ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಉತ್ತಮ ಮಳೆ

ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ l ಚಿತ್ರದುರ್ಗದಲ್ಲಿ ಬಾಲಕಿ ಸಾವು
Last Updated 9 ಸೆಪ್ಟೆಂಬರ್ 2020, 16:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಉತ್ತಮ ಮಳೆಯಾಗಿದ್ದು, ಕೆರೆ–ಕಟ್ಟೆಗಳು, ಹಳ್ಳ–ಕೊಳ್ಳಗಳು ಭರ್ತಿಯಾಗಿವೆ.

ಚಿತ್ರದುರ್ಗ ಜಿಲ್ಲೆಯಚಳ್ಳೆಕೆರೆ ತಾಲ್ಲೂಕಿನ ಜಾಜೂರು ಗ್ರಾಮದಲ್ಲಿ ಮನೆ ಗೋಡೆ ಕುಸಿದುಚಲ್ಮೇಶ ಮತ್ತು ಲಕ್ಷ್ಮೀದೇವಿ ದಂಪತಿಯ ಪುತ್ರಿ ಶ್ರೀಜನ್ಯ (6) ಮೃತಪಟ್ಟಿದ್ದಾಳೆ. ರಾತ್ರಿ ಮಲಗಿದ್ದಾಗ ಗೋಡೆ ಕುಸಿದು ಅನಾಹುತ ಸಂಭವಿಸಿದೆ. ಬಂಗಾರದೇವರಹಟ್ಟಿ ಗ್ರಾಮದಲ್ಲಿ ಚಪ್ಪರ ಕುಸಿದು ಎತ್ತು ಹಾಗೂ ಕುರಿ ಮೃತಪಟ್ಟಿವೆ.

ವಿಜಯಪುರದ ತಾಳಿಕೋಟೆಯಲ್ಲಿ ಡೋಣಿ ನದಿಯಲ್ಲಿ ಬುಧವಾರ ಮಧ್ಯಾಹ್ನ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ತಾಳಿಕೋಟೆ–ಹಡಗಿನಾಳ ಸಂಪರ್ಕಿಸುವ ನೆಲಮಟ್ಟದ ಚಿಕ್ಕ ಸೇತುವೆಡೋಣಿ ನದಿ ಪ್ರವಾಹದಲ್ಲಿ ಮುಳುಗಿತ್ತು. ಎತ್ತಿನ ಬಂಡಿ ಮೂಲಕ ಸೇತುವೆ ದಾಟಿ ಹೊಲಕ್ಕೆ ಹೋಗಲು ಮೂವರು ರೈತರು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬಂಡಿ ಸಮೇತ ನಡು ನೀರಿನಲ್ಲಿ ಸೆಳವಿಗೆ ಸಿಲುಕಿಕೊಂಡಿದ್ದರು. ಸುದ್ದಿ ತಿಳಿದ ಸ್ಥಳೀಯರು ತಕ್ಷಣ ಎತ್ತಿನ ಬಂಡಿಯನ್ನು ದಡಕ್ಕೆ ಎಳೆದು, ಅಪಾಯದಿಂದ ಪಾರು ಮಾಡಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ–ಬನಹಟ್ಟಿಯಲ್ಲಿ ಒಂದು ಗಂಟೆ ಸುರಿದ ಭಾರಿ ಮಳೆಯಿಂದಾಗಿ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿತು.ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆ ಯಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಹಲವು ಹಳ್ಳ, ಕೆರೆ ಹಾಗೂ ಚೆಕ್‌ಡ್ಯಾಂ ಸೇರಿ ಎಲ್ಲ ಜಲಮೂಲಗಳು ತುಂಬಿ ಹರಿದಿವೆ.

ಭದ್ರಾ ಜಲಾಶಯ ಭರ್ತಿಗೆ 2 ಅಡಿ ಬಾಕಿ:ಶಿವಮೊಗ್ಗ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಹಲವಡೆ ಭಾರಿ ಮಳೆ ಸುರಿಯುತ್ತಿದೆ. ಭದ್ರಾ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದ್ದು, ತುಂಬಲು 2 ಅಡಿ ಬಾಕಿ ಇದೆ.ದಾವಣಗೆರೆ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಭತ್ತದ ಗದ್ದೆಗಳು ಜಲಾವೃತವಾಗಿವೆ.

ತುಮಕೂರು ಜಿಲ್ಲೆಯ ಕೆಲವು ಕಡೆಗಳಲ್ಲಿ ಉತ್ತಮ ಮಳೆ ಸುರಿದಿದ್ದು ಕೆರೆ–ಕಟ್ಟೆಗಳಿಗೆ, ಚೆಕ್‌ಡ್ಯಾಂಗಳಿಗೆ ನೀರು ತುಂಬಿದೆ.ಕೊರಟಗೆರೆ ಪಟ್ಟಣದ ಹೊರವಲಯದಲ್ಲಿ ಹಾದುಹೋಗುವ ಸುವರ್ಣಮುಖಿ ನದಿ ಮೈದುಂಬಿ ಹರಿಯುತ್ತಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಕರಾವಳಿಯಲ್ಲಿ ಮಳೆ ಕ್ಷೀಣಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. ಬೀದರ್‌ ಹಾಗೂ ಭಾಲ್ಕಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ಕರಾವಳಿಯಲ್ಲಿ ನಾಳೆ ‘ರೆಡ್ ಅಲರ್ಟ್’

‘ರಾಜ್ಯದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಸೆ.11ರಂದು ಮೂರೂ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದ್ದಾರೆ.

‘ಒಳನಾಡಿನಲ್ಲಿ ಮುಂಗಾರು ಬಿರುಸುಗೊಂಡಿದೆ. ರಾಜ್ಯದಲ್ಲಿ ಸೆ.14 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿಯಲ್ಲಿ ಗರಿಷ್ಠ 2.6 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುತ್ತಿವೆ. ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸು
ತ್ತಿರು ವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು’ ಎಂದು ಎಚ್ಚರಿಸಿದ್ದಾರೆ.

7 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’: ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುರುವಾರ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಆರೆಂಜ್ ಅಲರ್ಟ್’ಘೋಷಿಸಲಾಗಿದೆ.

ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ‘ಯೆಲ್ಲೊ ಅಲರ್ಟ್’ ಘೋಷಿಸಿದೆ.

ಮಳೆ-ಎಲ್ಲಿ, ಎಷ್ಟು?: ಬೆಂಗಳೂರಿನ ಹೆಸರಘಟ್ಟ ಭಾಗದಲ್ಲಿ ಗರಿಷ್ಠ 15 ಸೆಂ.ಮೀ ಮಳೆಯಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಗುಬ್ಬಿ, ಕೊರಟಗೆರೆ 10, ದಾವಣಗೆರೆ 8, ಚಿಕ್ಕೋಡಿ, ನಿಪ್ಪಾಣಿ, ಬಂಗಾರಪೇಟೆ, ದೊಡ್ಡಬಳ್ಳಾಪುರ, ಚಿತ್ರದುರ್ಗ 7, ಹೊಸಕೋಟೆ, ಹರಪ ನಹಳ್ಳಿ, ಹಿರಿಯೂರು 6, ಚಳ್ಳಕೆರೆ 5 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT