ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಜಿ.ಟಿ.ದೇವೇಗೌಡ–ಎಸ್‌.ಟಿ.ಸೋಮಶೇಖರ್‌ ಭೇಟಿ

ಚುನಾವಣೆಗೂ 4 ತಿಂಗಳು ಮುನ್ನ ತೀರ್ಮಾನ: ಜಿ.ಟಿ.ದೇವೇಗೌಡ
Last Updated 14 ಮೇ 2022, 20:17 IST
ಅಕ್ಷರ ಗಾತ್ರ

ಮೈಸೂರು: ಚುನಾವಣೆ ವರ್ಷದಲ್ಲಿ ಪಕ್ಷಾಂತರ ಪರ್ವ ವೇಗ ಪಡೆಯುತ್ತಿರುವ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಇಲ್ಲಿನ ಸದರ್ನ್‌ ಸ್ಟಾರ್‌ ಹೋಟೆಲ್‌ನಲ್ಲಿ ಶನಿವಾರ ಭೇಟಿಯಾಗಿ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್‌ ಚಟುವಟಿಕೆಗಳಿಂದ ದೂರ ಸರಿದಿರುವ ಹಾಗೂ ಜಿಲ್ಲೆಯಲ್ಲಿ ತಮ್ಮದೇ ಪ್ರಭಾವವುಳ್ಳ ದೇವೇಗೌಡರನ್ನು ಸೆಳೆಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ಭಾರಿ ಪ್ರಯತ್ನವನ್ನೇ ನಡೆಸಿವೆ.

‘ಬಿಜೆಪಿಗೆ ಬರುವುದಾದರೆ ಕ್ಷೇತ್ರವನ್ನೇ ಬಿಟ್ಟುಕೊಡಲು ಸಿದ್ಧ’ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್‌.ನಾಗೇಂದ್ರ ಶನಿವಾರ ತಿಳಿಸಿದರೆ, ‘ಮೈಸೂರು ಭಾಗದ ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದಾರೆ’ ಎಂದು ಸಚಿವ ಸೋಮಶೇಖರ್‌ ಹೇಳಿರುವುದು ಈ ಭಾಗದ ರಾಜಕೀಯದಲ್ಲಿ ಭಾರಿ ಗುಸುಗುಸು ಎಬ್ಬಿಸಿದೆ.

‌‘ನನ್ನ ಹಾಗೂ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ದಿಟ್ಟ ತೀರ್ಮಾನ ಕೈಗೊಳ್ಳುವುದು ನಿಶ್ಚಿತ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ‘ಈಗ ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿ ಉಪಚುನಾವಣೆ ಎದುರಿಸಿ ಹಣ ವೆಚ್ಚ ಮಾಡಲು ಸಿದ್ಧನಿಲ್ಲ. ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಮತದಾರರ ಮಾತು ಕೇಳಿ ನಿರ್ಧಾರ ಪ‍್ರಕಟಿಸುವೆ. ಜೆಡಿಎಸ್‌ ಮುಖಂಡರು ನನ್ನನ್ನು ಕೈಬಿಟ್ಟಿರಬಹುದು; ನಾನಿನ್ನೂ ಪಕ್ಷ ತೊರೆದಿಲ್ಲ’ ಎಂದರು.‌

‘ರಾಜ್ಯ ಸಹಕಾರ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎನ್‌.ಅರುಣ್‌ ಕುಮಾರ್ ಅವರನ್ನು ವರ್ಗಾಯಿಸಿದ್ದು, ಅದಕ್ಕೆ ತಡೆ ನೀಡಿ ಒಂದು ವರ್ಷದ ಮಟ್ಟಿಗೆ ಮುಂದುವರಿಸಬೇಕೆಂದು ಕೋರಲು ಸಹಕಾರ ಸಚಿವ ಸೋಮಶೇಖರ್‌ ಅವರನ್ನು ಭೇಟಿಯಾಗಿದ್ದೆ’ ಎಂದು ತಿಳಿಸಿದರು.

‘ಬಿಜೆಪಿಯಿಂದ ಆಹ್ವಾನವಿರುವುದು ನಿಜ. ಕ್ಷೇತ್ರವನ್ನೇ ಬಿಡುಕೊಡುವುದಾಗಿ ಹೇಳಿರುವ ನಾಗೇಂದ್ರ ಅವರಿಗೆ ಧನ್ಯವಾದ. ಶಾಸಕರು, ಸಚಿವರು ಪ್ರೀತಿಯಿಂದ ಪಕ್ಷಕ್ಕೆ ಕರೆಯುತ್ತಿದ್ದಾರೆ. ಆದರೆ, ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿ ನಿಮಿತ್ತ ಮುಖ್ಯಮಂತ್ರಿ, ಸಚಿವರನ್ನು ಭೇಟಿಯಾಗುತ್ತಿರುತ್ತೇನೆ’ ಎಂದರು.

‘ಕಾಂಗ್ರೆಸ್‌ನವರೂ ಚರ್ಚಿಸಿದ್ದು, ನಮ್ಮಿಬ್ಬರ ಸ್ಪ‍ರ್ಧಾ ಕ್ಷೇತ್ರದ ವಿಚಾರ ತಿಳಿಸಿದ್ದೇನೆ. ಹೈಕಮಾಂಡ್‌ ತೀರ್ಮಾನದ ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಸದ್ಯ ಯಾವುದೇ ಪಕ್ಷ ಸೇರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT