ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ: ಅದಿರು ತೆಗೆಯುವ ಹೊಣೆ ಖಾಸಗಿಗೆ

ಕಲ್ಯಾಣ ಕರ್ನಾಟಕದಲ್ಲಿ ಜ್ಯುವೆಲರಿ ಪಾರ್ಕ್
Last Updated 20 ಮಾರ್ಚ್ 2021, 15:01 IST
ಅಕ್ಷರ ಗಾತ್ರ

ಬೆಂಗಳೂರು: ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು ತೆಗೆಯುವ ಹೊಣೆಯನ್ನು ಖಾಸಗಿಯವರಿಗೆ ವಹಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ಚಿನ್ನಾಭರಣ ತಯಾರಕರ ಸಂಘಟನೆಗಳ ಜತೆ ಶನಿವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿನ್ನ ಉತ್ಪಾದನೆ ಏಕೈಕ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ಇಲ್ಲಿ ಹೆಚ್ಚಿನ ಪ್ರಮಾಣದ ಚಿನ್ನ ಉತ್ಪಾದನೆ ಮಾಡುವ ಉದ್ದೇಶದಿಂದ ಅದಿರು ತೆಗೆಯುವ ಹೊಣೆಯನ್ನು ಖಾಸಗಿ ಕಂಪನಿಗೆ ನೀಡುವ ಬಗ್ಗೆ ಆಲೋಚನೆ ಇದೆ ಎಂದು ಹೇಳಿದರು.

ಖಾಸಗಿಯವರಿಗೆ ವಹಿಸಿದರೆ ನಿರ್ವಹಣೆ ಉತ್ತಮಗೊಂಡು, ಉತ್ಪಾದನೆ ಹೆಚ್ಚಳವಾಗಲಿದೆ. ಕಾರ್ಮಿಕರಿಗೂ ಉದ್ಯೋಗ ಸಿಗಲಿದ್ದು, ಸರ್ಕಾರ ಮತ್ತು ಖಾಸಗಿಯವರಿಗೆ ಇದರಿಂದ ಲಾಭವೂ ಸಿಗಲಿದೆ ಎಂದು ವಿವರಿಸಿದರು.

ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯ ಭೂಮಿ, ಆಡಳಿತ ಮಂಡಳಿ ಸರ್ಕಾರದ ನಿರ್ವಹಣೆಯಲ್ಲೇ ಮುಂದುವರಿಯಲಿದೆ. ಮುಖ್ಯಮಂತ್ರಿಯವರ ಜತೆಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಜ್ಯುವೆಲರಿ ಪಾರ್ಕ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸಲು ಆಭರಣ ತಯಾರಿಕಾ ಪ್ರದೇಶ (ಜ್ಯುವೆಲರಿ ಪಾರ್ಕ್‌) ಸ್ಥಾಪಿಸಲಾಗುವುದು. ಕಲಬುರ್ಗಿ ಅಥವಾ ಬೀದರ್‌ ಜಿಲ್ಲೆಯಲ್ಲಿ ಅಂದಾಜು 75 ಎಕರೆ ಜಮೀನಿನಲ್ಲಿ ಈ ಪಾರ್ಕ್‌ ತಲೆ ಎತ್ತಲಿದೆ ಎಂದು ನಿರಾಣಿ ಹೇಳಿದರು.

‘ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳಲಿರುವ ಈ ಪಾರ್ಕ್‌ ಅನ್ನು ಬೆಂಗಳೂರಿನಲ್ಲೇ ಸ್ಥಾಪಿಸಿ ಎಂದು ಸಭೆಯಲ್ಲಿ ಹಾಜರಿದ್ದ ಉದ್ಯಮಿಗಳು ಬೇಡಿಕೆ ಮಂಡಿಸಿದರು. ಅದನ್ನು ಒಪ್ಪಲಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಆದ್ಯತೆ ಮೇರೆಗೆ ಈ ಪಾರ್ಕ್‌ ಸ್ಥಾಪಿಸಲಾಗುತ್ತಿದ್ದು, ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಹೇಳಿದ್ದೇನೆ’ ಎಂದು ನಿರಾಣಿ ತಿಳಿಸಿದರು.

‘ಬೆಂಗಳೂರಿನಿಂದ ಹೊರಗೆ ಪಾರ್ಕ್ ಸ್ಥಾಪಿಸುವುದಾದಲ್ಲಿ ತೆರಿಗೆ ವಿನಾಯಿತಿ ನೀಡಬೇಕು ಎಂಬ ಉದ್ಯಮಿಗಳ ಬೇಡಿಕೆ ಕುರಿತಾಗಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಪ್ರಲ್ಹಾದ ಜೋಶಿ ಜತೆ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT