ಸೋಮವಾರ, ಜೂನ್ 27, 2022
28 °C
ಎಚ್‌.ಡಿ. ದೇವೇಗೌಡರ ಕುರಿತು ಸಿ.ಎಂ. ಇಬ್ರಾಹಿಂ ನೆನಪು

ಪ್ರಧಾನಿ ಪಟ್ಟ ಪಣಕ್ಕಿಟ್ಟು ಆಲಮಟ್ಟಿಗೆ ಒಪ್ಪಿಗೆ ನೀಡಿದ್ದ ದೇವೇಗೌಡರು: ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ತೆಲುಗು ದೇಶಂ ಪಕ್ಷದ ನಾಯಕ ಎನ್‌. ಚಂದ್ರಬಾಬು ನಾಯ್ಡು ಅವರ ಬೆಂಬಲ ಹಿಂಪಡೆವ ಬೆದರಿಕೆಯನ್ನು ಲೆಕ್ಕಿಸದೆ ಪ್ರಧಾನಿ ಪಟ್ಟವನ್ನೇ ಪಣಕ್ಕಿಟ್ಟು ಆಲಮಟ್ಟಿ ಅಣೆಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು’ ಎಂದು ದೇವೇಗೌಡರ ಸಂಪುಟದಲ್ಲಿ ಸಚಿವರಾಗಿದ್ದ, ಈಗ ಕಾಂಗ್ರೆಸ್‌ನಲ್ಲಿರುವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ದೇವೇಗೌಡರು ಪ್ರಧಾನಿ ಹುದ್ದೆಗೇರಿ 25 ವರ್ಷಗಳಾದ ಪ್ರಯುಕ್ತ ಜೆಡಿಎಸ್‌ ಹಮ್ಮಿಕೊಂಡಿರುವ ಸಾಧನೆಗಳ ಸ್ಮರಣೆ ಅಭಿಯಾನದಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದ ಹಿತ ರಕ್ಷಣೆಗಾಗಿ ಪ್ರಧಾನಿ ಹುದ್ದೆಯನ್ನೂ ತ್ಯಜಿಸಲು ಸಿದ್ಧ ಎಂಬ ದಿಟ್ಟ ನಿಲುವನ್ನು ಆಗ ಗೌಡರು ಪ್ರದರ್ಶಿಸಿದ್ದರು’ ಎಂದರು.

ಪ್ರಧಾನಿಯಾಗಿದ್ದ ಅವಧಿಯಲ್ಲಿ ಗೌಡರು ಒಂದು ತಪ್ಪು ನಿರ್ಧಾರ ಕೂಡ ಕೈಗೊಳ್ಳಲಿಲ್ಲ. ಯಾವ ಸಚಿವರೂ ತಪ್ಪು ಮಾಡಲು ಅವಕಾಶ ನೀಡಲಿಲ್ಲ. ಲಾಲು ಪ್ರಸಾದ್, ಶರದ್‌ ಯಾದವ್, ರಾಮ್‌ ವಿಲಾಸ್ ಪಾಸ್ವಾನ್‌, ಮಮತಾ ಬ್ಯಾನರ್ಜಿ ಸೇರಿದಂತೆ ಘಟಾನುಘಟಿ ನಾಯಕರ ಜತೆ ಒಗ್ಗಟ್ಟಿನಿಂದ ಸರ್ಕಾರ ಮುನ್ನಡೆಸಿದ್ದು ದೇವೇಗೌಡರ ಹೆಗ್ಗಳಿಕೆ ಎಂದು ಹೇಳಿದರು.

ಕಾಶ್ಮೀರಕ್ಕೆ ಭೇಟಿನೀಡುವುದು ಬೇಡ ಎಂಬ ಭದ್ರತಾ ಅಧಿಕಾರಿಗಳ ಎಚ್ಚರಿಕೆಯನ್ನು ಬದಿಗಿಟ್ಟು ಗೌಡರು ಅಲ್ಲಿಗೆ ಹೋಗಿದ್ದರು. ಅವರ ಮಾರ್ಗದರ್ಶನದಲ್ಲಿ ರಕ್ತರಹಿತ ಚುನಾವಣಾ ಪ್ರಕ್ರಿಯೆ ನಡೆಯಿತು. ಕಾಶ್ಮೀರದ ನೆಲ ಮಾತ್ರವಲ್ಲ; ಅಲ್ಲಿನ ಜನರ ಮೇಲೂ ತಮಗೆ ಪ್ರೀತಿ ಇದೆ ಎಂಬುದನ್ನು ಜನಪರ ಯೋಜನೆಗಳ ಮೂಲಕ ಅವರು ಸಾಬೀತುಪಡಿಸಿದ್ದರು ಎಂದು ನೆನಪಿಸಿಕೊಂಡರು.

‘ದೇವೇಗೌಡರು ಪ್ರಧಾನಿ ಹುದ್ದೆಗೇರಿ 25 ವರ್ಷಗಳಾಯಿತು. ಅವರ ಒಂದೇ ಒಂದು ತಪ್ಪನ್ನು ಹುಡುಕಲು ಈವರೆಗೆ ಸಾಧ್ಯವಾಗಿಲ್ಲ. ನಾನೂ ಸೇರಿದಂತೆ ಎಲ್ಲ ಸಚಿವರಿಗೂ ಮುಕ್ತ ಸ್ವಾತಂತ್ರ್ಯ ನೀಡಿದ್ದರು. ದೇಶದ ರೈತರನ್ನು ಜತನದಿಂದ ಕಾಯುವುದಕ್ಕೆ ಅವರು ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡಿದ್ದರು’ ಎಂದು ಇಬ್ರಾಹಿಂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು