ಭಾನುವಾರ, ನವೆಂಬರ್ 1, 2020
19 °C
ಹಲವೆಡೆ ಜಲಾವೃತಗೊಂಡ ಸೇತುವೆಗಳು l ಕುಸಿದ ಮನೆಗಳು l ದಿನಸಿ ನೀರು ಪಾಲು

ಉತ್ತರ ಕರ್ನಾಟಕದಾದ್ಯಂತ ಮಳೆ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬುಧವಾರವೂ ಮಳೆಯ ರೌದ್ರ ನರ್ತನ ಮುಂದುವರಿದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದೆ. ವಿಜಯಪುರದಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದೆ.

ಸತತ ಮಳೆಯಿಂದಾಗಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದ ಮನೆಯೊಂದರ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದಾರೆ.

ಗದಗ ಜಿಲ್ಲೆಯಾದ್ಯಂತ ಜೋರಾಗಿ ಮಳೆಯಾಗಿದೆ. ಕೊಣ್ಣೂರ ಬಳಿ ಹಳೆಯ ಮಲಪ್ರಭಾ ಸೇತುವೆ ಮುಳುಗಡೆಯಾಗಿದೆ. ಸುರಕೋಡ, ಕುರ್ಲಗೇರಿ ಬಳಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿವೆ. ನರಗುಂದ ಕಣಕಿಕೊಪ್ಪ ಮಧ್ಯೆ ಹಿರೇಹಳ್ಳ ಸೇತುವೆ ಕೊಚ್ಚಿ ಕೊಂಡು ಹೋಗಿ, ಸಂಚಾರ ಸ್ಥಗಿತಗೊಂಡಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಸಾರವಾಡ ಗ್ರಾಮದ ಮಲ್ಲಪ್ಪನ ಕೆರೆ ಏರಿ ಒಡೆದು, ಅಪಾರ ಪ್ರಮಾಣದ ನೀರು ಪೋಲಾಗಿದೆ. ಅಕ್ಕಪಕ್ಕದ ಜಮೀನುಗಳು ಜಲಾವೃತವಾಗಿದೆ. ಸಿಂದಗಿ ಮೋರಟಗಿ ಜನತಾ ಕಾಲೊನಿಯಲ್ಲಿ ಮನೆಗಳಿಗೆ ಮಂಗಳವಾರ ರಾತ್ರಿ ನೀರು ನುಗ್ಗಿದೆ. 25ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಅಕ್ಕಿ, ಗೋಧಿ, ದಿನಸಿಗಳೆಲ್ಲ ನೀರು ಪಾಲಾಗಿದೆ. ಅವರಿಗೆ ಈಗ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಡೋಣಿ ನದಿ ಪ್ರವಾಹದಿಂದ ತಾಳಿಕೋಟೆ– ಹಡಗಿನಾಳ ನೆಲಮಟ್ಟದ ಸೇತುವೆ ಮುಳುಗಿದೆ. ದೇವರ ಹಿಪ್ಪರಗಿ– ಬಸವನ ಬಾಗೇವಾಡಿ ಸಂಪರ್ಕ ರಸ್ತೆಯ ಸಾತಿಹಾಳ ಸಂಪರ್ಕ ಸೇತುವೆಯೂ ಮುಳುಗಿದೆ. ಜಿಲ್ಲೆಯ 10 ತಾಲ್ಲೂಕುಗಳನ್ನು ಅತಿವೃಷ್ಟಿ ಪೀಡಿತ ಘೋಷಿಸಲಾಗಿದೆ.

ಆಲಮಟ್ಟಿ ಜಲಾಶಯದ ಒಳಹರಿವು ಬುಧವಾರ ಸಂಜೆ 1.17 ಲಕ್ಷ ಕ್ಯುಸೆಕ್ ಗೆ ಹೆಚ್ಚಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ. ಸದ್ಯ ಪ್ರವಾಹದ ಯಾವುದೇ ಆತಂಕ ಇಲ್ಲ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಕಮಲಾಪುರ, ನವಲಗುಂದದ ಕೆಲಭಾಗಗಳಲ್ಲಿ ಮನೆಗಳು ಕುಸಿದಿವೆ. ನವಲಗುಂದ, ಅಣ್ಣಿಗೇರಿಯಲ್ಲಿ ಗೋವಿನ ಜೋಳ, ಹತ್ತಿ ಬೆಳೆ ನಾಶವಾಗಿದೆ. ಬೆಳಗಾವಿಯಲ್ಲೂ ಮಳೆ ಮುಂದುವರಿದಿದೆ. ಸವದತ್ತಿ ತಾಲ್ಲೂಕಿನ ಇನಾಮಹೊಂಗಲ ಬಳಿಯ ಧಾರವಾಡ ಸಂಪರ್ಕಿಸುವ ಸೇತುವೆ ಇನ್ನೂ ಜಲಾವೃತವಾಗಿಯೇ ಇದೆ. ಮೂಡಲಗಿ ತಾಲ್ಲೂಕಿನಲ್ಲಿ ಘಟಪ್ರಭಾ ನದಿಗೆ ನಿರ್ಮಿಸಿರುವ ಢವಳೇಶ್ವರ ಮತ್ತು ಅವರಾದಿಯ ಕೆಳಮಟ್ಟದ ಸೇತುವೆಗಳು ಜಲಾವೃತಗೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ಸಂಚಾರ ಸ್ಥಗಿತಗೊಂಡಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಎರಡು ಕಚ್ಚಾ ಮನೆಗಳು ಕುಸಿದಿವೆ. ಕಾರವಾರ ತಾಲ್ಲೂ
ಕಿನ ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾದ ಕಾರಣ ವಾಹನ ಸಂಚಾರ ಅಸ್ತವ್ಯವಸ್ತಗೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು