ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಿಎಂ ಯಾರು ಹೇಳಿ: ಕುಮಾರಸ್ವಾಮಿ ಪ್ರಶ್ನೆ

ಹೆಸರು ಬಹಿರಂಗಕ್ಕೆ ಎಚ್‌.ಡಿ. ಕುಮಾರಸ್ವಾಮಿ ಆಗ್ರಹ
Last Updated 3 ಅಕ್ಟೋಬರ್ 2020, 17:15 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಅವರ ವಿಚಾರಣೆ ನಡೆಸದಂತೆ ಪ್ರಭಾವ ಬೀರಲು ಯತ್ನಿಸಿದ ಹಾಗೂ ನಿರೂಪಕಿ ಜತೆ ಸಂಪರ್ಕದಲ್ಲಿದ್ದ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಅನುಶ್ರೀ ಜತೆ ಸಂಪರ್ಕದಲ್ಲಿದ್ದರು. ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು ಎಂಬ ಮಾಧ್ಯಮ ವರದಿಗಳ ಕುರಿತು ಶನಿವಾರ ಹರಿಹಾಯ್ದ ಅವರು, ‘ಯಾರು ಆ ಮಾಜಿ ಮುಖ್ಯಮಂತ್ರಿ ಎಂಬ ಸತ್ಯವನ್ನು ಹೇಳಬೇಕು. ತಪ್ಪಿದರೆ ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಡ್ರಗ್ಸ್‌ ಪ್ರಕರಣದಲ್ಲಿ ಮಂಗಳೂರು ಪೊಲೀಸರು ನೋಟಿಸ್‌ ನೀಡಿದ ಬಳಿಕ ಆ ನಿರೂಪಕಿ ಮೂರೂ ರಾಜಕೀಯ ಪಕ್ಷಗಳ ಮುಖಂಡರ ಜತೆ ಚರ್ಚೆ ಮಾಡಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿಯ ಜತೆಗೂ ಚರ್ಚಿಸಿದ್ದಾರೆ ಎಂಬ ಸುದ್ದಿ ಪ್ರಸಾರ ಮಾಡಲಾಗಿದೆ. ರಾಜ್ಯದಲ್ಲಿಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ. ಕೃಷ್ಣ, ವೀರಪ್ಪ ಮೊಯಿಲಿ, ನಾನು, ಸಿದ್ದರಾಮಯ್ಯ, ಡಿ.ವಿ. ಸದಾನಂದ ಗೌಡ ಮತ್ತು ಜಗದೀಶ್‌ ಶೆಟ್ಟರ್‌ ಇದ್ದೇವೆ. ನಿರೂಪಕಿಯ ಪ್ರಕರಣದಲ್ಲಿ ಇರುವವರು ಯಾರು ಎಂಬುದನ್ನು ಹೇಳಬೇಕಲ್ಲವೆ’ ಎಂದು ಪ್ರಶ್ನಿಸಿದರು.

‘ಮಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್ ನಾಯಕ್‌ ಅವರೇ ಈ ಮಾಹಿತಿ ನೀಡಿದ್ದಾಗಿ ವರದಿ ಮಾಡಿದ ಪತ್ರಕರ್ತ ನನಗೆ ತಿಳಿಸಿದ್ದಾನೆ. ತನಿಖೆ ನಡೆಯುತ್ತಿರುವಾಗಲೇ ಈ ಮಾಹಿತಿ ಹೇಗೆ ಸೋರಿಕೆ ಆಯಿತು? ಮಾಹಿತಿ ನೀಡಿದ ಅಧಿಕಾರಿ ಸತ್ಯ ಹೇಳಬೇಕು. ಇಲ್ಲವಾದರೆ ಆತನನ್ನು ಬಂಧಿಸಬೇಕು. ನಾನು ಈಗ ಮಾತನಾಡದಿದ್ದರೆ ಜನರು ತಪ್ಪು ಕಲ್ಪನೆ ಮಾಡಿಕೊಳ್ಳುತ್ತಾರೆ. ಕಪೋಲಕಲ್ಪಿತ ವರದಿ ಪ್ರಸಾರ ಮಾಡುವುದರ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT