ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪ್ರಕರಣ ಹೆಚ್ಚಳ | ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ: ಸಚಿವ ಸುಧಾಕರ್‌

Last Updated 4 ಏಪ್ರಿಲ್ 2021, 22:02 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಕೋವಿಡ್‌ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಜ್ಯದ ಕೆಲವು ಕಡೆಗಳಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಏರುತ್ತಿವೆ. ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳನ್ನು ಆಧರಿಸಿ ನಾವು ಈಗಲೇ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳು ಕಷ್ಟಕರವಾಗಿರಲಿವೆ’ ಎಂದರು.

‘ಈ ವಿಚಾರದಲ್ಲಿ ಯಾರನ್ನೋ ಮೆಚ್ಚಿಸುವುದಕ್ಕಾಗಿ ತೀರ್ಮಾನ ಕೈಗೊಳ್ಳುವುದು ಸಾಧ್ಯವಿಲ್ಲ. ಕೆಲವು ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಂಡು, ಅನುಷ್ಠಾನಕ್ಕೆ ತರಲೇಬೇಕಿದೆ. ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ. ಅಂತಹ ಟೀಕೆಗಳಿಗೆ ಅಂಜುವುದಿಲ್ಲ. ಆರೋಗ್ಯ ಸಚಿವನಾಗಿ ರಾಜ್ಯದ ಜನರ ಆರೋಗ್ಯವನ್ನು ಕಾಪಾಡುವುದು ನನ್ನ ಮೊದಲ ಕರ್ತವ್ಯ’ ಎಂದು ಪ್ರತಿಕ್ರಿಯಿಸಿದರು.

ಜೀವನ ಮತ್ತು ಜೀವನೋಪಾಯ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಕಠಿಣ ಸವಾಲು ರಾಜ್ಯ ಸರ್ಕಾರದ ಮುಂದಿದೆ. ಅದನ್ನು ಅರಿತು ಮುಖ್ಯಮಂತ್ರಿಯವರು ಕೆಲವರಿಗೆ ವಿನಾಯಿತಿಗಳನ್ನು ನೀಡಿದ್ದಾರೆ. ಆ ಬಗ್ಗೆ ವ್ಯಾಖ್ಯಾನ ಮಾಡಲು ತಾವು ಬಯಸುವುದಿಲ್ಲ ಎಂದರು.

ಜನರ ಆರೋಗ್ಯದ ಹಿತದೃಷ್ಟಿಯಿಂದ ಕಳುಹಿಸಬೇಕಾದ ಎಲ್ಲ ವರದಿಗಳನ್ನೂ ಮುಖ್ಯಮಂತ್ರಿಯವರಿಗೆ ಕಳುಹಿಸಲಾಗಿದೆ. ಮಾಸ್ಕ್‌ ವಿಚಾರದಲ್ಲಿ ಮತ್ತಷ್ಟು ಒತ್ತು ನೀಡಬೇಕಿದೆ. ಮಾಸ್ಕ್‌ ಧರಿಸದೇ ಇರುವವರಿಗೆ ದಂಡ ವಿಧಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕಿದೆ ಎಂದು ಹೇಳಿದರು.

ಆರೋಗ್ಯ ಸಚಿವನಾಗಿ ಇತಿಮಿತಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರ ಎಂಬುದು ಒಂದು ದೊಡ್ಡ ವ್ಯವಸ್ಥೆ. ಮಾರ್ಗಸೂಚಿ ವಿಚಾರದಲ್ಲಿ ತಮಗೂ ಹಲವು ರೀತಿಯ ಒತ್ತಡಗಳು ಬಂದಿದ್ದವು. ಶಿಕ್ಷಣ ಸಂಸ್ಥೆಗಳು, ಚಿತ್ರನಟರ ಅಭಿಮಾನಿಗಳು, ಜಿಮ್ ಮಾಲೀಕರು, ಮದುವೆ ಸಮಾರಂಭಗಳ ಆಯೋಜಕರಿಂದಲೂ ಒತ್ತಡ ಬಂದಿದೆ. ಅವರು ಹೇಳುವುದರಲ್ಲಿ ತಪ್ಪಿಲ್ಲ. ಆದರೆ, ರಾಜ್ಯದ ಜನರ ಜೀವ ಉಳಿಸುವುದಕ್ಕೆ ಪ್ರಥಮ ಆದ್ಯತೆ ಎಂದರು.

‘ಕಠಿಣ ನಿಯಮಗಳಿಂದ ಕೆಲವರಿಗೆ ಬೇಸರ ಆಗಬಹುದು. ನನ್ನ ವಿರುದ್ಧ ಮಾತನಾಡಬಹುದು. ಆದರೆ, ತಜ್ಞರನ್ನು ಒಳಗೊಂಡ ತಾಂತ್ರಿಕ ಸಲಹಾ ಸಮಿತಿಯ ವರದಿಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವುದು ನನ್ನ ಕೆಲಸ. ಯಾರು ಏನಾದರೂ ಟೀಕೆ ಮಾಡಿಕೊಳ್ಳಲಿ. ನನ್ನ ಕೆಲಸವನ್ನು ನಾನು ಮಾಡುತ್ತೇನೆ’ ಎಂದು ಹೇಳಿದರು.

ಬಸ್‌ಗಳಲ್ಲಿ ನಿಯಮ ಪಾಲನೆ ಆಗದಿರುವುದು ಗಮನಕ್ಕೆ ಬಂದಿದೆ. ಈ ವಿಚಾರ ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಸೇರಿಲ್ಲ. ಮಾರ್ಗಸೂಚಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ ಎಂದರು.

ರಾಜ್ಯಕ್ಕೆ ಇಂದು 15.25 ಲಕ್ಷ ಡೋಸ್‌ ಲಸಿಕೆ
ರಾಜ್ಯಕ್ಕೆ ಸೋಮವಾರ 15.25 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಪೂರೈಕೆಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಇದುವರೆಗೆ 45 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಶನಿವಾರ ಒಂದೇ ದಿನ 2.09 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಸದ್ಯ ರಾಜ್ಯದಲ್ಲಿ 8 ಲಕ್ಷ ಡೋಸ್‌ ಲಸಿಕೆಯ ದಾಸ್ತಾನು ಇದೆ. ಹೆಚ್ಚುವರಿಯಾಗಿ 25 ಲಕ್ಷ ಡೋಸ್‌ನಷ್ಟು ಲಸಿಕೆಯನ್ನು ತಕ್ಷಣ ಪೂರೈಸುವಂತೆ ಕೇಂದ್ರ ಆರೋಗ್ಯ ಸಚಿವರು ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸೋಮವಾರ 5.25 ಲಕ್ಷ ಡೋಸ್‌ ಲಸಿಕೆ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತಲುಪಲಿದೆ. 10 ಲಕ್ಷ ಡೋಸ್‌ ಲಸಿಕೆ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದೆ. ಇನ್ನೂ 10 ಲಕ್ಷ ಡೋಸ್‌ ಲಸಿಕೆ ವಾರಾಂತ್ಯದೊಳಗೆ ಪೂರೈಕೆಯಾಗಲಿದೆ ಎಂದು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಕ್ರಿಯ ಪ್ರಕರಣ 39 ಸಾವಿರಕ್ಕೆ ಏರಿಕೆ
ರಾಜ್ಯದಲ್ಲಿ ಸತತ ಐದನೇ ದಿನ ಕೂಡ ನಾಲ್ಕು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 24 ಗಂಟೆಗಳ ಅವಧಿಯಲ್ಲಿ 4,553 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 39,092ಕ್ಕೆ ತಲುಪಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿದ್ದು, 7 ಜಿಲ್ಲೆಗಳಲ್ಲಿ ಮೂರಂಕಿ ತಲುಪಿದೆ. ಬೆಂಗಳೂರಿನಲ್ಲಿ ಮತ್ತೆ 2,787 ಮಂದಿ ಸೋಂಕಿತರಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4.47 ಲಕ್ಷ ದಾಟಿದೆ. ಮೈಸೂರು (260), ಕಲಬುರ್ಗಿ (170), ಬೆಂಗಳೂರು ಗ್ರಾಮಾಂತರ (155), ಬೀದರ್ (147), ತುಮಕೂರು (107), ಹಾಸನ (104), ಧಾರವಾಡ (100) ಜಿಲ್ಲೆಯಲ್ಲಿ ಅಧಿಕ ‍ಪ್ರಕರಣಗಳು ವರದಿಯಾಗಿವೆ.

ಕೋವಿಡ್ ಪೀಡಿತರಲ್ಲಿ ಮತ್ತೆ 15 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 8 ಮಂದಿ, ಕಲಬುರ್ಗಿಯಲ್ಲಿ 3 ಮಂದಿ, ಧಾರವಾಡದಲ್ಲಿ ಇಬ್ಬರು, ತುಮಕೂರು ಮತ್ತು ಹಾಸನದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 12,625ಕ್ಕೆ ತಲುಪಿದೆ. ಸದ್ಯ ಸೋಂಕು ದೃಢ ಪ್ರಮಾಣ ಶೇ 3.79 ರಷ್ಟಿದೆ. 331 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಪರೀಕ್ಷೆಗಳ ಸಂಖ್ಯೆ ಕೂಡ ಏರಿಕೆ ಕಂಡಿದೆ.

ಒಂದು ದಿನದ ಅವಧಿಯಲ್ಲಿ 1.19 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೊರೊನಾ ಸೋಂಕಿತರಲ್ಲಿ 2,060 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 9.63 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT