರ್ನಾಟಕ ಲೋಕಸೇವಾ ಆಯೋಗವು ಅಗತ್ಯ ದಾಖಲೆಗಳನ್ನು ಕಳುಹಿಸುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. ಆದರೆ ಈ ಕುರಿತು ಆಯೋಗ ಕಳುಹಿಸಿರುವ ಪತ್ರವು, ಕೊನೆಯ ದಿನಾಂಕದ ನಂತರ ಅಭ್ಯರ್ಥಿಗಳ ಕೈ ಸೇರಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿನ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಐದು ವರ್ಷಗಳಿಂದ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ. ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಈಗ ಪ್ರಕಟಿಸಲಾಗಿದ್ದು, ದಾಖಲೆಗಳನ್ನು ಕಳುಹಿಸುವಂತೆ ಕೆಪಿಎಸ್‌ಸಿ ಸೂಚನೆ ನೀಡಿದೆ.

‘ಜುಲೈ 6ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿತ್ತು. ದಾಖಲೆಗಳನ್ನು ಕಳುಹಿಸುವಂತೆ 7ರ ಸಂಜೆ ಇ–ಮೇಲ್ ಮಾಡಿದ್ದಾರೆ. ಆದರೆ, ಯಾವ ಯಾವ ದಾಖಲೆಗಳು ಬೇಕು, ಎಷ್ಟು ಪ್ರತಿ ಬೇಕು ಎಂಬ ಮಾಹಿತಿ ಇ–ಮೇಲ್‌ನಲ್ಲಿ ಇರಲಿಲ್ಲ. ಆದರೆ, ದಾಖಲೆಗಳನ್ನು ಕಳುಹಿಸಲು 9ನೇ ತಾರೀಖು ಕೊನೆಯ ದಿನ ಎಂದು ಹೇಳಿದ್ದರು. ಈ ಕುರಿತ ಪತ್ರ ನಮಗೆ 10ರ ಸಂಜೆ 4 ಗಂಟೆಯ ವೇಳೆಗೆ ಬಂದಿತು’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಅಭ್ಯರ್ಥಿಯೊಬ್ಬರು ಹೇಳಿದರು.

‘ನನ್ನ ಕೈಗೆ 9ರಂದು ಬೆಳಿಗ್ಗೆ ಪತ್ರ ಸಿಕ್ಕಿದೆ. ಸಂಜೆಯೊಳಗೇ ದಾಖಲೆಗಳನ್ನು ಕಳುಹಿಸಲು ಸಾಧ್ಯವಾಗುತ್ತದೆಯೇ’ ಎಂದು ಮತ್ತೊಬ್ಬ ಅಭ್ಯರ್ಥಿ ಇಂದ್ರಕುಮಾರ್ ಬಿ. ದಸ್ತೇನವರ ಪ್ರಶ್ನಿಸಿದರು.

‘ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ತ್ವರಿತ ಅಂಚೆ ಮೂಲಕ (ಸ್ಪೀಡ್‌ ಪೋಸ್ಟ್‌) ಮೂಲಕ ಕಳುಹಿಸಬೇಕು ಎಂದು ಸೂಚಿಸಲಾಗಿದೆ. ಐದು ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಿದೆ. ಈಗ ದಾಖಲೆಗಳನ್ನು ಕಳುಹಿಸಲು ಐದು ದಿನ ಕೂಡ ಕಾಲಾವಕಾಶ ನೀಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಆರನೇ ಸುತ್ತಿನ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರು ಕೂಡ ಇದೆ. ಪಟ್ಟಿಯಲ್ಲಿ ಹೆಸರಿದ್ದವರಿಗೆಲ್ಲ ಪತ್ರಗಳನ್ನು ಕಳುಹಿಸಲಾಗಿದೆ. ಆದರೆ, ಕೊನೆಯ ದಿನಾಂಕ ಮುಗಿದರೂ ನನಗೆ ಇನ್ನೂ ಪತ್ರ ಬಂದಿಲ್ಲ’ ಎಂದು ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.

ಒಟ್ಟು 460 ಹುದ್ದೆಗಳಿಗೆ 3,000ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಲಾಗಿದೆ. ಚಿತ್ರಕಲೆ ವಿಷಯದಲ್ಲಿ ಡಿಪ್ಲೊಮಾ ಮತ್ತು ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಪರಿಶೀಲನೆ:

‘ಇಂದು (ಭಾನುವಾರ) ಆಯೋಗಕ್ಕೆ ರಜೆ ಇದೆ. ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರತಿಕ್ರಿಯೆಗೆ ಲಭ್ಯವಿಲ್ಲ. ಸೋಮವಾರ ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT