ಗುರುವಾರ , ನವೆಂಬರ್ 26, 2020
19 °C
ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಎನ್‌. ವೆಂಕಟರೆಡ್ಡಿ

‘ಹೊಸ ಕಾಯ್ದೆಗಳಿಂದ ರೈತರ ಬಲವರ್ಧನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆಗಳ (ಎಪಿಎಂಸಿ) ಸುಧಾರಣೆಯೂ ಸೇರಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿ ತಿದ್ದುಪಡಿ ಕಾಯ್ದೆಗಳು ದೇಶದ ರೈತರಿಗೆ ಬಲ ತುಂಬಲಿವೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಎನ್. ವೆಂಕಟ ರೆಡ್ಡಿ ಹೇಳಿದರು.

ಕೃಷಿ ಸಂಬಂಧಿ ಹೊಸ ಕಾಯ್ದೆಗಳ ಕುರಿತು ಬೆಂಗಳೂರು ಚೇಂಬರ್‌ ಆಫ್‌ ಇಂಡಸ್ಟ್ರಿ ಅಂಡ್‌ ಕಾಮರ್ಸ್‌ (ಬಿಸಿಐಸಿ) ಗುರುವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಇರುವ ಮಧ್ಯವರ್ತಿಗಳ ಹಾವಳಿ, ತೂಕದಲ್ಲಿ ವಂಚನೆಯಂತಹ ಸಮಸ್ಯೆಗಳನ್ನು ಹೊಸ ಕಾಯ್ದೆಗಳು ಮೂಲೋತ್ಪಾಟನೆ ಮಾಡಲಿವೆ’ ಎಂದರು.

ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದ ‘ಒಂದು ದೇಶ– ಒಂದು ಮಾರುಕಟ್ಟೆ’ ಎಂಬ ಕಲ್ಪನೆ ಅನುಷ್ಠಾನಕ್ಕೆ ಬರಲಿದೆ. ರೈತರು ಮತ್ತು ವರ್ತಕರ ನಡುವೆ ನೇರವಾದ ಸಂಪರ್ಕ, ವಹಿವಾಟು ಸಾಧ್ಯವಾಗಲಿದೆ. ಬೇಡಿಕೆ ಆಧಾರಿತ ಕೃಷಿ ಚಟುವಟಿಕೆಗಳಿಗೆ ಹೊಸ ವ್ಯವಸ್ಥೆ ಪ್ರೋತ್ಸಾಹ ನೀಡುತ್ತದೆ’ ಎಂದು ಹೇಳಿದರು.

‘ದೇಶದ ಬಹುತೇಕ ಎಪಿಎಂಸಿಗಳ ಸ್ಥಿತಿ ಶೋಚನೀಯವಾಗಿದೆ. ಕೃಷಿ ಉತ್ಪನ್ನಗಳನ್ನು ನೆಲದ ಮೇಲೆ ಸುರಿದು, ಮಾರಾಟ ಮಾಡಬೇಕಾದ ಸ್ಥಿತಿ ಇದೆ. ಎಪಿಎಂಸಿ ಉಗ್ರಾಣಗಳಲ್ಲಿ ದಾಸ್ತಾನು ಇರಿಸುವ ಕೃಷಿ ಉತ್ಪನ್ನಗಳ ತೂಕದಲ್ಲಿ ಶೇಕಡ 5ರಿಂದ ಶೇ 10ರಷ್ಟು ಕಡಿತ ಮಾಡಲಾಗುತ್ತದೆ. ಇನ್ನು ಅಂತಹ ಸಮಸ್ಯೆ ಇರುವುದಿಲ್ಲ’ ಎಂದರು.

ಇತ್ತೀಚಿನ ವರ್ಷಗಳಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಸಾಧ್ಯವಾಗದೇ ನಷ್ಟ ಅನುಭವಿಸಿ, ಆತ್ಮಹತ್ಯೆಯ ಹಾದಿ ಹಿಡಿದಿದ್ದರು. ಹೊಸ ವ್ಯವಸ್ಥೆಯಿಂದ ಈ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ರೆಡ್ಡಿ ಪ್ರತಿಪಾದಿಸಿದರು.

ಹೊಸ ಕಾಯ್ದೆಗಳ ಜಾರಿಗೆ ಪೂರಕವಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಎಪಿಎಂಸಿಗಳನ್ನು ಆದಾಯದ ಮೂಲಗಳೆಂದು ಪರಿಗಣಿಸುವುದನ್ನು ನಿಲ್ಲಿಸಬೇಕು. ಎಪಿಎಂಸಿ ಸೆಸ್‌ ಮತ್ತು ಪರವಾನಗಿ ಶುಲ್ಕ ಸಂಗ್ರಹಣೆ ರದ್ದು ಮಾಡಬೇಕು ಎಂದರು.

ನೆದರ್ಲೆಂಡ್‌ನ ನನ್‌ಹೆಮ್ಸ್‌ ಕಂಪನಿಯ ಏಷ್ಯಾ ಪೆಸಿಫಿಕ್‌ ವಲಯದ ಮಾಜಿ ಮುಖ್ಯಸ್ಥ ಡಾ.ಶರಣ್‌ ಅಂಗಡಿ ಮಾತನಾಡಿ, ‘ಕೃಷಿ ಸಂಬಂಧಿ ಹೊಸ ಕಾಯ್ದೆಗಳಿಂದ ಕೃಷಿ ಉತ್ಪನ್ನಗಳಿಗೆ ನ್ಯಾಯಸಮ್ಮತ ಬೆಲೆ ದೊರಕಲಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಹರಿದುಬರಲಿದೆ. ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಮತ್ತು ಔಷಧಿಗಳು ಭಾರತೀಯ ರೈತರಿಗೂ ದೊರಕಲಿವೆ’ ಎಂದು ಹೇಳಿದರು.

ಬಿಸಿಐಸಿ ಕೃಷಿ ಮತ್ತು ಆಹಾರ ಸಂಸ್ಕರಣಾ ತಜ್ಞರ ಸಮಿತಿ ಅಧ್ಯಕ್ಷ ಅಂಕುರ್‌ ಭೌಮಿಕ್‌ ಮತ್ತು ಸಹ ಅಧ್ಯಕ್ಷ ನರಸಿಂಹ ನಕ್ಷತ್ರಿ ಸಂವಾದ ನಿರ್ವಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು