ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಸಂತೋಷ್‌ ಕೊಡುಗೆ ಏನು? -ಎಚ್.ಡಿ.ಕುಮಾರಸ್ವಾಮಿ

Last Updated 19 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ಬೆಂಗಳೂರು: ‘ಅವನ್ಯಾರೋ ಜೋಳಿಗೆ ಹಿಡಿದುಕೊಂಡು ಓಡಾಡೋನು ಏನೋ‌ ಹೇಳಿದ್ದಾನೆ. ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು?...’

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ ಪರಿ ಇದು.

ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಕುಟುಂಬ, ಜೆಡಿಎಸ್‌ ಹಾಗೂ ಪಂಚರತ್ನ ಯೋಜನೆಗಳ ಬಗ್ಗೆ ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದರು.

‘ಮಿಸ್ಟರ್ ಸಂತೋಷ್, ಲೂಟಿ ದರೋಡೆ ಮಾಡಿ ಕರ್ನಾಟಕದ ಹಣವನ್ನು ಕೊಂಡೊಯ್ದಿದ್ದೀರಾ. ಸಂತೋಷವಾಗಿದ್ದೀರಂತೆ ಲೂಟಿ ಹೊಡೆದು. ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು, ವಾಮಾಚಾರ ಮಾಡುವವರಿಂದ ಹಣ ತೆಗೆದುಕೊಂಡು ಆಪರೇಷನ್ ಕಮಲ ಮಾಡಿ ನಮ್ಮ‌ ಸರ್ಕಾರ ಉರುಳಿಸಿದಿರಿ’ ಎಂದು ಕಿಡಿಕಾರಿದರು.

‘ಪ್ರಧಾನಿ‌ ಅವರ ಬಳಿ ನಮ್ಮ ಕುಟುಂಬ ಬಗ್ಗೆ ಕೇಳಿ. ಲಘುವಾಗಿ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ. 2023ಕ್ಕೆ ನಿಮ್ಮ ಪರಿಸ್ಥಿತಿ ಏನಾಗಿರುತ್ತದೆ ಎನ್ನುವುದನ್ನು ಒಮ್ಮೆ ಊಹೆ ಮಾಡಿಕೊಳ್ಳಿ’ಎಂದರು.

‘ನಿಮ್ಮದು 40 ಪರ್ಸೆಂಟ್‌ ಸರ್ಕಾರ. ನಮ್ಮ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೋದಿ ಹೆಸರಿನಲ್ಲಿ ಹೊಟ್ಟೆಪಾಡು ನೋಡ್ಕೊಂಡಿರೋರು ನೀವು. ನಾನು ಸರ್ಕಾರ ಮಾಡೋಣ ಎಂದು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ಯಾರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎನ್ನುವುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತು. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾನಾಡಬೇಡಿ ಮಿಸ್ಟರ್ ಅಶೋಕ್, ಮಿಸ್ಟರ್ ಸಂತೋಷ್’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ಅರ್ಜಿ ಸಲ್ಲಿಸಿದಾಗ ನೋಡೋಣ’

‘ಬಿಜೆಪಿಯವರು ದರೋಡೆಕೋರರು, ಲೂಟಿಕೋರರು. ಇಂಥ ಬಿಜೆಪಿಯವರ ಜತೆ ಸೇರಿ ನಾನು ಸರ್ಕಾರ ನಡೆಸುವುದಕ್ಕೆ ಆಗುತ್ತಾ? ಪಂಚ ರತ್ನ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವೇ’ ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘2023ರ ಚುನಾವಣೆ ನಂತರ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಆಗ ಬಿಜೆಪಿಯವರು ನಮ್ಮ ಮುಂದೆ ಅರ್ಜಿ ಹಿಡಿದು ಬರುತ್ತಾರೆ. ಆಗ ನೋಡೋಣ‘ ಎಂದರು.

‘ಸಮಾಜವನ್ನು ಒಡೆಯುವ, ಜನರ ನಡುವೆ ದ್ವೇಷ ಬಿತ್ತುವ ಇಂಥವರ ಜತೆ ಸರ್ಕಾರ ರಚಿಸಲು ಸಾಧ್ಯವೇ?’ ಎಂದು ಕುಮಾರಸ್ವಾಮಿ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT