ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ ಕೋವಿಡ್‌ ನಾಲ್ಕನೇ ಅಲೆ ಸಾಧ್ಯತೆ: ಸಚಿವ ಸುಧಾಕರ್‌

Last Updated 21 ಮಾರ್ಚ್ 2022, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಐಐಟಿ ಕಾನ್ಪುರ ತಂಡದ ಅಧ್ಯಯನ ಪ್ರಕಾರ ಆಗಸ್ಟ್‌ನಲ್ಲಿ ಕೋವಿಡ್‌ ನಾಲ್ಕನೇ ಅಲೆ ಬರುವ ಸಾಧ್ಯತೆ ಇದೆ. ಆದರೆ, ದೇಶದಲ್ಲಿ ಲಸಿಕಾ ಅಭಿಯಾನ ವ್ಯಾಪಕವಾಗಿ ಕೈಗೊಂಡಿರುವುದರಿಂದ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಶಶಿಲ್‌ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ’ಹೊಸ ತಳಿ ಬಿಎ2 ಫಿಲಿಪ್ಪೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದು, 40 ದೇಶಗಳಲ್ಲಿ ಹಬ್ಬಿದೆ. ಹೀಗಾಗಿ, ಎಚ್ಚರಿಕೆ ಕ್ರಮಗಳು ಅಗತ್ಯ’ ಎಂದು ವಿವರಿಸಿದರು.

‘ಮುಖ್ಯಮಂತ್ರಿ ಅವರ ಜತೆಯೂ ಈ ಬಗ್ಗೆ ಸಭೆ ನಡೆಸಲಾಗುವುದು. ರಾಜ್ಯದಲ್ಲಿ 10.25 ಕೋಟಿಗೂ ಹೆಚ್ಚು ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 4.97 ಕೋಟಿಗೂ ಹೆಚ್ಚು ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 4.76 ಕೋಟಿಗೂ ಹೆಚ್ಚು ಮಂದಿ ಎರಡನೇ ಡೋಸ್‌ ಪಡೆದಿದ್ದು, ಶೇಕಡ 96 ರಷ್ಟು ಪ್ರಗತಿ ಸಾಧಿಸಲಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ’ ಎಂದು ವಿವರಿಸಿದರು.

‘ಕೋವಿಡ್ ತಡೆಯಲು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮೂರು ಅಲೆಗಳಿಂದಾಗಿ ಸಾಕಷ್ಟು ಅನುಭವ ದೊರೆತಿದ್ದು, ಎಲ್ಲ ರೀತಿಯಲ್ಲೂ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 55,256 ಆಮ್ಲಜನಕ ಹೊಂದಿರುವ ಹಾಸಿಗೆಗಳಿವೆ. 165 ಪ್ರಯೋಗಾಲಯಗಳಿವೆ. ಹೀಗಾಗಿ, ನಾಲ್ಕನೇ ಅಲೆ ಬಂದರೂ ಪರಿಣಾಮಕಾರಿ ಎದುರಿಸುವ ಸಾಮರ್ಥ್ಯ ನಮಗಿದೆ’ ಎಂದು ತಿಳಿಸಿದರು.

1,884 ಮಕ್ಕಳಲ್ಲಿ ಟೈಪ್‌–1 ಮಧುಮೇಹ
ಬೆಂಗಳೂರು:
‘ರಾಜ್ಯದಲ್ಲಿ 18 ವರ್ಷದ ಒಳಗಿನ 1,884 ಮಕ್ಕಳಲ್ಲಿ ಟೈಪ್‌–1 ಮಧುಮೇಹ ಕಂಡು ಬಂದಿದೆ. ಶೀಘ್ರ ಇನ್ನೊಂದು ಬಾರಿ ಶಾಲೆಗಳಲ್ಲಿ ಮಕ್ಕಳ ಸಮೀಕ್ಷೆ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಕೆ.ಎಸ್‌. ನವೀನ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಆರೋಗ್ಯ ನಂದನ ಎನ್ನುವ ವಿಶೇಷ ಅಭಿಯಾನದ ಅಡಿಯಲ್ಲಿ ಒಟ್ಟು 78.32 ಲಕ್ಷ ಮಕ್ಕಳ ಆರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ಇದರಲ್ಲಿ 1,884 ಮಕ್ಕಳು ಮಧುಮೇಹದಿಂದ ಬಳಲುತ್ತಿರುವುದನ್ನು ಗುರುತಿಸಲಾಗಿದೆ’ ಎಂದು ವಿವರಿಸಿದರು.

‘ತಾಲ್ಲೂಕು ಮಟ್ಟದಲ್ಲಿ ಟೈಪ್‌–1 ಮಧುಮೇಹ ಪತ್ತೆ ಮಾಡಲು ಈಗಾಗಲೇ ಪ್ರಯೋಗಾಲಯಗಳ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ಸೂಲಿನ್‌ ಹಾಗೂ ಇತರೆ ಔಷಧಗಳನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT