ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವಿನ ವಿಷಕ್ಕೆ ಪ್ರತಿವಿಷ ಉತ್ಪಾದಿಸುವ ಕೇಂದ್ರಕ್ಕೆ ಬೆಂಗಳೂರಲ್ಲಿ ಶಂಕುಸ್ಥಾಪ‍ನೆ

ದೇಶದಲ್ಲೇ ಮೊದಲು: ಹಾವು ಕಡಿತದಿಂದ ಸಾವು ತಪ್ಪಿಸಲು ನೆರವು 
Last Updated 4 ಜುಲೈ 2022, 12:14 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾವು ಹಾಗೂ ಮತ್ತಿತರ ಜಂತುಗಳ ವಿಷಕ್ಕೆ ಪ್ರತಿಯಾಗಿ ವಿಷ ಉತ್ಪಾದಿಸಲು ನೆರವಾಗುವ ‘ಪ್ರತಿವಿಷ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ’ದ ಕಟ್ಟಡ ನಿರ್ಮಾಣಕ್ಕೆಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ‘ಬೆಂಗಳೂರು ಹೆಲಿಕ್ಸ್ ಬಯೋಟೆಕ್ ಪಾರ್ಕ್’ನ ಐಬಿಎಬಿ ಸಂಸ್ಥೆ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

‘ಒಟ್ಟು ₹7 ಕೋಟಿ ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಕೇಂದ್ರವು ದೇಶದಲ್ಲಿ ಪ್ರಮುಖವಾಗಿ ಹಾವಿನ ಕಡಿತದಿಂದ ಸಂಭವಿಸುತ್ತಿರುವ ರೈತರ ಸಾವಿನ ಪ್ರಮಾಣವನ್ನು ತಗ್ಗಿಸಲು ನೆರವಾಗಲಿದೆ’ ಎಂದು ಸಚಿವರು ತಿಳಿಸಿದರು.

‘ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್), ಐಬಿಎಬಿ (ಇನ್‌ಸ್ಟಿಟ್ಯೂಟ್‌ ಆಫ್‌ಬಯೋಇನ್ ಫರ್ಮ್ಯಾಟಿಕ್ಸ್ ಆ್ಯಂಡ್‌ ಅಪ್ಲೈಡ್ ಬಯೊಟೆಕ್ನಾಲಜಿ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಸಹಭಾಗಿತ್ವದಡಿ ಈ ನೂತನ ಸಂಶೋಧನಾ ಕೇಂದ್ರವು ಅಸ್ತಿತ್ವಕ್ಕೆ ಬರುತ್ತಿದೆ. ಇಂತಹ ಒಂದು ಕೇಂದ್ರವು ಭಾರತದಲ್ಲೇ ಮೊದಲನೆಯದಾಗಿದೆ’ ಎಂದು ವಿವರಿಸಿದರು.

‘16 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಈ ಕೇಂದ್ರವು ಕಾರ್ಯಾರಂಭ ಮಾಡಲಿದೆ. ಇಲ್ಲಿನ ಸರ್ಪಗಾರದಲ್ಲಿ 23 ಪ್ರಭೇದಗಳಿಗೆ ಸೇರಿದ 500ಕ್ಕೂ ಹೆಚ್ಚು ಬಗೆಯ ವಿಷಯುಕ್ತ ಜಂತುಗಳನ್ನು ಅಧ್ಯಯನದ ಸಲುವಾಗಿ ಇಡಲಾಗುವುದು. ಜತೆಗೆ, ಭಾರತೀಯ ಉಪಖಂಡದಲ್ಲಿರುವ ವಿಷಪೂರಿತ ಚೇಳುಗಳು ಮತ್ತು ಜೇಡರ ಹುಳುಗಳು ಕೂಡ ಇರಲಿವೆ. ಪ್ರತಿವಿಷ ಚಿಕಿತ್ಸೆಯಲ್ಲಿ ಸಂಶೋಧನೆ ನಡೆಸುವ ಆಸಕ್ತಿ ಇರುವ ನವೋದ್ಯಮಗಳಿಗೆ ಉತ್ತೇಜನ ನೀಡಲಾಗುವುದು’ ಎಂದರು.

’ದೇಶದಲ್ಲಿ ಪ್ರತಿ ವರ್ಷ ಸರಾಸರಿ 58 ಸಾವಿರ ಸಾವುಗಳು ಹಾವುಗಳ ಕಡಿತದಿಂದ ಸಂಭವಿಸುತ್ತಿದ್ದು, 1.37 ಲಕ್ಷದಷ್ಟು ಮಂದಿ ಅಂಗವೈಕಲ್ಯಕ್ಕೆ ಒಳಗಾಗುತ್ತಿರುವುದು ಆತಂಕದ ಸಂಗತಿ. ಈ ಕೇಂದ್ರವು ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನಗಳ ಮೂಲಕ ಪ್ರತಿವಿಷ ಥೆರಪಿಗಳನ್ನು ಅಭಿವೃದ್ಧಿ ಪಡಿಸಲಿದೆ’ ಎಂದು ವಿವರಿಸಿದರು.

ಕೇಂದ್ರದ ಉದ್ದೇಶದ ಕುರಿತು ವಿವರಿಸಿದ ಐಐಎಸ್ಸಿಯ ಡಾ.ಕಾರ್ತೀಕ್ ಸುಣಗಾರ್ ಮಾತನಾಡಿ, ‘ಪರಿಸರದಲ್ಲಿ ಹಾವಿನಂತಹ ಸರೀಸೃಪಗಳಿಗೂ ಪ್ರಮುಖ ಸ್ಥಾನವಿದೆ. ಆದರೆ, ಅವುಗಳ ಕಡಿತದಿಂದ ಉಂಟಾಗುವ ಸಾವು ನೋವುಗಳನ್ನು ಕಡಿಮೆ ಮಾಡುವ ಜೀವರಕ್ಷಕ ಪ್ರತಿವಿಷಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಈಗ ಇರುವ ಕೊರತೆಯನ್ನು ಹೋಗಲಾಡಿಸುವುದು ನೂತನ ಕೇಂದ್ರದ ಗುರಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT