ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲತಾಯಿ ಮಡಿಲಿಗೆ ಮಗು ಬೇಡ: ಹೈಕೋರ್ಟ್

ಶ್ರೀಮಂತ-ವಿದ್ಯಾವಂತ ಮುಸ್ಲಿಂ ಕುಟುಂಬದ ಅಪರೂಪದ ಪ್ರಕರಣ
Last Updated 22 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳ ಅಭಿರಕ್ಷೆ (ಕಸ್ಟಡಿ) ಎಂಬುದು ಧರ್ಮ ಮತ್ತು ನಂಬಿಕೆಗಳನ್ನು ದಾಟಿ ನಿಂತ ಸಂಕೀರ್ಣ ವಿಚಾರ. ಅದರಲ್ಲೂ ಮುಸ್ಲಿಂ ಕುಟುಂಬಗಳ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಗಂಡ–ಹೆಂಡತಿ ಪ್ರತ್ಯೇಕವಾಗಿ ಇರುವಾಗ ಮಗುವಿನ ಪಾಲನೆ, ಪೋಷಣೆಗೆ ಹೆತ್ತ ತಾಯಿಯೇ ಸೂಕ್ತ; ಇದು ಅವಳ ಹಕ್ಕು ಕೂಡಾ. ಹಾಗಾಗಿ, ಮಲತಾಯಿಯ ಮಡಿಲಿಗೆ ಮಗುವನ್ನು ಒಪ್ಪಿಸುವುದು ಅಥವಾ ಮಗುವಿನ ತಂದೆಯ ಬಳಿಗೆ ಕಳುಹಿಸುವುದು ಸರ್ವಥಾ ಸಮರ್ಥನೀಯವಲ್ಲ’ ಎಂದು ಹೈಕೋರ್ಟ್ ಪ್ರತಿಪಾದಿಸಿದೆ.

ಶ್ರೀಮಂತ ಮತ್ತು ವಿದ್ಯಾವಂತ ಮುಸ್ಲಿಂ ದಂಪತಿಯ ವಿಚ್ಛೇದನ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇಂತಹುದೊಂದು ತೀರ್ಪು ನೀಡಿದ್ದು, ಅರ್ಜಿದಾರ ಪತಿಗೆ ₹ 50 ಸಾವಿರ ದಂಡ ವಿಧಿಸಿದೆ.

‘ನನ್ನ ಅಪ್ರಾಪ್ತ ಮಗನನ್ನು ನನ್ನೊಟ್ಟಿಗೇ ಇರಿಸಿಕೊಳ್ಳಲು ನಿರ್ದೇಶಿಸಬೇಕು’ ಎಂದು ಕೋರಿ ಬೆಂಗಳೂರು ನಿವಾಸಿ 39 ವರ್ಷದ ಜಿ.ಕೆ.ಮೊಹಮ್ಮದ್ ಮುಷ್ತಾಕ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಪೀಠ, ‘ದಂಡದ ಮೊತ್ತವನ್ನು ಒಂದು ತಿಂಗಳ ಒಳಗಾಗಿ ಪತ್ನಿಗೆ ನೀಡಬೇಕು. ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಮಗುವಿನ ಭೇಟಿಗೆ ಕಲ್ಪಿಸಲಾಗಿರುವ ಅವಕಾಶವನ್ನು ಅಮಾನತಗೊಳಿಸಲಾಗುವುದು’ ಎಂದು ಎಚ್ಚರಿಸಿದೆ.

‘ಪತಿ–ಪತ್ನಿಯ ನಡುವೆ ಬಾಕಿ ಇರುವ ಎಂಟು ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯಗಳು ಮುಂದಿನ ಒಂಬತ್ತು ತಿಂಗಳೊಳಗಾಗಿ ವಿಲೇವಾರಿ ಮಾಡಬೇಕು ಮತ್ತು ಈ ಕುರಿತ ವರದಿಯನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ತಲುಪಿಸಬೇಕು’ ಎಂದೂ ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು?: ಬೆಂಗಳೂರಿನ ‘ಹನಿವೆಲ್‌ ಟೆಕ್ನಾಲಜಿ ಸಲ್ಯೂಶನ್ಸ್‌’ನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ಮೊಹಮ್ಮದ್‌ ಮುಷ್ತಾಕ್‌, ದಾವಣಗೆರೆಯ 37 ವರ್ಷದ ಲೆಕ್ಕ ಪರಿಶೋಧಕಿ ಆಯೇಷಾ ಬಾನು ಅವರನ್ನು 2009ರ ಏಪ್ರಿಲ್‌ 30ರಂದು ಬೆಂಗಳೂರಿನಲ್ಲಿ ಮದುವೆಯಾದರು.

ಕೆಲಕಾಲ ಅಮೆರಿಕದ ಅರಿಝೋನಾದಲ್ಲೂ ನೆಲೆಸಿದ್ದ, ಸುನ್ನಿ ಮುಸ್ಲಿಂ ಪಂಗಡಕ್ಕೆ ಸೇರಿದ ಈ ದಂಪತಿಗೆ 2013ರ ಆಗಸ್ಟ್‌ 1ರಂದು ಗಂಡು ಮಗು ಜನಿಸಿತು. ನಂತರ ಇಬ್ಬರ ನಡುವೆ ಉಂಟಾದ ಮನಸ್ತಾಪಗಳು ಈಗ ವಿವಾಹ ವಿಚ್ಛೇದನದ ಹಾದಿ ಸವೆಸುತ್ತಿವೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ವ್ಯಾಜ್ಯ, ಪೋಷಕರು ಮತ್ತು ಮಕ್ಕಳ ಕಾಯ್ದೆಯಡಿ ವ್ಯಾಜ್ಯ, ಮಾನನಷ್ಟ ಮೊಕದ್ದಮೆ, ವಿಚಾರಣಾ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಕೇಸುಗಳು ಮತ್ತು ಹೈಕೋರ್ಟ್‌ನಲ್ಲಿರುವ ಕ್ರಿಮಿನಲ್‌ ಅರ್ಜಿಯೂ ಸೇರಿದಂತೆ ದಂಪತಿಯ ನಡುವೆ ಒಟ್ಟು ಎಂಟು ಪ್ರಕರಣ ಕಾನೂನು ಸಂಘರ್ಷ ನಡೆಸಿವೆ..!

‘ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ನನ್ನನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದಾರೆ, ಮಾನಸಿಕ ಹಿಂಸೆಯಿಂದ ನಾನು ಯಾತನೆ ಅನುಭವಿಸುತ್ತಿದ್ದೇನೆ’ ಎಂಬುದು ಪತ್ನಿಯ ಆರೋಪ. ‘ಈಕೆಯ ಜೊತೆಗೆ ನನ್ನ ಬದುಕು ಹೊಂದಾಣಿಕೆಯಾಗುತ್ತಿಲ್ಲ’ ಎಂಬುದು ಪತಿಯ ಪ್ರತ್ಯಾರೋಪ. ಮದುವೆ ರದ್ದುಪಡಿಸಿ ವಿಚ್ಛೇದನ ನೀಡುವಂತೆ ಕೋರಿದ ಬಳಿಕ ಮೊಹಮ್ಮದ್‌ ಮುಷ್ತಾಕ್‌ ಮತ್ತೊಂದು ಮದುವೆಯಾಗಿದ್ದು, ಎರಡನೇ ಹೆಂಡತಿಯಿಂದ ಒಂದು ಹೆಣ್ಣು ಮಗು ಹೊಂದಿದ್ದಾರೆ.

ತಾಯಿಯ ಬಳಿ ಮಗ: ಏತನ್ಮಧ್ಯೆ ವಿಚ್ಛೇದನದ ಅರ್ಜಿ ದಾಖಲಾಗುತ್ತಿದ್ದಂತೆ ಅಯೇಷಾ ಬಾನು ಮಗನನ್ನು ತಮ್ಮ ಬಳಿಯೇ ಇರಿಸಿಕೊಂಡು ಸಲಹುತ್ತಿದ್ದಾರೆ. ಆದರೆ ಪತಿ, ‘ಆಯೇಷಾ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ನಾನು ಸಾಕಷ್ಟು ಶ್ರೀಮಂತನಿದ್ದೇನೆ ಮತ್ತು ನನ್ನ ಮಗನಿಗೆ ಉತ್ತಮ ಶಿಕ್ಷಣ ನೀಡಿ ಸಂಪೂರ್ಣ ಕುಟುಂಬದ ಪರಿಸರದಲ್ಲಿ ಅವನನ್ನು ಬೆಳೆಸುತ್ತೇನೆ. ಹಾಗಾಗಿ ಅವನನ್ನು ನನ್ನ ಬಳಿಯೇ ಇರಿಸಿಕೊಳ್ಳಲು ನಿರ್ದೇಶಿಸಬೇಕು‘ ಎಂದು ಕೋರಿ ಮೊಹಮ್ಮದ್‌ ಮುಷ್ತಾಕ್‌ ಕೌಟುಂಬಿಕ ನ್ಯಾಯಾಲಯದಲ್ಲಿ ಕಸ್ಟಡಿ ಅರ್ಜಿ ಸಲ್ಲಿಸಿದ್ದರು.

ಈ ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ‘ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ, ತಿಂಗಳ ಮೊದಲ ಮತ್ತು ಮೂರನೆಯ ಶನಿವಾರಗಳಂದು ಮಗನನ್ನು ನಾಲ್ಕು ಗಂಟೆಗಳ ಕಾಲ ಭೇಟಿ ಮಾಡಬಹುದು‘ ಎಂದು ಮುಷ್ತಾಕ್‌ಗೆ ಅವಕಾಶ ಕಲ್ಪಿಸಿತ್ತು. ಆದರೆ, ಮಗುವನ್ನು ತನ್ನ ಬಳಿಯೇ ಕರೆಸಿಕೊಂಡು ಬೆಳೆಸುವ ಹಟದಿಂದ ಮೊಹಮದ್‌ ಮುಷ್ತಾಕ್‌, ರಿಟ್‌ ಅರ್ಜಿ ಮುಖಾಂತರ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT