ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಹಿತಾಸಕ್ತಿಗೆ ತಕ್ಕಂತೆ ನಿರ್ಣಯ: ವಿದೇಶಾಂಗ ಸಚಿವ ಎಸ್‌. ಜೈಶಂಕರ್

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆ ವಿದೇಶಾಂಗ ಸಚಿವರ ಸಂವಾದ
Last Updated 12 ಆಗಸ್ಟ್ 2022, 21:36 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಹಿತಾಸಕ್ತಿ ಅನುಗುಣವಾಗಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಸಮರ್ಥಿಸಿಕೊಂಡರು.

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಷ್ಯಾ–ಉಕ್ರೇನ್‌ ಬಿಕ್ಕಟ್ಟು ಸೇರಿ ವಿವಿಧ ವಿಷಯಗಳ ಕುರಿತ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಲೆಕ್ಕಾಚಾರ, ಅನುಭವ ಮತ್ತು ದೇಶದ ಹಿತಾಸಕ್ತಿ ಅನುಸಾರ ಕಾರ್ಯತಂತ್ರಗಳನ್ನು ರೂಪಿಸಿ ದೃಢವಾದ ನಿಲುವು ಕೈಗೊಂಡಿದ್ದೇವೆ. ಇದರಿಂದ, ನಮ್ಮ ಹಿತಾಸಕ್ತಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಿಲ್ಲ’ ಎಂದು ಪ್ರತಿಪಾದಿಸಿದರು.

ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಯಾವ ರೀತಿಯ ಕಠಿಣ ಮತ್ತು ಸವಾಲಿನ ಕಾರ್ಯಗಳನ್ನು ಎದುರಿಸಬೇಕಾಯಿತು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಕೆಲಸವು ಸಂತೋಷ ನೀಡುತ್ತದೆ. ಹೀಗಾಗಿ, ಯಾವುದೇ ಪರಿಸ್ಥಿತಿಯನ್ನು ಒತ್ತಡ ಅಥವಾ ಸವಾಲು ಎಂದು ಪರಿಗಣಿಸುವುದಿಲ್ಲ. ಎಲ್ಲವನ್ನು ಕೆಲಸದ ಭಾಗವಾಗಿಯೇ ನೋಡಬೇಕು’ ಎಂದು ಕಿವಿಮಾತು ಹೇಳಿದರು.

‘ಎಲೆಕ್ಟ್ರಾನಿಕ್ಸ್‌ ಮತ್ತು ಇಂಧನ ಕ್ಷೇತ್ರಗಳಲ್ಲಿ ನಾವು ಸ್ವಾವಲಂಬನೆ ಸಾಧಿಸಬೇಕಾದ ಅಗತ್ಯ ಇದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ನಾವು ಇತರ ದೇಶಗಳ ಮೇಲೆ ಅವಲಂಬನೆಯಾಗುವುದನ್ನು ತಪ್ಪಿಸಲು ವ್ಯವಸ್ಥಿತವಾದ ಯೋಜನೆಗಳನ್ನು ರೂಪಿಸಬೇಕಾಗಿದೆ. ಚಿಪ್‌ಗಳನ್ನು ಸಹ ಇಲ್ಲಿಯೇ ತಯಾರಿಸಬೇಕು’ ಎಂದರು.

‘ದೇಶದಲ್ಲಿ ಎಲ್ಲ ವಲಯಗಳಲ್ಲೂ ಆಮೂಲಾಗ್ರ ರೀತಿಯಲ್ಲಿ ಬದಲಾವಣೆಗಳಾಗುತ್ತಿದ್ದು, ಆತ್ಮವಿಶ್ವಾಸ ಹೆಚ್ಚುತ್ತಿದೆ. ಇದರಿಂದ, ಯೋಚನೆಗಳಲ್ಲೂ ಬದಲಾವಣೆಯಾಗಿವೆ. ಕ್ರಿಕೆಟ್‌ ತಂಡದಲ್ಲೂ ಈಗ ವೈವಿಧ್ಯತೆ ಇದೆ. ಗ್ರಾಮೀಣ ಪ್ರದೇಶದ ಯುವಕ ಸಹ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸೃಷ್ಟಿಯಾಗಿದೆ’ ಎಂದು ಹೇಳಿದರು.

‘ಜಗತ್ತು ಈಗ ಭಾರತದತ್ತ ನೋಡುತ್ತಿದೆ. ನಾವು ಸಾಧಿಸಿದ ಪ್ರಗತಿಯೇ ಇದಕ್ಕೆ ಕಾರಣ. ಆದರೆ, ಸಾಧಿಸುವುದು ಸಾಕಷ್ಟಿದ್ದು, ಮಹತ್ವಾಕಾಂಕ್ಷೆಯನ್ನು ಹೊಂದಬೇಕಾಗಿದೆ. ಅತ್ಯುತ್ತಮ ಕೌಶಲ ಹೊಂದಿರುವ ಪ್ರತಿಭೆಗಳ ಸದ್ಬಳಕೆಯಾಗಬೇಕಾಗಿದೆ’ ಎಂದರು.

‘ವಿದೇಶಾಂಗ ನೀತಿಗಳು ಜನಸಾಮಾನ್ಯರ ಬದುಕಿನ ಮೇಲೆಯೂ ಅಗಾಧ ಪರಿಣಾಮಗಳನ್ನು ಬೀರುತ್ತವೆ. ಪೆಟ್ರೋಲ್‌ ದರಗಳಲ್ಲಿನ ವ್ಯತ್ಯಾಸಗಳೇ ಇದಕ್ಕೆ ಉತ್ತಮ ಉದಾಹರಣೆ. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ತೀವ್ರ ಕೊರತೆ ಎದುರಾಯಿತು. ಆಗ ಕತಾರ್‌, ಸಿಂಗಾಪೂರ್‌ ಸೇರಿ ವಿವಿಧ ದೇಶಗಳಿಂದ ತ್ವರಿತಗತಿಯಲ್ಲಿ ಆಮ್ಲಜನಕ ಆಮದು ಮಾಡಿಕೊಳ್ಳಲಾಯಿತು. ಈ ದೇಶಗಳ ಜತೆಗಿನ ಉತ್ತಮ ಸಂಬಂಧವೂ ಇದಕ್ಕೆ ಕಾರಣ’ ಎಂದು ವಿವರಿಸಿದರು.

ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪ‍ತಿ ಪ್ರೊ. ಎಂ.ಆರ್‌. ದೊರೆಸ್ವಾಮಿ, ಕುಲಪತಿ ಡಾ.ಜೆ. ಸೂರ್ಯಪ್ರಸಾದ್‌, ಸಹಕುಲಾಧಿಪತಿ ಪ್ರೊ. ಡಿ.ಜವಾಹರ್‌, ಕುಲಸಚಿವ ಡಾ.ಕೆ.ಎಸ್‌. ಶ್ರೀಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT