ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹೇಳುವ ಮೂಲಕ ಎಂಸಿ ಮನಗೂಳಿಗೆ ಡಿಕೆಶಿ ಅಪಚಾರ ಮಾಡಿದ್ದಾರೆ: ಎಚ್‌ಡಿಕೆ

Last Updated 9 ಅಕ್ಟೋಬರ್ 2021, 7:49 IST
ಅಕ್ಷರ ಗಾತ್ರ

ಬೆಂಗಳೂರು: ನಿಧನರಾಗುವುದಕ್ಕೂ15 ದಿನ ಮೊದಲು ಎಂ.ಸಿ. ಮನಗೂಳಿ ಅವರು ತಮ್ಮ ಪುತ್ರ ಅಶೋಕ್ ಅವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದರು. ನಿಮ್ಮ, ಸಿದ್ದರಾಮಯ್ಯ ಮಡಿಲಿಗೆ ಮಗನನ್ನು ಹಾಕುತ್ತಿದ್ದೇನೆ ಎಂದು ಹೇಳಿದರು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ್ದಾರೆನ್ನಲಾದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ವ್ಯಕ್ತಿ ಇಲ್ಲವಾದ ಮೇಲೆ ಅವರ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ರಾಜಕೀಯವಾಗಿ, ವೈಯಕ್ತಿಕವಾಗಿ ‘ಅನೈತಿಕʼಎಂಬುದು ನನ್ನ ಅಭಿಪ್ರಾಯ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ‘ಅಪ್ಪಟ ಸುಳ್ಳುʼಹೇಳುವ ಮೂಲಕ ದಿವಂಗತ ನಾಯಕ ಎಂಸಿ ಮನಗೂಳಿ ಅವರಿಗೆ ಅಪಚಾರ ಮಾಡಿದ್ದಾರೆ. ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾವು ನಿಧನರಾಗುವುದಕ್ಕೆ 15 ದಿನ ಮೊದಲು ಮನಗೂಳಿ ಅವರು ತಮ್ಮ ಪುತ್ರ ಅಶೋಕ್ ಅವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದರು. ನನಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ. ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ, ಅಶೋಕನನ್ನು ನಿಮ್ಮ ಹಾಗೂ ಸಿದ್ದರಾಮಯ್ಯ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಅವರಿಗೆ ಹೇಳಿದ್ದರಂತೆ! ಸುಳ್ಳುಗಳನ್ನು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎನ್ನುವುದಕ್ಕೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಬೇರೆ ಇಲ್ಲ. ಸತ್ಯ ಏನೆಂದರೆ; ಕೋವಿಡ್ ಸೋಂಕಿತರಾಗಿದ್ದ ಮನಗೂಳಿ ಅವರನ್ನು ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ನಾವೇ ಸೇರಿಸಿದ್ದೆವು. 19 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದರು. ಜನವರಿ 9ರಂದು ಮನಗೂಳಿ ಅವರು ಅಪೊಲೋ ಆಸ್ಪತ್ರೆಗೆ ದಾಖಲಾಗಿ, ಜನವರಿ 28ರಂದು ಅಲ್ಲಿಯೇ ನಿಧನರಾದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನಗೂಳಿ ಅವರನ್ನು ನಾನೂ ಸೇರಿ ಅವರ ಮಕ್ಕಳೂ ನೋಡಲಾಗಲಿಲ್ಲ. ಅದಕ್ಕೂ ಮೊದಲು ಅವರು ಒಂದೂವರೆ ತಿಂಗಳ ಕಾಲ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಹಾಗಾದರೆ, ಮನಗೂಳಿ ಅವರು ಡಿಕೆ ಶಿವಕುಮಾರ್ ಮನೆಗೆ ಹೋಗಿದ್ದು ಯಾವಾಗ? ಮಕ್ಕಳನ್ನು ಮಡಿಲಿಗೆ ಹಾಕಿಕೊಳ್ಳಿ ಎಂದಿದ್ದು ಎಂದು? ಅವರ ʼಹಸಿಸುಳ್ಳುಗಳು ಅಸಹ್ಯ ಹುಟ್ಟಿಸುವಂತಿವೆʼ. ನಮ್ಮ ಪಕ್ಷದ ಅಭ್ಯರ್ಥಿಯಾಗಬೇಕಿದ್ದ ಅಶೋಕ್ ಮನಗೂಳಿ ಅವರನ್ನು ಹೈಜಾಕ್ ಮಾಡಿದ್ದಲ್ಲದೆ, ಈಗ ಸುಳ್ಳುಗಳ ಸರಮಾಲೆ ಹಣೆಯುತ್ತಾ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ.5/6

ಸಿಂಧಗಿ ಜನತೆಗೆ ಯಾಮಾರಿಸುವ ಪ್ರಯತ್ನ ಬೇಡ. ಅಭ್ಯರ್ಥಿಗೆ ದಿಕ್ಕಿಲ್ಲದ ಕಾಂಗ್ರೆಸ್ ಪಕ್ಷದ ನಾಯಕರು ಈಗ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ನಮ್ಮ ಪಕ್ಷ ಹಾಗೂ ಮಾನ್ಯ ಹೆಚ್.ಡಿ.ದೇವೇಗೌಡರ ಬಗ್ಗೆ ಅಚಲ ನಿಷ್ಠೆ ಹೊಂದಿದ್ದ ದಿವಂಗತ ಮನಗೂಳಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT