ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಉತ್ಪನ್ನಗಳೇ ಪ್ರಾಣಿ, ಮನುಷ್ಯರಿಗೆ ಜೀವಾಳ

Last Updated 19 ಜನವರಿ 2021, 18:47 IST
ಅಕ್ಷರ ಗಾತ್ರ

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಮಲೆನಾಡಿನ ಜನರು ಅರಣ್ಯದ ಜತೆ ಸಹಜೀವನ ನಡೆಸುತ್ತಾ ಬಂದಿದ್ದಾರೆ. ಪ್ರಾಣಿ ಮತ್ತು ಮಾನವನ ಮಧ್ಯೆಯೂ ಸಮನ್ವಯ ಇದೆ. ಇಂತಹ ಸಹ ಜೀವನ, ಸಮನ್ವಯಕ್ಕೆ ನೈಸರ್ಗಿಕ ಅರಣ್ಯವೇ ಕಾರಣ.

ನೈಸರ್ಗಿಕ ಅರಣ್ಯದಲ್ಲಿ ಜೀವವೈವಿಧ್ಯ ಅಪಾರವಾಗಿದೆ. ಸಸ್ಯ, ಕೀಟ, ಪ್ರಾಣಿ ಎಲ್ಲವೂ ಸಮತೋಲನವಾಗಿವೆ. ಕಾಡಿನ ಭಾಗದಲ್ಲಿ ವಾಸಿಸುವ ಗ್ರಾಮೀಣ ಜನರು ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದಾರೆ. ಬೋಳು ಗುಡ್ಡಗಳ ಮೇಲೆ ಹುಲ್ಲು ದಟ್ಟವಾಗಿದೆ. ದನಕರುಗಳು ಮೇಯುತ್ತವೆ. ಬೆತ್ತ, ಬಿದಿರುಗಳಿಂದ ಸ್ಥಳೀಯ ಕೈಗಾರಿಕೆಗಳು ನಡೆಯುತ್ತವೆ. ಕರಡವನ್ನು (ಹುಲ್ಲು) ಹಳ್ಳಿಗಳಲ್ಲಿ ಗುಡಿಸಲಿಗೆ ಚಾವಣಿ ಹಾಕಲು ಬಳಸುತ್ತಾರೆ. ಗದ್ದೆ ಮತ್ತು ತೋಟಗಳಿಗೆ ಅರಣ್ಯದಲ್ಲಿ ಬೆಳೆಯುವ ಸೊಪ್ಪು, ಸೆದೆ ಗೊಬ್ಬರವಾಗಿ ಬಳಸುತ್ತಾರೆ. ಔಷಧೀಯ ಸಸ್ಯಗಳು ಆರೋಗ್ಯಕ್ಕೆ ಸಂಜೀವಿನಿಯಾಗಿವೆ. ಮಲೆನಾಡಿನ ಅರಣ್ಯಗಳು ಜನರ ಬದುಕಿಗೆ ತುಂಬಾ ಸಹಾಯ ಮಾಡುತ್ತಿವೆ.

ಇಂತಹ ವೈವಿಧ್ಯದ ಸಹಜೀವನಕ್ಕೆ ಪೆಟ್ಟುಕೊಟ್ಟಿದ್ದು ಇದೇ ಅಕೇಶಿಯಾ ನೆಡುತೋಪುಗಳು. ಈಗ ಮಲೆನಾಡಿನ ಜಿಲ್ಲೆಗಳಲ್ಲಿ ನಮ್ಮೂರಿಗೆ ಅಕೇಶಿಯಾ ಬೇಡ ಎನ್ನುವ ಜನಪರ ಚಳವಳಿ ಆರಂಭವಾಗಿರುವುದು ಇದೇ ಕಾರಣಕ್ಕಾಗಿ.

ಎಂಪಿಎಂ ಮತ್ತು ರಾಜ್ಯ ಸರ್ಕಾರದ ನಡುವಣ ಒಪ್ಪಂದದ ಪ್ರಕಾರ ನೆಡುತೋಪು ಬೆಳೆಸಲು ಅವಕಾಶ ಕಲ್ಪಿಸಲಾಗಿತ್ತು. ಅಕೇಶಿಯಾ ಕಾರಣ ಮಲೆನಾಡಿನಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವ ವೈವಿಧ್ಯ ಸಂಪೂರ್ಣ ನಾಶವಾಗಿದೆ. ಪ್ರಾಣಿ ಪಕ್ಷಿಗಳಿಗೆ ತಿನ್ನಲು ಏನೂ ಸಿಗುತ್ತಿಲ್ಲ.

ಅತ್ತ ಅಕೇಶಿಯಾ ಬೆಳೆದು ಮೈಸೂರು ಪೇಪರ್ ಮಿಲ್‌ ಆದರೂ ಉದ್ಧಾರವಾಯಿತೇ? ಅದೂ ಭ್ರಷ್ಟಾಚಾರದ ಕಾರಣದಿಂದ ಮುಳುಗಿಹೋಯಿತು. ಉತ್ಪಾದನೆ ನಿಲ್ಲಿಸಿ 5 ವರ್ಷ ಆಯಿತು. ಈಗ ಮತ್ತೆ ಒಪ್ಪಂದ ಮುಂದುವರಿಕೆ ಅಗತ್ಯವಿದೆಯೇ? ಸರ್ಕಾರದ ಈ ನಿರ್ಧಾರ ಜನರ ನಂಬಿಕೆ, ಸಮಾಜಕ್ಕೆ ಬಗೆದ ದ್ರೋಹ. ಇಂತಹ ಒಪ್ಪಂದ ತಕ್ಷಣ ರದ್ದು ಮಾಡಬೇಕು. ಅರಣ್ಯ ಇಲಾಖೆಗೆ ಮರಳಿಸಬೇಕು. ಆ ಜಾಗದಲ್ಲಿ ಹಣ್ಣು, ಹಂಪಲು, ಮೇವು ಒಳಗೊಂಡ ನೈಸರ್ಗಿಕ ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಬೇಕು.

ಪ್ರೊ.ಬಿ.ಎಂ.ಕುಮಾರಸ್ವಾಮಿ, ಪರಿಸರವಾದಿ, ಶಿವಮೊಗ್ಗ

***

ಭೂಮಿ ಸಂರಕ್ಷಣೆ ಅಗತ್ಯ

ಎಂಪಿಎಂ ಅಧೀನದಲ್ಲಿರುವ ನೆಡುತೋಪುಗಳನ್ನು ಅರಣ್ಯ ಇಲಾಖೆಗೆ ನೀಡಿ, ಅಲ್ಲಿ ನೈಸರ್ಗಿಕ ಕಾಡು ಬೆಳಸಿದರೆ ಭೂಮಿ ಒತ್ತುವರಿ ತಡೆ ಸಾಧ್ಯವೇ? ಅರಣ್ಯ ಇಲಾಖೆ ತನ್ನ ಅಧೀನದಲ್ಲಿರುವ ಎಷ್ಟು ಭೂಮಿ ಸಂರಕ್ಷಿಸಿದೆ? ಇದುವರೆಗೂ ಎಷ್ಟು ಹೆಕ್ಟೇರ್‌ ಅರಣ್ಯವನ್ನು ಸಾಗುವಳಿಗಾಗಿ ಬಲಿಕೊಡಲಾಗಿದೆ ಎನ್ನುವ ಕುರಿತು ಚರ್ಚೆ ನಡೆಯಬೇಕಿದೆ.

ಅಕೇಶಿಯಾ ಸೇರಿದಂತೆ ಏಕ ಜಾತಿಯ ಸಸ್ಯ ಸಂಕುಲಕ್ಕೆ ವಿರೋಧ ಸರಿ ಇದೆ. ನಿಸರ್ಗದ ಸಮತೋಲನ ಕಾಯ್ದುಕೊಳ್ಳಬೇಕು ಎನ್ನುವುದು ಎಲ್ಲರೂ ಒಪ್ಪುವ ವಿಚಾರ. ಆದರೆ, ಲಕ್ಷಾಂತರ ಎಕರೆ ಅರಣ್ಯ ನಾಶ ಮಾಡಿ, ರಬ್ಬರ್‌, ಶುಂಠಿ ಬೆಳೆದರೆ ಪರಿಸರ ಸಮತೋಲನವಾಗುತ್ತದೆಯೇ? ಎಂಪಿಎಂಗೆ ಭೂಮಿ ಕೊಟ್ಟ ಕಾರಣಕ್ಕೆ 22 ಸಾವಿರ ಹೆಕ್ಟೇರ್‌ ಇಂದಿಗೂ ಉಳಿದಿದೆ ಎನ್ನುವ ಸತ್ಯವನ್ನೂ ಒಪ್ಪಿಕೊಳ್ಳಬೇಕಿದೆ. ಇಲ್ಲದಿದ್ದರೆ ಈ ಭೂಮಿಯೂ ಒತ್ತುವರಿಯಾಗುತ್ತಿತ್ತು.ಬಲಿಷ್ಠರೇ ಒತ್ತುವರಿ ಮಾಡಿಕೊಳ್ಳುತ್ತಿದ್ದರು.

ಪ್ರತಿ ವರ್ಷ ಅರಣ್ಯ ಇಲಾಖೆ ಲಕ್ಷಾಂತರ ಗಿಡಗಳನ್ನು ಬೆಳೆಸುತ್ತಿದೆ. ಅಂತಹ ಅರಣ್ಯಗಳು ಎಲ್ಲಿವೆ? ಅರಣ್ಯ ಇಲಾಖೆಗೆ ವಹಿಸಿದರೆ ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಯಾರಿಗೂ ಉಳಿದಿಲ್ಲ.

ನೂರಾರು ವಾಚರ್‌ಗಳು ನೆಡುತೋಪುಗಳಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಕಾರ್ಖಾನೆ ಮುಚ್ಚಿದ ಮೇಲೆ ಅವರ ಬದುಕು ಬೀದಿಗೆ ಬಿದ್ದಿದೆ. ಕಾರ್ಖಾನೆ ಪುನಃಶ್ಚೇತನದ ತುರ್ತು ಅಗತ್ಯವಿದೆ. ವಿಐಎಸ್‌ಎಲ್‌, ಶ್ರೀಗಂಧ, ಬೆಂಕಿಪೊಟ್ಟಣ ಕಾರ್ಖಾನೆ ಸೇರಿದಂತೆ ಹಲವು ಬಾಗಿಲು ಮುಚ್ಚಿವೆ. ಪರಿಸರ ಉಳಿಸುವ ಜತೆಗೆ ಬಡವರ ಬದುಕನ್ನೂ ಗಮನಿಸಬೇಕಿದೆ. ಪರಿಸರ ಉಳಿಯಬೇಕೆಂದರೆ ಭೂಮಿಯನ್ನು ಮೊದಲು ಉಳಿಸಬೇಕು. ಹಾಗೆ ಪರಿಸರದ ಹೆಸರಲ್ಲಿ ಬಡವರ ಬದುಕನ್ನು ನಾಗರಿಕ ಸೌಲಭ್ಯಗಳಿಂದ ವಂಚಿತಗೊಳಿಸಬಾರದು.

ಎಂಪಿಎಂ ಸರ್‌.ಎಂ.ವಿಶ್ವೇಶ್ವರಯ್ಯನವರ ಕನಸಾಗಿತ್ತು. ಕಾರ್ಖಾನೆ ಮುಚ್ಚಲು ಸರ್ಕಾರ ಯಾವ ಕಾರಣಕ್ಕೂ ಅವಕಾಶ ನೀಡಬಾರದು. ಎಂಪಿಎಂ ಭೂಮಿಯಲ್ಲಿ ನಿಸರ್ಗಕ್ಕೆ ಪೂರಕ ಮರಗಳನ್ನು ಬೆಳೆಸಲು ಕ್ರಮಕೈಗೊಳ್ಳಬೇಕು.

ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT