ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಗಾಗಿ ಭಿಕ್ಷೆ ಬೇಡುವ ಸ್ಥಿತಿಗೆ ಬಿಲ್ಲವರನ್ನು ತಂದ ಸರ್ಕಾರ: ಸ್ವಾಮೀಜಿ

ಬಿಲ್ಲವ–ಈಡಿಗರ ಕಡೆಗಣನೆ ಪ್ರಣವಾನಂದ ಸ್ವಾಮೀಜಿ ಆಕ್ರೋಶ
Last Updated 9 ಜುಲೈ 2022, 8:44 IST
ಅಕ್ಷರ ಗಾತ್ರ

ಮಂಗಳೂರು: ‘ಹಿಂದುಳಿದ ವರ್ಗದ ಬಿಲ್ಲವ–ಈಡಿಗ ಸಮುದಾಯಗಳು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಭಿಕ್ಷೆ ಬೇಡುವ ಸ್ಥಿತಿಯನ್ನು ಸರ್ಕಾರ ನಿರ್ಮಿಸಿದೆ. ಈ ಸಮಾಜದ ನಾರಾಯಣ ಗುರುಗಳಿಗೆ ಸತತವಾಗಿ ಅವಮಾನಮಾಡುತ್ತಲೇ ಬಂದಿದೆ. ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಸಮಾಜ ಬಾಂಧವರು ಹೋರಾಟಕ್ಕಿಳಿಯಲೇ ಬೇಕಾದ ಅನಿವಾರ್ಯ ಎದುರಾಗಿದೆ’ ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಲ್ಲವರಿಗೆ ಹಿಂದಿನಿಂದಲೂ ಸತತವಾಗಿ ಅನ್ಯಾಯವಾಗುತ್ತಲೇ ಇದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶ ನಿರಾಕರಿಸಿತು. ನಾರಾಯಣಗುರುಗಳ ಪಠ್ಯವನ್ನು ಕೈಬಿಡುವ ಮೂಲಕ ರಾಜ್ಯ ಸರ್ಕಾರವೂ ಅನ್ಯಾಯ ಮಾಡಿದೆ. 12 ಸಾವಿರ ಬಾರ್‌ಗಳಿಗೆ ಪರವಾನಗಿ ನೀಡಿರುವ ಸರ್ಕಾರ ಬಿಲ್ಲವರ ‌‌‌ಕುಲಕಸುಬಾದ ಮೂರ್ತೆದಾರಿಕೆಯ ಹಕ್ಕನ್ನು ಕಿತ್ತುಕೊಂಡಿದೆ. ಕುಲಕಸುಬು ವಂಚಿತರಾದ ಬಿಲ್ಲವರಿಗೆ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ನಾರಾಯಣಗುರುಗಳ ಹೆಸರಿನಲ್ಲಿ ಬಿಲ್ಲವರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವ ಬೇಡಿಕೆ ಈಡೇರಿಸುವ ಭರವಸೆಯನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೀಡಿದ್ದರು. ನಾನು ಪಾದಯಾತ್ರೆ ಕೈಗೊಂಡಾಗ ನೀಡಿದ ಭರವಸೆಯನ್ನು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೂ ಮರೆತು ಬಿಟ್ಟಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಬಿಲ್ಲವರ ಬೇಡಿಕೆಗಳನ್ನು ಸತತವಾಗಿ ಕಡೆಗಣಿಸುತ್ತಿದ್ದರೂ ಹಾಗೂ ನಾರಾಯಣಗುರುಗಳಿಗೆ ಪದೇ ಪದೇ ಅವಮಾನ ಆಗುತ್ತಿದ್ದರೂ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿ.ಸುನಿಲ್‌ ಕುಮಾರ್‌ ಸೊಲ್ಲೆತ್ತುತ್ತಿಲ್ಲ. ನಮ್ಮ ಸಮುದಾಯದ ಶಾಸಕರೂ ಚಕಾರ ಎತ್ತುತ್ತಿಲ್ಲ. ಅವರಿಗೆ ಬಿಲ್ಲವರ ಮತಗಳು ಬೇಕು, ಆದರೆ ಅವರ ಅಭಿವೃದ್ಧಿ ವಿಚಾರ ಬೇಕಿಲ್ಲ. ‘ಮುಖ್ಯಮಂತ್ರಿಯವರು ಈ ವಿಚಾರದಲ್ಲಿ ನಮ್ಮ ಮಾತನ್ನು ಕೇಳುತ್ತಿಲ್ಲ’ ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಮಾತಿಗೆ ಗೌರವ ಸಿಗದಿದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬನ್ನಿ. ಅದಕ್ಕಿಂತಲೂ ಉನ್ನತ ಸ್ಥಾನ ಕೊಡಿಸಲು ಸಮುದಾಯವು ನಿಮ್ಮ ಜೊತೆಗೆ ನಿಲ್ಲಲಿದೆ’ ಎಂದರು.

‘ನಾರಾಯಣಗುರುಗಳಿಗೆ ಅವಮಾನ ಆಗಿರುವ ಬಗ್ಗೆ ಪ್ರಶ್ನಿಸಿದರೆ, ಗುರುಗಳ ಹೆಸರಿನಲ್ಲಿ ಕರಾವಳಿಯ ನಾಲ್ಕು ಕಡೆ ಶಾಲೆಗಳನ್ನು ಆರಂಭಿಸುತ್ತಿದ್ದೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್‌ ಕುಮಾರ್‌ ಹೇಳುತ್ತಿದ್ದಾರೆ. ಈ ಶಾಲೆಗಳಿಗೆ ನಾರಾಯಣ ಗುರುಗಳ ಹೆಸರು ಇಟ್ಟಿದ್ದು ಬಿಟ್ಟರೆ, ಬಿಲ್ಲವರಿಗೆ ಅನುಕೂಲ ಆಗುವಂತಹ ಯಾವುದೇ ವ್ಯವಸ್ಥೆ ಇಲ್ಲ. ಬಿಲ್ಲವರಿಗೆ ಈ ಶಾಲೆಗಳಲ್ಲಿ ಮೀಸಲಾತಿಯೂ ಇಲ್ಲ’ ಎಂದು ಸ್ವಾಮೀಜಿ ದೂರಿದರು.

‘ಈಗಲೂ ರಾಜ್ಯದಲ್ಲಿ ಬಿಲ್ಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ವಾಸಕ್ಕೆ ಯೋಗ್ಯವಾದ ಮನೆ ಇಲ್ಲ, ಶೌಚಾಲಯ ಇಲ್ಲದ ಮನೆಗಳೂ ಇವೆ. ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಉನ್ನತ ಶಿಕ್ಷಣ ಪಡೆದವರಿಗೂ ಉದ್ಯೋಗ ಸಿಗದ ಸ್ಥಿತಿ ಇದೆ. ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಸಕ ಮಾಲೀಕಯ್ಯ ಗುತ್ತೇದಾರ್‌ ಮನೆ ಎದುರು ಧರಣಿ ನಡೆಸಲಿದ್ದೇವೆ. ನಂತರ ಸಮುದಾಯದ ಒಬ್ಬೊಬ್ಬರೇ ಶಾಸಕರ ಮನೆ ಮುಂದೆ ಹಾಗೂ ಸಚಿವರ ಮನೆ ಮುದೆಯೂ ಧರಣಿ ನಡೆಸಲಿದ್ದೇವೆ’ ಎಂದು ಅವರು ತಿಳಿಸಿದರು.

‘ರಾಜ್ಯದಲ್ಲಿ ಬಿಲ್ಲವ, ಈಡಿಗ, ನಾಮಧಾರಿ ಹಾಗೂ ನಾಯ್ಕ ಮೊದಲಾದ ಹಿಂದುಳಿದ ಸಮುದಾಯಗಳ ಜನಸಂಖ್ಯೆ 76 ಲಕ್ಷದಷ್ಟಿದೆ.ಕರಾವಳಿಯಐದುಕ್ಷೇತ್ರಗಳಲ್ಲಿಬಿಲ್ಲವರೇ ನಿರ್ಣಾಯಕ ಶಕ್ತಿ ಎಂಬುದನ್ನು ಮರೆಯದಿರಿ’ ಎಂದು ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಾರಾಯಣ ಗುರು ವಿಚಾರವೇದಿಕೆಯ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌, ರಾಷ್ಟ್ರಿಯ ಬಿಲ್ಲವರ ಮಹಾಮಂಡಳದ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಚಿ ಆರ್‌. ಪದ್ಮರಾಜ್‌, ಗೆಜ್ಜೆಗಿರಿ ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT