ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ಲಕ್ಷ ಇವಿಎಂ ಕಣ್ಮರೆ: ಸ್ವತಂತ್ರ ತನಿಖೆಗೆ ಎಚ್‌.ಕೆ.ಪಾಟೀಲ ಆಗ್ರಹ

Last Updated 8 ಮೇ 2022, 16:17 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳಿಗೆ ಬಳಕೆ ಮಾಡಲು ಪೂರೈಸಿದ್ದ 19 ಲಕ್ಷ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಕಣ್ಮರೆಯಾಗಿರುವ ಕುರಿತು ಸ್ವತಂತ್ರ ತನಿಖೆ ನಡೆಸಲು ರಾಷ್ಟ್ರಪತಿಯವರಿಗೆ ಪತ್ರ ಬರೆಯುವಂತೆ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಗ್ರಹಿಸಿದರು.

ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಚುನಾವಣಾ ಸುಧಾರಣೆ ಕುರಿತು ಚರ್ಚೆ ನಡೆದಿತ್ತು. ಆಗ, 19 ಲಕ್ಷ ಇವಿಎಂಗಳು ಕಣ್ಮರೆಯಾಗಿರುವ ಕುರಿತು ಕೇಂದ್ರ ಚುನಾವಣಾ ಆಯೋಗವು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿಯಲ್ಲಿ ಒಪ್ಪಿಕೊಂಡಿರುವುದನ್ನು ಪಾಟೀಲ ಪ್ರಸ್ತಾಪಿಸಿದ್ದರು. ಈ ಕುರಿತು ದಾಖಲೆಗಳನ್ನು ಒದಗಿಸುವುದಾಗಿ ಹೇಳಿದ್ದರು.

ಮಾಹಿತಿ ಹಕ್ಕು ಹೋರಾಟಗಾರ ಮನೋರಂಜನ್‌ ರಾಯ್‌ ಕೇಂದ್ರ ಚುನಾವಣಾ ಆಯೋಗ ಸೇರಿದಂತೆ ವಿವಿಧ ಪ್ರಾಧಿಕಾರಗಳಿಂದ ಪಡೆದಿರುವ ಅಧಿಕೃತ ಮಾಹಿತಿಯ 2,750 ಪುಟಗಳಷ್ಟು ದಾಖಲೆಗಳನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಭಾನುವಾರ ಸಲ್ಲಿಸಿದರು. ಇವಿಎಂ ಕಣ್ಮರೆ, ಹ್ಯಾಕಿಂಗ್‌ ಸಾಧ್ಯತೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯುಳ್ಳ ಮನವಿಯನ್ನೂ ನೀಡಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ, ‘ಹಲವು ವರ್ಷಗಳಿಂದ ಚುನಾವಣಾ ಪ್ರಕ್ರಿಯೆಗೆ ಒದಗಿಸಿದ್ದ 19 ಲಕ್ಷ ಇವಿಎಂಗಳು ಎಲ್ಲಿವೆ ಎಂಬುದು ಗೊತ್ತಿಲ್ಲ. ಅವುಗಳನ್ನು ಬಳಸಿ ಚುನಾವಣಾ ಅಕ್ರಮ ಎಸಗುವ ಸಾಧ್ಯತೆ ಇದೆ. ಈ ಕುರಿತು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಯವರಿಗೆ ಪತ್ರ ಬರೆಯುವಂತೆ ಸ್ಪೀಕರ್‌ ಅವರನ್ನು ಒತ್ತಾಯಿಸಿದ್ದೇನೆ’ ಎಂದರು.

‘ಇವಿಎಂಗಳ ಸುರಕ್ಷತೆಯ ಖಾತರಿಪಡಿಸಿಕೊಳ್ಳಲು ವಿಧಾನಸಭೆಯಲ್ಲೇ ಹ್ಯಾಕಥಾನ್‌ ಆಯೋಜಿಸಬೇಕು, ಇವಿಎಂ ಕಣ್ಮರೆ ಕುರಿತು ಚುನಾವಣಾ ಆಯೋಗದ ಅಧಿಕಾರಿಗಳನ್ನು ಕರೆಸಿ ವಿವರ ಪಡೆಯಬೇಕು, ಚುನಾವಣಾ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವ್ಯವಸ್ಥೆ ಮಾಡುವಂತೆಯೂ ಆಗ್ರಹಿಸಲಾಗಿದೆ. ಚುನಾವಣಾ ಸುಧಾರಣೆ ಕುರಿತ ಚರ್ಚೆಯಲ್ಲಿ ವಿಧಾನಮಂಡಲದ ಸದಸ್ಯರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ಕಳುಹಿಸುವಂತೆಯೂ ಒತ್ತಾಯಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT