ಭಾನುವಾರ, ಮೇ 29, 2022
23 °C

ಗಾಂಧಿ ಕುರಿತ ಸಂದೇಹ: ನಾಗರಿಕರಿಂದ ಪ್ರಶ್ನೆಗಳ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಾಂಧೀಜಿ ಕುರಿತ ಸಂದೇಹಗಳಿಗೆ ಸಮರ್ಪಕ ವಿವರಣೆಯನ್ನೊಳಗೊಂಡ ಕೃತಿ ಪ್ರಕಟಿಸಲು ಗಾಂಧಿ ವಿಚಾರ ವೇದಿಕೆ ನಿರ್ಧರಿಸಿದೆ. ಇದಕ್ಕಾಗಿ ಗಾಂಧಿ ಬಗೆಗಿನ ಎಲ್ಲಾ ರೀತಿಯ ಪ್ರಶ್ನೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ. 

‘ಮಹಾತ್ಮಾ ಗಾಂಧಿಯವರ ಮೇಲಿನ ಹಲವು ಸಂದೇಹಗಳು, ತಾತ್ವಿಕ ವಿರೋಧಗಳು, ಚಾರಿತ್ರ್ಯ ಹನನದ ಸುಳ್ಳುಗಳು ಸಮಾಜದಲ್ಲಿ ಸ್ಥಾ‍ಪಿತವಾಗಿವೆ. ಸಾರ್ವಜನಿಕರು ತಮ್ಮ ಮನದಲ್ಲಿ ಮೂಡುವ ಎಲ್ಲಾ ರೀತಿಯ ಪ್ರಶ್ನೆಗಳನ್ನು ಕಳುಹಿಸಬಹುದು. ರಾಜ್ಯದ ಇತಿಹಾಸ ತಜ್ಞರು, ರಾಜ್ಯಶಾಸ್ತ್ರಜ್ಞರು, ಧಾರ್ಮಿಕ ವಿದ್ವಾಂಸರನ್ನು ಸಂಪರ್ಕಿಸಿ ಅವರಿಂದ ಪ್ರಶ್ನೆಗಳಿಗೆ ಉತ್ತರ ಪಡೆದು ಅವುಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

‘ಅಧಿಕೃತ ದಾಖಲೆಗಳ ಆಧಾರದಲ್ಲೇ ರಚಿತವಾಗಲಿರುವ ಈ ಕೃತಿಯು ಇಂಗ್ಲಿಷ್‌ಗೂ ಅನುವಾದಗೊಳ್ಳಲು ಅರ್ಹವಾಗುವಂತಿದೆ. ಹೀಗಾಗಿ ಕೃತಿಯ ನಿರ್ವಹಣೆಗೆ ಸಂಪಾದಕ ಮಂಡಳಿ ರಚಿಸಲಾಗಿದೆ. ಬರಹಗಾರ ಎಂ.ಜಿ.ಹೆಗಡೆ ಅವರು ಪ್ರಧಾನ ಸಂಪಾದಕರಾಗಿರಲಿದ್ದಾರೆ. ಸಾಹಿತಿ ಬೋಳುವಾರು ಮಹಮ್ಮದ್‌ ಕುಂಞಿ, ಲೇಖಕ ನಾರಾಯಣ ಯಾಜಿ, ಕವಿ ಸುಬ್ರಾಯ ಚೊಕ್ಕಾಡಿ, ಪ್ರೊ.ಚಂದ್ರಶೇಖರ ವಸ್ತ್ರದ, ಪ್ರೊ.ಭುವನೇಶ್ವರಿ ಹೆಗಡೆ, ಕವಯತ್ರಿ ಸುಚಿತ್ರಾ ಹೆಗಡೆ ಸೇರಿ 19 ಮಂದಿ ಸಂಪಾದಕ ಮಂಡಳಿಯಲ್ಲಿ ಇರಲಿದ್ದಾರೆ’ ಎಂದು ವಿವರಿಸಿದೆ.  

‘ಒಬ್ಬರು ಎಷ್ಟು ಪ್ರಶ್ನೆಗಳನ್ನಾದರೂ ಕಳುಹಿಸಬಹುದು. ಆದರೆ ಲೇಖನ ರೂಪದ ಪ್ರಶ್ನೆಗಳನ್ನು ಸ್ವೀಕರಿಸಲಾಗುವುದಿಲ್ಲ’ ಎಂದು ಸೂಚಿಸಲಾಗಿದೆ.

ಸಾರ್ವಜನಿಕರು ಇದೇ 30ರೊಳಗೆ mghegde04@gmail.com ಗೆ ಪ್ರಶ್ನೆಗಳನ್ನು ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 8971892110ಗೆ ಸಂಪರ್ಕಿಸಬಹುದು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು