ಭಾನುವಾರ, ಮೇ 22, 2022
22 °C
ಸಚಿವ ಅಶ್ವತ್ಥನಾರಾಯಣ ವಿರುದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪ

ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥನಾರಾಯಣ ಹೆಸರುವಾಸಿ: ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ರಾಜಕೀಯಕ್ಕೆ ಬರುವ ಮೊದಲು ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಹೆಸರುವಾಸಿ. ಪರೀಕ್ಷೆ ಬರೆಯದೇ ಇದ್ದವರಿಗೂ ಕೊಡಿಸಿದ್ದರು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥನಾರಾಯಣ ಅವರದ್ದು ಎತ್ತಿದ ಕೈ ಅನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಿಂದೆ ಅವರು ನರ್ಸುಗಳಿಗೆ ಸರ್ಟಿಫಿಕೇಟ್ ಕೊಡಿಸಿದ್ದರು. ಕಾಂಗ್ರೆಸ್‌ನವರು ಅದನ್ನಾದರೂ ಹೇಳಲಿ’ ಎಂದರು.

‘ಅಶ್ವತ್ಥನಾರಾಯಣ ಬಗ್ಗೆ ಮೃದು ಧೋರಣೆ ಇಲ್ಲ. ದಾಖಲೆ ಇಟ್ಟುಕೊಂಡು ಮಾತನಾಡಿ ಎಂದು ಕಾಂಗ್ರೆಸ್‌ನವರಿಗೆ ಹೇಳಿದ್ದೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಎಲ್ಲದಕ್ಕೂ ಮೌನವೇ ಈ ಸರ್ಕಾರದ ಉತ್ತರ. ಎಲ್ಲ ಹಗರಣಗಳ ಬಗ್ಗೆಯೂ ಮೌನವಾಗಿಯೇ ಇದೆ. ಎರಡು ತಿಂಗಳಿನಿಂದ ನಡೆದ ಗಲಾಟೆ, ಗಲಭೆ ನಡೆದಾಗಲೂ ಸರ್ಕಾರ ಸುಮ್ಮನೇ ಇತ್ತು. ಯಾವುದರ ಬಗ್ಗೆಯೂ ಮಾತನಾಡದೇ ಇರುವುದನ್ನು ನೋಡಿದರೆ ಸರ್ಕಾರದಲ್ಲಿರುವವರ ಪಾಲು ಇದರಲ್ಲಿದೆಯೇ ಎಂಬ ಅನುಮಾನ ಮೂಡುತ್ತದೆ. ಇದು ರಾಜ್ಯದ ಹಣೆಬರಹ ಎಂದರು.

ಒಂದು ಸಣ್ಣ ಪ್ರಕರಣದ ಬಗ್ಗೆ ಯಾರೋ ಕೆಲವರು ಮಾತನಾಡುತ್ತಿದ್ದಾರೆ. ₹20 ಲಕ್ಷದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆಪಿಎಸ್‌ಸಿ ಶುದ್ಧ ಮಾಡಲು ಹೊರಟರು. ಆದರೆ, ಶ್ಯಾಮ್‌ಭಟ್‌ ಅವರನ್ನು ತಂದು ಕೂರಿಸಿದ ಮೇಲೆ ಉದ್ಯೋಗ ಎಂಬುದು ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿತು. ಉಪವಿಭಾಗಾಧಿಕಾರಿ, ಡಿವೈಎಸ್‌ಪಿ ಹುದ್ದೆಗೆ ಇಷ್ಟು ಎಂಬಂತೆ ವ್ಯಾಪಾರ ನಡೆಯಿತು. ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ ನಾಯಕರಿಗೆ ಯಾವ ನೈತಿಕತೆ ಇದೆ. ಕಾಂಗ್ರೆಸ್ ಮಾಡಿದ್ದನ್ನೇ ಈಗ ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು