ಶುಕ್ರವಾರ, ಸೆಪ್ಟೆಂಬರ್ 17, 2021
25 °C

ಧನ ಸಹಾಯ: ಜಿಲ್ಲಾ ಮಟ್ಟದಲ್ಲಿ ಆಯ್ಕೆಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿಲ್ಲಾಧಿಕಾರಿಗಳ ಮೂಲಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಧನ ಸಹಾಯ ನೀಡಲು ಮುಂದಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಡೆಗೆ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಸ್ಥಗಿತವಾಗಿದ್ದ ಧನ ಸಹಾಯ ಯೋಜನೆಯನ್ನು ಬಿಜೆಪಿ ನೇತೃತ್ವದ ಸರ್ಕಾರವು ಮತ್ತೆ ಪ್ರಾರಂಭಿಸಿದ್ದು, ಪ್ರಸಕ್ತ ಸಾಲಿನಲ್ಲಿ ₹ 17 ಕೋಟಿ ಮೀಸಲಿಟ್ಟಿದೆ. 2018-19 ನೇ ಸಾಲಿನಲ್ಲಿ ಧನ ಸಹಾಯಕ್ಕೆ ತಜ್ಞರು ಅಂತಿಮ ಮಾಡಿದ ಪಟ್ಟಿಯಲ್ಲಿ ಕೆಲ ಸಂಘ–ಸಂಸ್ಥೆಗಳು ನಕಲಿ ಬಿಲ್‌ಗಳನ್ನು ಸಲ್ಲಿಕೆ ಮಾಡಿವೆ ಎಂಬ ಆರೋಪ ಎದುರಾಗಿತ್ತು. ಈ ಕಾರಣಕ್ಕೆ ಧನ ಸಹಾಯ ಪ್ರಕ್ರಿಯೆಯನ್ನು ಅಂದಿನ ಸರ್ಕಾರವು ತಡೆಹಿಡಿದಿತ್ತು. ಬಳಿಕ ₹ 2 ಲಕ್ಷಕ್ಕಿಂತ ಮೇಲ್ಪಟ್ಟು ಅನುದಾನ ಪಡೆಯುವ ಸಂಘ–ಸಂಸ್ಥೆಗಳ ಕಾರ್ಯ ಚಟುವಟಿಕೆಯನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮತ್ತೊಮ್ಮೆ ಪರಿಶೀಲಿಸಿ, ಹಂಚಿಕೆ ಮಾಡಲಾಗಿತ್ತು. 

ಕಳೆದ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪ‍ರಿಶಿಷ್ಟ ಪಂಗಡಗಳ ಸಂಘ–ಸಂಸ್ಥೆಗಳಿಗೆ ಕೂಡ ಜಿಲ್ಲಾಧಿಕಾರಿಗಳ ಮೂಲಕವೇ ಅನುದಾನ ನೀಡಲಾಗಿತ್ತು. ಇದೇ ಕ್ರಮದಲ್ಲಿ ಪ್ರಸಕ್ತ ಸಾಲಿನ ಧನ ಸಹಾಯ ಪ್ರಕ್ರಿಯೆ ನಡೆಸಲು ಇಲಾಖೆ ಮುಂದಾಗಿದೆ. ಆದರೆ, ಇಲಾಖೆಯ ಈ ಕ್ರಮವು ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಡಲಿದೆ ಎಂದು ಸಂಘ–ಸಂಸ್ಥೆಗಳ ಮುಖ್ಯಸ್ಥರು ಆರೋಪಿಸಿದ್ದಾರೆ. 

ಸಕಾಲದಲ್ಲಿ ನೆರವು ಸಿಗದು: ‘ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ನಾಡಿನ ಘನತೆಯನ್ನು ಹೆಚ್ಚಿಸುತ್ತಿರುವ ಬಹುತೇಕ ಸಂಘ–ಸಂಸ್ಥೆಗಳು ಸರ್ಕಾರ ನೀಡುವ ಧನ ಸಹಾಯವನ್ನೇ ಅವಲಂಬಿಸಿವೆ. ಆದರೆ, ಜಿಲ್ಲಾಧಿಕಾರಿಗಳ ಮೂಲಕ ಅನುದಾನವನ್ನು ಹಂಚಿಕೆ ಮಾಡಿದಲ್ಲಿ ಸಂಘ–ಸಂಸ್ಥೆಗಳ ಸಂಘಟಕರು ನಿರಂತರ ಅವರ ಕಚೇರಿಗೆ ಅಲೆದಾಡಬೇಕಾಗುತ್ತದೆ. ಹಾಗಾಗಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕವೇ ಈ ಪ್ರಕ್ರಿಯೆಯನ್ನು ನಡೆಸಬೇಕು’ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಒತ್ತಾಯಿಸಿದ್ದಾರೆ.

‘ಕಲೆ ಹಾಗೂ ಸಾಹಿತ್ಯ ಚಟುವಟಿಕೆಯನ್ನು ನೋಡಿಕೊಳ್ಳಲು ಪ್ರತ್ಯೇಕ ಇಲಾಖೆ ಇರುವಾಗ ಈ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುವುದು ಔಚಿತ್ಯಪೂರ್ಣವಲ್ಲ. ಇಲಾಖೆಯ ಅಧಿಕಾರಿಗಳು ಅಸಮರ್ಥರು ಎಂಬುದನ್ನು ತೋರಿಸಿದಂತಾಗುತ್ತದೆ’ ಎಂದು ತಿಳಿಸಿದ್ದಾರೆ. 

‘ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಕಾರ್ಯ ಚಟುವಟಿಕೆ ಪರಿಶೀಲಿಸಿ, ಅನುದಾನ ಹಂಚಿಕೆ ಮಾಡಿದಲ್ಲಿ ಭ್ರಷ್ಟಾಚಾರ ನಡೆಯಲಿದೆ. ದೊಡ್ಡ ಸಂಘ–ಸಂಸ್ಥೆಗಳ ಖಾತೆಗೆ ಮಾತ್ರ ಹಣ ಜಮಾ ಆಗುತ್ತದೆ. ದಾಖಲಾತಿ ಸಮರ್ಪಕವಾಗಿಲ್ಲ ಎಂಬ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಹಲವು ಕೆಲಸಗಳು ಇರುವುದರಿಂದ ಈ ಪ್ರಕ್ರಿಯೆ ಸಮಯಕ್ಕೆ ಸರಿಯಾಗಿ ನಡೆಯುವುದಿಲ್ಲ’ ಎಂದು ನಾಟಕ ಕಂಪನಿಯೊಂದರ ಮುಖ್ಯಸ್ಥರು ಅಸಮಾಧಾನ ವ್ಯಕ್ತಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು