ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಕಟಾವಿನ ನಂತರ ಒತ್ತುವರಿ ತೆರವು ಮಾಡಿ; ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು

Last Updated 10 ನವೆಂಬರ್ 2021, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಡವಿ ಆನಂದದೇವನಹಳ್ಳಿಯಲ್ಲಿ ಒತ್ತುವರಿಯಾಗಿರುವ 19 ಎಕರೆ 9 ಗುಂಟೆ ಸರ್ಕಾರಿ ಜಮೀನಿನಲ್ಲಿ ರೈತರು ಬೆಳೆದಿರುವ ಕಬ್ಬು ಹಾಗೂ ಇತರೆ ಬೆಳೆ ಕಟಾವು ಆದ ನಂತರ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಒತ್ತುವರಿ ತೆರವುಗೊಳಿಸಲು ಕೋರಿ ಅಡವಿ ಆನಂದದೇವನಹಳ್ಳಿ ನಿವಾಸಿಗಳಾದ ಶಿವಣ್ಣ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ನ್ಯಾಯಾಲಯದ ಸೂಚನೆಯಂತೆ 19 ಎಕರೆ 9 ಗುಂಟೆ ಪೈಕಿ ಒಂದಷ್ಟು ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ ಜಮೀನಿನಲ್ಲಿ ರೈತರು ಕಬ್ಬು ಹಾಗೂ ಇತರೆ ಬೆಳೆ ಬೆಳೆದಿದ್ದಾರೆ. ಒತ್ತುವರಿಗೆ ಮುಂದಾಗಿ ಬೆಳೆಗೆ ಹಾನಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮೂರು ತಿಂಗಳ ಕಾಲಾವಕಾಶ ನೀಡಿದರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗುವುದು’ ಎಂದು ವಿವರಿಸಿದರು.

ಇದನ್ನು ಮನ್ನಿಸಿದ ನ್ಯಾಯಪೀಠ, ‘ಒಂದಷ್ಟು ಮಾತ್ರವೇ ತೆರವುಗೊಳಿಸಿದರೆ ಸಾಲದು. ಒತ್ತುವರಿ ಪ್ರದೇಶದಲ್ಲಿ ಬೆಳೆದಿರುವ ಬೆಳೆಯನ್ನು ಕಟಾವು ಮಾಡಿದ ಕೂಡಲೇ ಒತ್ತುವರಿ ಸಂಪೂರ್ಣ ತೆರವುಗೊಳಿಸಬೇಕು. ಅಂತೆಯೇ, ರೈತರು ಮತ್ತೆ ಬೆಳೆ ಬೆಳೆಯದಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು 2020ರ ಫೆಬ್ರುವರಿಗೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT