ಮಂಗಳವಾರ, ಸೆಪ್ಟೆಂಬರ್ 28, 2021
24 °C

ವಿಧಾನಸಭೆ: ಹೀಗಿತ್ತು ಬೊಮ್ಮಾಯಿ ಸಿಎಂ ಆದ ಬಳಿಕ ನಡೆದ ಮೊದಲ ಅಧಿವೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹಿಂದಿನ (ನಾಲ್ಕನೇ) ಸಾಲು, ಗಡ್ಡ ಬೋಳಿಸಿಕೊಂಡು ಬಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ. ಹಸಿರು ಶಾಲು ತೊಟ್ಟು ಕುಳಿತ್ತಿದ್ದ ಡಿ.ಕೆ.ಶಿವಕುಮಾರ್, ಮಾಸ್ಕ್‌ ಮತ್ತು ಕೈಗೆ ಗ್ಲೌಸ್‌ ಇಲ್ಲದೇ ಕುಳಿತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ವಿಧಾನಸಭೆಯ ಪ್ರಥಮ ಅಧಿವೇಶನದಲ್ಲಿ ಕಂಡು ಬಂದ ದೃಶ್ಯಗಳು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಅವರು ಕೊನೆಯ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಕೆಲವು ದಶಕಗಳಿಂದ ಅಡಳಿತ ಮತ್ತು ವಿರೋಧ ಪಕ್ಷದಲ್ಲಿದ್ದಾಗ ಮುಂದಿನ ಸಾಲಿನಲ್ಲೇ ಕೂರುತ್ತಿದ್ದ ಇಬ್ಬರಿಗೂ ಮುಖ್ಯಮಂತ್ರಿ ಆಸನದಿಂದ ಹಿಂದಿನ ನಾಲ್ಕನೇ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಯಡಿಯೂರಪ್ಪ ಅವರಿಗೆ ಮುಖ್ಯ ಸಚೇತಕರಿಗೆ ಮೀಸಲಾದ ಆಸನದ ಪಕ್ಕವೇ ಆಸನ ನೀಡಲಾಗಿದೆ. ಶಾಸಕ ಸುರೇಶ್‌ ಕುಮಾರ್‌ ಅವರಿಗೂ ಇದೇ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುವವರೆಗೆ ತಾವು ಗಡ್ಡ ಬೋಳಿಸುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು. ಮುಖ್ಯಮಂತ್ರಿ ಬದಲಾವಣೆ ಆದ ಬೆನ್ನಲ್ಲೇ ಗಡ್ಡ ಬೋಳಿಸಿಕೊಂಡಿದ್ದ ಯತ್ನಾಳ್‌ ಅವರು ಸೋಮವಾರ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡರು.

ಶಾಸಕನಾಗಿ ಬರುವುದಕ್ಕೆ ಬೇಸರವಿಲ್ಲ: ಮುಖ್ಯಮಂತ್ರಿ ಸ್ಥಾನಕ್ಕೆ ಸಂತೋಷದಿಂದಲೇ ರಾಜೀನಾಮೆ ನೀಡಿದ್ದೇನೆ. ಈ ಬಾರಿ ಅಧಿವೇಶನಕ್ಕೆ ಕೇವಲ ಶಾಸಕನಾಗಿ ಬರುತ್ತಿರುವುದಕ್ಕೆ ಬೇಸರವಿಲ್ಲ. ಮುಖ್ಯ ಸಚೇತಕರ ‍ಪಕ್ಕದಲ್ಲೇ ಆಸನ ವ್ಯವಸ್ಥೆಗೆ ಮನವಿ ಮಾಡಿದ್ದೆ. ಅದಕ್ಕೆ ಅವರು ಒಪ್ಪಿಗೆ ನೀಡಿ ಪಕ್ಕದಲ್ಲೇ ವ್ಯವಸ್ಥೆ ಮಾಡಿದ್ದಾರೆ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಒಬ್ಬ ಶಾಸಕನಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡಬೇಕೆಂದೇನೂ ಇಲ್ಲ. ಮುಂದಿನ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ. ಇದಕ್ಕಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಜತೆ ರಾಜ್ಯ ವ್ಯಾಪಿ ಪ್ರವಾಸ ಮಾಡುತ್ತೇನೆ ಎಂದು ಅವರು ಹೇಳಿದರು.

ಸಂತಾಪದ ಬಳಿಕ ಕಲಾಪ ಮುಂದೂಡಿಕೆ: ವಿಧಾನಸಭೆಯ ಹಾಲಿ ಸದಸ್ಯ ಸಿ.ಎಂ.ಉದಾಸಿ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೃಷ್ಣ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್‌, ಕವಿ ಸಿದ್ದಲಿಂಗಯ್ಯ, ಪ್ರೊ.ಜಿ.ವೆಂಕಟಸುಬ್ಬಯ್ಯ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಸೇರಿ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು