ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತರ ನೇಮಕಕ್ಕೆ ಪ್ರಕ್ರಿಯೆ ಆರಂಭ: ಪಿ. ವಿಶ್ವನಾಥ ಶೆಟ್ಟಿ ಇಂದು ನಿವೃತ್ತಿ

ಹಾಲಿ ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಇಂದು ನಿವೃತ್ತಿ
Last Updated 26 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಲೋಕಾಯುಕ್ತರಾಗಿರುವ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರ ಅವಧಿ ಗುರುವಾರ ಅಂತ್ಯಗೊಳ್ಳುತ್ತಿದೆ. ನೂತನ ಲೋಕಾಯುಕ್ತರ ನೇಮಕಕ್ಕೆ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರದಲ್ಲಿ ಆಯ್ಕೆ ಅಂತಿಮಗೊಳಿಸುವ ಸಾಧ್ಯತೆ ಇದೆ.

ಲೋಕಾಯುಕ್ತ ಕಾಯ್ದೆಯ ಪ್ರಕಾರ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ ಒಂದರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದವರು ಅಥವಾ ಹೈಕೋರ್ಟ್‌ ಒಂದರಲ್ಲಿ ಕನಿಷ್ಠ ಹತ್ತು ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿವರನ್ನು ರಾಜ್ಯದ ಲೋಕಾಯುಕ್ತರನ್ನಾಗಿ ನೇಮಕ ಮಾಡಬಹುದು.

ಮುಖ್ಯಮಂತ್ರಿಯು ಲೋಕಾಯುಕ್ತರನ್ನು ನೇಮಕ ಮಾಡುವ ಮುನ್ನ ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆಯ ಅಧ್ಯಕ್ಷರು, ವಿಧಾನ ಪರಿಷತ್‌ ಸಭಾಪತಿ, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ವಿರೋಧ ಪಕ್ಷಗಳ ನಾಯಕರ ಸಲಹೆಯನ್ನು ಪಡೆಯಬೇಕು.

ಸಲಹೆ ಕೋರಿದ ಮುಖ್ಯಮಂತ್ರಿ: ವಿಶ್ವನಾಥ ಶೆಟ್ಟಿ ಅವರ ಅಧಿಕಾರದ ಅವಧಿ ಅಂತ್ಯಗೊಳ್ಳುತ್ತಿರುವ ಕಾರಣದಿಂದ ಹೊಸ ಲೋಕಾಯುಕ್ತರನ್ನು ನೇಮಿಸಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಂಬಂಧ ಸಲಹೆ ಕೋರಿ ಪತ್ರಗಳನ್ನು ಬರೆದಿದ್ದರು. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರ ಬರೆದಿದ್ದರು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಸೇರಿದಂತೆ ಕೆಲವರು ಮಂಗಳವಾರವೇ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು, ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ತಮ್ಮ ಸಲಹೆಗಳನ್ನು ನೀಡಿದ್ದಾರೆ. ಗುರುವಾರವೇ ಲೋಕಾಯುಕ್ತರ ಹುದ್ದೆ ಖಾಲಿ ಆಗುತ್ತಿರುವುದರಿಂದ ವಿಳಂಬವಿಲ್ಲದೇ ನೇಮಕಾತಿ ಮಾಡಲು ಮುಖ್ಯಮಂತ್ರಿ ಒಲವು ತೋರಿದ್ದಾರೆ ಎಂದು ಗೊತ್ತಾಗಿದೆ.

‘ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಈಗಾಗಲೇ ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ. ಅಲ್ಲಿಯೇ ಹೊಸ ಲೋಕಾಯುಕ್ತರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.

ರಾಜ್ಯದವರಿಗೇ ಆದ್ಯತೆ: ಲೋಕಾಯುಕ್ತರನ್ನಾಗಿ ರಾಜ್ಯದವರನ್ನೇ ನೇಮಿಸಲು ಬಹುತೇಕರು ಒಲವು ಹೊಂದಿದ್ದಾರೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿರುವ ಹಲವರ ಹೆಸರುಗಳು ಪರಿಶೀಲನೆಯಲ್ಲಿವೆ ಎಂಬ ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT