ಮಡಿಕೇರಿ/ಹಾಸನ/ಮೈಸೂರು: ಕೊಡಗು ಜಿಲ್ಲೆಯಲ್ಲಿ ಗುರುವಾರವೂ ಧಾರಾಕಾರ ಮಳೆಯಾಗಿದ್ದು, ಹಾರಂಗಿ ಜಲಾಶಯವು ಭರ್ತಿಯಾಗುವ ಹಂತ ತಲುಪಿದೆ. ಬುಧವಾರ ರಾತ್ರಿಯಿಂದಲೇ ನದಿಗೆ 6,040 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 2,859 ಅಡಿಯಾಗಿದ್ದು, ಗುರುವಾರ ಸಂಜೆ 2,854.77 ಅಡಿಗೆ ತಲುಪಿತ್ತು. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಭರ್ತಿಗೆ 4 ಅಡಿ ಬಾಕಿ ಇರುವಂತೆಯೇ ನಾಲ್ಕು ಕ್ರೆಸ್ಟ್ ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತಿದೆ.
ಮಡಿಕೇರಿಯಲ್ಲಿ ಜಿಲ್ಲಾಡಳಿತ ಭವನದ ತಡೆಗೋಡೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಭೂಕುಸಿತವಾಗಿದೆ. ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದ ಅವಂದೂರು ಗ್ರಾಮದ ಬಾಬಿ ಚಿಣ್ಣಪ್ಪ (70) ಅವರ ಮೃತದೇಹವು ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ. ಭಾರಿ ಮಳೆಗೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.
ದಿಬ್ಬ ಕುಸಿತ: ಹಾಸನ ಜಿಲ್ಲೆಯಲ್ಲಿಯೂ ಧಾರಾಕಾರ ಮಳೆಯಾಗಿದೆ. ಅಡಿಕೆ, ಕಾಫಿ ತೋಟ ಜಲಾವೃತಗೊಂಡಿವೆ. ಸಕಲೇಶಪುರದ ಆನೆಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಾನಗುಡ್ಡೆ ಬಳಿ ದಿಬ್ಬ ಕುಸಿತವಾಗಿದೆ.
ಮನೆಗಳು ಹಾಗೂ ಅಂಗನವಾಡಿ ಕಟ್ಟಡ ಕುಸಿದು ಬೀಳುವ ಆತಂಕ ಎದುರಾಗಿದೆ. ಕಳೆದ ವರ್ಷವೂ ಇಲ್ಲಿ ಭೂಕುಸಿತವಾಗಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ದೋಣಿಗಾಲ್‌ನಿಂದ ಮಾರನಹಳ್ಳಿವರೆಗೆ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಮಳೆ ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬಂದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಯಗಚಿ ಜಲಾಶಯ ಭರ್ತಿಯಾಗಿದ್ದು, ನೀರು ಹೊರ ಹರಿಸಲಾಗುತ್ತಿದೆ. ಆಲೂರು ತಾಲ್ಲೂಕಿನ ಮಲ್ಲಾಪುರ, ಅರೆಹಳ್ಳದ ಕೊಪ್ಪಲು ಗ್ರಾಮದಲ್ಲಿ ತಲಾ ಒಂದು ಮನೆ ಕುಸಿದಿದೆ.
ಉರುಳಿದ ಮರಗಳು- ಸಂಚಾರ ಅಸ್ತವ್ಯಸ್ತ(ಶಿವಮೊಗ್ಗ ವರದಿ): ಶಿವಮೊಗ್ಗ ಜಿಲ್ಲೆಯಲ್ಲಿಯೂ ಮಳೆಯ ಅಬ್ಬರ ಮುಂದು
ವರಿದಿದೆ. ಸೊರಬ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮರಗಳು ಧರೆಗೆ ಉರುಳಿವೆ. ಹೊಸನಗರದಲ್ಲಿಯೂ ಮನೆಗಳು ಕುಸಿದಿವೆ.
ಚಂದ್ರಗುತ್ತಿ ಸಮೀಪ ಶತಮಾನದ ಮರ ಉರುಳಿಬಿದ್ದಿದೆ.ಹಣಗೆರೆ ಮಾರ್ಗದಲ್ಲೂ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಕೆಲವು ಸಮಯ ಸಂಚಾರಕ್ಕೆ ಅಡ್ಡಿಯಾಗಿತ್ತು.
ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಯಲ್ಲಿ 12 ಸೆಂ.ಮೀ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ದಾವಣಗೆರೆ ನಗರ, ನ್ಯಾಮತಿ, ತ್ಯಾವಣಿಗೆ, ಜಗಳೂರಿನಲ್ಲಿ ತುಂತುರು ಮಳೆಯಾಗಿದೆ.
ಕಬಿನಿಯಿಂದ ನದಿಗೆ ನೀರು: ಪ್ರವಾಹ ಮುನ್ನೆಚ್ಚರಿಕೆ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಗುರುವಾರ 18,000 ಕ್ಯುಸೆಕ್‍ಗೆ ಹೆಚ್ಚಿದೆ. ಕಪಿಲಾ ನದಿಗೆ ಅಧಿಕ ನೀರು ಹರಿಸುವ ಸಾಧ್ಯತೆ ಇದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
ಪ್ರಸ್ತುತ 12,500 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 2,284 ಅಡಿ ಇದ್ದು, ಗರಿಷ್ಠ ಮಟ್ಟಕ್ಕೆ 4 ಅಡಿ ಬಾಕಿ ಇದೆ. ಮೈಸೂರು ಜಿಲ್ಲೆಯಲ್ಲಿ ದಿನವಿಡೀ ತುಂತುರು ಮಳೆ ಆಗಿದೆ.
ಜಲಾಶಯಗಳಿಗೆ ಅಧಿಕ ನೀರು
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆಒಂದೇ ದಿನ 2 ಅಡಿ, ಭದ್ರಾ ಜಲಾಶಯಕ್ಕೆ 1.6 ಅಡಿ ನೀರು ಹರಿದುಬಂದಿದೆ.
ತುಂಗಾ ಜಲಾಶಯದಿಂದ 41,700 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ತುಂಬಿ ಹರಿಯುತ್ತಿದೆ.
ಕರಾವಳಿಯಲ್ಲಿ ಧಾರಾಕಾರ, 40 ಮನೆಗಳಿಗೆ ಹಾನಿ
ಮಂಗಳೂರು: ಕರಾವಳಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಮನೆಗಳು ಪೂರ್ಣ, 15 ಮನೆಗಳು ಭಾಗಶಃ ಹಾನಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ 20 ಮನೆಗಳಿಗೆ ಹಾನಿಯಾಗಿದೆ.
ಕಡಬ ತಾಲ್ಲೂಕು ಕೊಂಬಾರಿನಲ್ಲಿ ನಿಲ್ಲಿಸಿದ್ದ ಜೀಪ್ ಮೇಲೆ ಮರ ಉರುಳಿದ್ದು, ಹಾನಿಯಾಗಿದೆ. ನೇತ್ರಾವತಿ, ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಪುತ್ತೂರು- ಪರ್ಲಡ್ಕ- ಕುಂಜೂರುಪಂಜ- ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಗುರುವಾರ ಮುಳುಗಡೆಯಾಗಿದೆ. ಈ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿದೆ. ಪುತ್ತೂರಿನಿಂದ ಸಂಟ್ಯಾರು- ಕೈಕಾರ ಮೂಲಕವಾಗಿ ಸುತ್ತು ಬಳಸಿ ಜನರು ಸಂಚರಿಸಿದರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಸ್ರೂರು ಗ್ರಾಮದಲ್ಲಿ ಮನೆ ಮೇಲೆ ಮರ ಉರುಳಿದ್ದು, ವಾರಿಜಾ ಹಾಗೂ ವೆಂಕಮ್ಮ ಅವರಿಗೆ ಗಾಯಗಳಾಗಿವೆ. ಹಲವು ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಮೂಡಿಗೆರೆ ತಾಲ್ಲೂಕಿನ ದರ್ಶನ ಗ್ರಾಮದಲ್ಲಿ ಮನೆ ಮೇಲೆ ಮರ ಉರುಳಿದೆ. ಜಯಪುರ– ಬಸರೀಕಟ್ಟೆ ಮಾರ್ಗದಲ್ಲಿ ಅಬ್ಬಿಕಲ್ಲು ಬಳಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು.
ಚಿಕ್ಕಮಗಳೂರಿನಿಂದ ಮುತ್ತೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಂಚಾರ ಸ್ಥಗಿತವಾಗಿದೆ. ಬಸರೀಕಟ್ಟೆಯ ಪ್ರೌಢಶಾಲೆಯ ಮುಂಭಾಗದ ರಸ್ತೆ ಬದಿ ಮಣ್ಣು ಕುಸಿದಿದೆ. 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ನಾಲ್ಕು ವಿದ್ಯುತ್ ಪರಿವರ್ತಕಗಳು ನೆಲಕ್ಕುರುಳಿವೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.