ಬೆಂಗಳೂರು: ನಾಲ್ಕು ವರ್ಷಗಳಿಂದ ಸುರಿದ ಭಾರಿ ಮಳೆಗೆ ಪಶ್ಚಿಮಘಟ್ಟದ ಸಾಲಿನಲ್ಲಿರುವ ರಾಜ್ಯದ ಎಂಟು ಘಾಟ್ ರಸ್ತೆಗಳು ಧಾರಣಾ ಸಾಮರ್ಥ್ಯವನ್ನೇ ಕಳೆದುಕೊಂಡು ಅಪಾಯದ ಸ್ಥಿತಿಗೆ ತಲುಪಿವೆ. ಮುಂಬರುವ ವರ್ಷಗಳಲ್ಲಿ ಇವುಗಳ ಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.
ಪ್ರತಿ ವರ್ಷ ಮಳೆಗಾಲಕ್ಕೆ ಮೊದಲು ಅಥವಾ ಆ ಬಳಿಕ ಘಾಟ್ ರಸ್ತೆಗಳಿಗೆ ನೂರಾರು ಕೋಟಿ ಸುರಿದು ರಿಪೇರಿ ಮಾಡಲಾಗುತ್ತದೆ. ಆದರೆ, ಮಳೆಗಾಲ ಶುರುವಾಗುತ್ತಿದ್ದಂತೆ ಭೂಕುಸಿತ ಮರುಕಳಿಸುತ್ತಿದೆ. ಮುಂಬರುವ ದಿನಗಳಲ್ಲಿ ಅದೂ ವ್ಯರ್ಥವಾಗಲಿದ್ದು, ಹಿಮಾಲಯ ಪ್ರದೇಶದಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣದಲ್ಲಿ ಪರಿಣತಿ ಸಾಧಿಸಿರುವ ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್‌ಒ) ಬಳಸುತ್ತಿರುವ ತಂತ್ರಜ್ಞಾನದ ಮೂಲಕ ಘಾಟ್ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ಅಗತ್ಯವಿದೆ ಎನ್ನುತ್ತಾರೆ ತಜ್ಞರು.
ಅತಿವೃಷ್ಟಿಯಿಂದ ಅಪಾಯಕ್ಕೆ ಸಿಲುಕಿರುವ ಘಾಟ್ ರಸ್ತೆಗಳೆಂದರೆ, ಸಂಪಾಜೆ, ಅರೆಬೈಲು, ಚಾರ್ಮಾಡಿ, ಶಿರಾಡಿ, ಆಗುಂಬೆ , ಮಾಳ, ಕೊಲ್ಲೂರು ಮತ್ತು ನಾಗೋಡಿ ಘಾಟ್. ಇವುಗಳ ದುಸ್ಥಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿಯಲ್ಲಿ ಕೇಂದ್ರ ರಸ್ತೆ
ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದು, ವಿಶೇಷ ಪ್ಯಾಕೇಜ್‌ಗಾಗಿ ಮನವಿ ಮಾಡಿದ್ದಾರೆ.
ಅರಬೈಲ್ ಘಾಟ್‌ನಲ್ಲಿ ಈ ಬಾರಿ ಮಳೆಯಿಂದ 80 ಮೀಟರ್‌ಗಳಷ್ಟು ಎತ್ತರದ ಗುಡ್ಡ ಲಂಬವಾಗಿ ಕುಸಿದು ಬಿದ್ದಿದೆ. ಇದರಿಂದ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ಇದನ್ನು ಶಾಶ್ವತವಾಗಿ ಸರಿಪಡಿಸಲು ₹125 ಕೋಟಿ ಅಗತ್ಯವಿದ್ದು, ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಬೊಮ್ಮಾಯಿ ಪ್ರತ್ಯೇಕ ಮನವಿ ಸಲ್ಲಿಸಿದರು.
ಸಕಾಲದಲ್ಲಿ ಈ ಘಾಟ್ ರಸ್ತೆಗಳನ್ನು ಸರಿಪಡಿಸಿದರೆ, ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಇದಕ್ಕಾಗಿ ಅಗತ್ಯ ನೆರವು ನೀಡಬೇಕು ಎಂದು ಅವರು ಕೋರಿದರು.
ರಾಜ್ಯದ ಕರಾವಳಿ ಭಾಗದ ಬಂದರು ನಗರಗಳನ್ನು ಸಂಪರ್ಕಿಸಲು ಇರುವ ಈ ಹೆದ್ದಾರಿಗಳು ವಾಣಿಜ್ಯ– ವ್ಯವಹಾರ ಮತ್ತು ಪ್ರಯಾಣಿಕರ ಓಡಾಟದ ದೃಷ್ಟಿಯಿಂದ ಪ್ರಮುಖ ಎನಿಸಿವೆ. ಅವೈಜ್ಞಾನಿಕವಾಗಿ ರಸ್ತೆಗಳ ಅಗಲೀಕರಣ, ಅಭಿವೃದ್ಧಿಯಿಂದ ಧಾರಣಾ ಸಾಮರ್ಥ್ಯ ಕುಸಿದಿದ್ದು, ಸಾಮಾನ್ಯ ಮಳೆ ಬಂದರೂ ರಸ್ತೆ ಅಥವಾ ಬೆಟ್ಟ ಕುಸಿದು ಹೋಗುತ್ತದೆ.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ವೀಕ್ಷಿಸಲು ಬಂದಿದ್ದ ಕೇಂದ್ರ ತಂಡದ ಜತೆ ಅರಬೈಲ್ ಘಾಟ್ ಪ್ರದೇಶಕ್ಕೆ ರಾಜ್ಯದ ಪ್ರತಿನಿಧಿಯಾಗಿ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ಅಲ್ಲಿನ ಪರಿಸ್ಥಿತಿಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.
2018 ರಿಂದ ರಾಜ್ಯದ ಘಾಟ್ ಪ್ರದೇಶದಲ್ಲಿ ಭೂಕುಸಿತ ಸಾಮಾನ್ಯವಾಗಿದೆ. ಅದಕ್ಕೂ ಮೊದಲು ಭೂಕುಸಿತ ಅಪರೂಪವಾಗಿತ್ತು. ಹವಾಮಾನ ವೈಪರೀತ್ಯದಿಂದ ಮುಂದಿನ ವರ್ಷಗಳಲ್ಲಿ ಭೂಮಿ ಕುಸಿತ ಸಾಮಾನ್ಯ ವಿದ್ಯಮಾನ ಆಗುತ್ತದೆ. ಆದ್ದರಿಂದ ಇವುಗಳ ಅಭಿವೃದ್ಧಿಗೆ ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್‌ನಿಂದ ನೀಡುವ ಪರಿಹಾರದ ಮೊತ್ತ, ಮಣ್ಣು ಉದುರಿಸುವುದಕ್ಕೂ ಸಾಲದು. ಕೇಂದ್ರ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಪ್ಯಾಕೇಜ್ ನೀಡಬೇಕಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಾಜ್ಯದ ಮುಖ್ಯ ಎಂಜಿನಿಯರ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ರೆಡ್ಡಿ ವಿವರಿಸಿದರು.
‘ಹವಾಮಾನ ಬದಲಾವಣೆಯಿಂದ ‘ಪದೇ ಪದೇ ಅತಿರೇಕದ ವರ್ತನೆ‘ ಎಂದು ಕರೆಯಲಾಗುವ ಒಂದು ತಿಂಗಳ ಮಳೆ ನಾಲ್ಕು ದಿನ ಅಥವಾ ಒಂದು ವಾರದಲ್ಲಿ ಸುರಿಯತ್ತದೆ. ಇದರಿಂದ ನೀರು ಕುಡಿದು ಭಾರವಾಗುವ ಬೆಟ್ಟಗಳು ಜರಿದು ಬೀಳುತ್ತದೆ. ಎಲ್ಲೆಲ್ಲಿ ಗುಡ್ಡಗಳನ್ನು ಲಂಬವಾಗಿ ಕತ್ತರಿಸಿ ರಸ್ತೆ ಮಾಡಿರುತ್ತಾರೋ ಅಲ್ಲಿ ಇಂತಹ ಅನಾಹುತ ಹೆಚ್ಚು. ರಾಜ್ಯದ ಬಹುತೇತ ಘಾಟಿ ರಸ್ತೆಗಳದ್ದು ಇದೇ ಸಮಸ್ಯೆ’ ಎಂದು ಅವರು ವಿವರಿಸಿದರು.
ಘಾಟ್ ರಸ್ತೆಯ ಸಮಸ್ಯೆಗಳೇನು?:
*ಘಾಟ್ ರಸ್ತೆಯ ಪಕ್ಕದಲ್ಲಿ ಲಂಬವಾಗಿ ಗುಡ್ಡಗಳನ್ನು ಕತ್ತರಿಸಲಾಗುತ್ತದೆ. ಇಳಿಜಾರು ಮಾದರಿಯಲ್ಲಿ ಕತ್ತರಿಸಿದರೆ ಭೂಕುಸಿತ ತಡೆಯಬಹುದು. ಮಳೆ ನೀರು ಹರಿದು ಹೋಗಲು ವೈಜ್ಞಾನಿಕವಾಗಿ ವ್ಯವಸ್ಥೆ ಮಾಡದ ಕಾರಣ ನೀರು ಇಂಗಿ ಕುಸಿತಕ್ಕೆ ಕಾರಣವಾಗುತ್ತದೆ
* ರಸ್ತೆಯ ಅಕ್ಕ–ಪಕ್ಕ ಇಳಿಜಾರು ಮಾದರಿಯಲ್ಲಿ ಗುಡ್ಡ ಕಡಿಯಲು ಅರಣ್ಯ ಇಲಾಖೆ ಅನುಮತಿ ಕೊಡುವುದಿಲ್ಲ. ಬಹುತೇಕ ಘಾಟ್ ರಕ್ಷಿತ ಅರಣ್ಯ ಅಥವಾ ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗುತ್ತವೆ. ಅರಣ್ಯ ಕಾಯ್ದೆಗಳಿಂದ ರಸ್ತೆ ಅಭಿವೃದ್ಧಿ ಕಷ್ಟ.
* ಸೂಕ್ಷ್ಮ ಪ್ರದೇಶದಲ್ಲಿ ಅತಿ ಉನ್ನತ ತಂತ್ರಜ್ಞಾನ ಬಳಕೆ ಮಾಡಲು ಹೋದರೆ ಈಗ ರಸ್ತೆಗೆ ಖರ್ಚು ಮಾಡುವುದಕ್ಕೆ ಬಳಸುವ ಹಣಕ್ಕಿಂತ ಹತ್ತು ಪಟ್ಟು ಹೆಚ್ಚು ಖರ್ಚಾಗುತ್ತದೆ.
ಘಾಟ್‌ಗೆ ಪ್ರತ್ಯೇಕ ನೀತಿ ಅಗತ್ಯ:
ಘಾಟ್ ರಸ್ತೆಯ ಪಕ್ಕದ ಗುಡ್ಡಗಳನ್ನು ಲಂಬವಾಗಿ ಕತ್ತರಿಸಬಾರದು ಮತ್ತು ರಸ್ತೆ ಅಗಲ ಮಾಡಬಾರದು. ಸ್ಥಳೀಯ ಬೇಡಿಕೆ ಮತ್ತು ರಸ್ತೆಯಲ್ಲಿ ವಾಹನ ದಟ್ಟಣೆ ಇಲ್ಲದಿದ್ದರೂ ನಾಲ್ಕು ಅಥವಾ ಆರು ಲೇನ್ ರಸ್ತೆ ಮಾಡುವುದು ಸರಿಯಲ್ಲ ಎನ್ನುತ್ತಾರೆ ಪಶ್ಚಿಮಘಟ್ಟದ ಭೂಪ್ರದೇಶದ ಅಧ್ಯಯನ ನಡೆಸಿರುವ ಸಂರಕ್ಷಣ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್. ಕೊರ್ಸೆ.
ಕಡಿದಾದ ಆಗುಂಬೆ ಘಾಟಿಯಲ್ಲಿ ಚತುಷ್ಪಥ ಮಾಡಿದರೆ ಅನಾಹುತ ಆಗುತ್ತದೆ. ಕಾರ್ಯಸಾಧ್ಯ ಅಧ್ಯಯನ ನಡೆಸದೇ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ದೂರದ ರಾಜ್ಯದ ಊರಿಗೆ ಸಂಪರ್ಕ ತೋರಿಸಿ ಅಗಲೀಕರಣ (ಉದಾಹರಣೆ: ಮಂಗಳೂರು–ಸೊಲ್ಲಾಪುರ) ಮಾಡಲಾಗುತ್ತಿದೆ. ಘಾಟ್ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಪ್ರತ್ಯೇಕ ಮಾರ್ಗಸೂಚಿ ಇಲ್ಲ. ಈ ಪ್ರದೇಶದ ಮಳೆ ಪ್ರಮಾಣ, ಗುಡ್ಡದ ಇಳಿಜಾರು ಮತ್ತು ಮಣ್ಣಿನ ರಚನೆ ಆಧರಿಸಿ ನೀತಿ ರೂಪಿಸಬೇಕು ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.