ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಟಿಕೆಟ್‌ ಲಾಬಿ; ಮತ ವಿಭಜನೆ ಆತಂಕ

ಗದಗ ವಿಧಾನಸಭಾ ಕ್ಷೇತ್ರ: ಬಿಜೆಪಿಯಲ್ಲಿ ಭಾರಿ ಪೈಪೋಟಿ
Last Updated 25 ಮಾರ್ಚ್ 2023, 6:11 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿನ ತೀವ್ರ ಜಿದ್ದಾಜಿದ್ದಿ ಕ್ಷೇತ್ರವಾಗಿರುವ ಗದಗ ಮತಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಮುಖಂಡರ ನಡುವೆ ಭಾರಿ ಪೈಪೋಟಿ ನಡೆದಿದೆ. ಪಕ್ಷದೊಳಗಿನ ಟಿಕೆಟ್‌ ಆಕಾಂಕ್ಷಿಗಳ ‘ಗುಂಪುಗಾರಿಕೆ’ಯ ನಡೆ 2018ರಂತೆ ಈ ಸಲದ ಚುನಾವಣೆಯಲ್ಲೂ ಹಿನ್ನಡೆಗೆ ಕಾರಣವಾಗಬಹುದು ಎಂಬ ಭೀತಿ ವರಿಷ್ಠರನ್ನು ಕಾಡುತ್ತಿದೆ.

ಗದಗ ಮತಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಅದನ್ನು ಈವರೆಗೆ ಜನತಾಪಕ್ಷ (1978) ಮತ್ತು ಬಿಜೆಪಿ (2008) ಒಂದೊಂದು ಬಾರಿ ಮಾತ್ರ ಭೇದಿಸಿವೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಉಸಿರು ಬಿಗಿಹಿಡಿಯುವಂತಹ ಸ್ಪರ್ಧೆ ಏರ್ಪಟ್ಟಿತ್ತು. ಲಿಂಗಾಯತ ಮತಗಳ ವಿಭಜನೆಯ ಲಾಭ ಪಡೆದ ಕಾಂಗ್ರೆಸ್‌ 1,868 ಮತಗಳ ಅಲ್ಪ ಅಂತರದಿಂದ ಜಯ ದಾಖಲಿಸಿತ್ತು. ಈ ಬಾರಿ ಕೂಡ ಕಾಂಗ್ರೆಸ್‌ನಿಂದ ಎಚ್‌.ಕೆ.ಪಾಟೀಲ ಸ್ಪರ್ಧಿಸುವುದು ‘ಗ್ಯಾರಂಟಿ’ಯಾಗಿದ್ದು, ಅವರಿಗೆ ಎದುರಾಳಿ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ.

ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ಸಭೆಗಳು, ಸಮಾವೇಶಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದಾರೆ. ಆದರೆ, ಅವರ‍್ಯಾರೂ ಅಭ್ಯರ್ಥಿ ಯಾರೆಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.

‘ಪಕ್ಷಕ್ಕಾಗಿ ದುಡಿದವರು ಟಿಕೆಟ್‌ ಕೇಳುವುದರಲ್ಲಿ ತಪ್ಪಿಲ್ಲ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವವರೆಗೂ ಲಾಬಿ ನಡೆಸಿ. ಆದರೆ, ಒಮ್ಮೆ ಘೋಷಣೆ ಆದ ನಂತರ ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದು ಹಿರಿಯನಾಯಕರೆಲ್ಲರೂ ಟಿಕೆಟ್‌ ವಂಚಿತಗೊಳ್ಳುವ ಅಭ್ಯರ್ಥಿಗಳನ್ನು ಹಿಂದಿನಿಂದ ಸಮಾಧಾನಿಸುತ್ತಲೇ ಬರುತ್ತಿದ್ದಾರೆ. ಪಕ್ಷದ ಹಿರಿಯ ನಾಯಕರ ಈ ನಡೆ ಗದಗ ಕ್ಷೇತ್ರದ ಅಭ್ಯರ್ಥಿ ಯಾರಿರಬಹುದು ಎಂಬ ಕುತೂಹಲವನ್ನು ಇನ್ನಷ್ಟು ನಿಗೂಢಗೊಳಿಸಿದೆ.

ಸದ್ಯದ ವಾತಾವರಣದಲ್ಲಿ ಬಿಜೆಪಿಯಿಂದ ಅನಿಲ್‌ ಮೆಣಸಿನಕಾಯಿಗೆ ಟಿಕೆಟ್‌ ಸಿಗಬಹುದು ಎನ್ನಲಾಗುತ್ತಿದೆ. ಆದರೆ, ಹಲವು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿ, ಟಿಕೆಟ್‌ ಪಡೆದುಕೊಳ್ಳಲೇ ಬೇಕು ಎಂಬ ಜಿದ್ದಿಗೆ ಬಿದ್ದಿರುವ ಕೆಲವು ಮುಖಂಡರು ಅಭ್ಯರ್ಥಿ ಘೋಷಣೆ ನಂತರ ಒಮ್ಮತದಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಟಿಕೆಟ್‌ ವಂಚಿತರ ಅಸಮಾಧಾನ ಮತ ವಿಭಜನೆ, ಒಳೇಟಿಗೆ ಕಾರಣ ಆಗಲಿದೆ. ಈ ವಿಚಾರ ವರಿಷ್ಠರ ಗಮನದಲ್ಲಿದ್ದು, ಹುಷಾರಿನ ಹೆಜ್ಜೆ ಇಡುವ ತಂತ್ರ ಹೆಣೆಯುತ್ತಿದ್ದಾರೆ.

ರಾಜ್ಯದಲ್ಲಿನ ಕಾಂಗ್ರೆಸ್‌ನ ಪ್ರಭಾವಿ ನಾಯಕರನ್ನೆಲ್ಲಾ ಕಟ್ಟಿಹಾಕಲು ಯೋಜನೆ ರೂಪಿಸಿರುವ ಬಿಜೆಪಿಯ ವರಿಷ್ಠರು, ಪ್ರತಿಷ್ಠೆಯ ಕ್ಷೇತ್ರಗಳಿಗೆ ಬಿಜೆಪಿಯ ಪ್ರಭಾವಿ ನಾಯಕರನ್ನೇ ಅಖಾಡಕ್ಕೆ ಇಳಿಸಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ರಾಜಕೀಯ ಚದುರಂಗದಲ್ಲಿ ಬಿಜೆಪಿ ಈ ನಡೆ ಅನುಸರಿಸಿದ್ದೇ ಆದರೆ, ಸಚಿವ ಶ್ರೀರಾಮುಲು ಅಥವಾ ಸಿ.ಸಿ.ಪಾಟೀಲ ಗದಗ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ವಿಷಯ ಕೂಡ ಜಿಲ್ಲಾ ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿದೆ.


ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು
l ಅನಿಲ್‌ ಪಿ. ಮೆಣಸಿನಕಾಯಿ
l ರಾಜು ಕುರಡಗಿ
l ವಿಜಯ್‌ಕುಮಾರ್‌ ಗಡ್ಡಿ
l ಶರಣ್‌ ಪಾಟೀಲ
l ನಾಗೇಶ ಹುಬ್ಬಳ್ಳಿ
l ಅರವಿಂದ ಹುಲ್ಲೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT