ಬೆಂಗಳೂರು: ‘ಸಂಸತ್ ಕಾರ್ಯಕಲಾಪ ನಡೆಯಲು ಬಿಡದೆ ವಿರೋಧ ಪಕ್ಷಗಳು ದೊಡ್ಡ ಅಪರಾಧ ಮಾಡಿವೆ. ಇದು ದೇಶದ್ರೋಹ ಎಂಬ ರೀತಿಯಲ್ಲಿ ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ಅವರು ಸತ್ಯಾಂಶ ಮರೆಮಾಚಿ, ಸುಳ್ಳು ಪ್ರಚಾರ ಮಾಡುತ್ತಿದ್ದಾರೆ’ ಎಂದು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಎಲ್. ಹನುಮಂತಯ್ಯ ಮತ್ತು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಈ ಇಬ್ಬರೂ, ‘ಕೇಂದ್ರಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲು ವಿಫಲ ವಾಗಿದೆ. ಸರ್ಕಾರ ತನ್ನ ಹಟದಲ್ಲಿ ಗೆದ್ದಿರಬಹುದು. ಆದರೆ, ನೈತಿಕತೆ ಕಳೆದು ಕೊಂಡಿದೆ. 200 ಬಾಡಿಗೆ ಮಾರ್ಷಲ್‌ಗಳನ್ನು ಕರೆದುಕೊಂಡು ಬಂದುಸಂಸತ್ ನಡೆಸಲಾಗಿದೆ. ಮಹಿಳಾ ಸಂಸದರ ಮೇಲೆ ಹಲ್ಲೆ ನಡೆಸಲಾಗಿದೆ. ಈ ರೀತಿ ಸದನ ನಡೆಸುವ ಸ್ಥಿತಿನಿರ್ಮಾಣವಾಗಿದೆ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿದೆಯೇ’ ಎಂದು ಅವರು ಪ್ರಶ್ನಿಸಿದರು.
‘ಪೆಗಾಸಸ್ ತಂತ್ರಾಂಶ ಮೂಲಕ ಕದ್ದಾಲಿಕೆ, ರೈತರ ಪ್ರತಿಭಟನೆ, ಬೆಲೆ ಏರಿಕೆ ವಿಚಾರವಾಗಿ ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷಗಳು ನೋಟಿಸ್ ಕೊಟ್ಟಿದ್ದರೂ ಸರ್ಕಾರ ಚರ್ಚೆಗೆ ಮುಂದಾಗಲಿಲ್ಲ. ಕೇಂದ್ರ ಸರ್ಕಾರ ಪೆಗಾಸಸ್ ಮೂಲಕ ಕದ್ದಾಲಿಕೆ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದುದು’ ಎಂದು ಹನುಮಂತಯ್ಯ ಅವರು ದೂರಿದರು.
ವಾಮಮಾರ್ಗದ ಮೂಲಕ ಅಧಿಕಾರಕ್ಕೆ:
‘ಲೋಕಸಭೆ ಹಾಗೂ ರಾಜ್ಯಸಭೆ ಹೇಗೆ ನಡೆದಿದೆ ಎಂದು ದೇಶದ ಜನರು ನೋಡಿದ್ದಾರೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ತಮಗೆ ಬೇಕಾದ ಕಾನೂನು ತರಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸದನದ ಗೌರವ ಹಾಳು ಮಾಡಿರುವ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ನಾಲ್ಕು ವಾರಗಳ ಕಾಲ ನಡೆದ ಸದನದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪೆಗಾಸಸ್ ಬಗ್ಗೆ ಚರ್ಚೆ ಮಾಡಲಿಲ್ಲ’ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.