ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: 3 ಜಿಲ್ಲೆಗಳಲ್ಲಿ ಬೆಳೆ ನಾಶ, ಸೇತುವೆ ಸಂಪರ್ಕ ಕಡಿತ

Last Updated 21 ನವೆಂಬರ್ 2021, 19:33 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ರಾಯಚೂರು, ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಉತ್ತಮ ಮಳೆ ಸುರಿದಿದೆ. ಹಳ್ಳಗಳ ಮೇಲೆ ನೀರು ಹರಿಯುತ್ತಿದೆ. ಕಂಪ್ಲಿ–ಗಂಗಾವತಿ ಸಂಪರ್ಕ ಸೇತುವೆ ಜಲಾವೃತವಾಗಿದೆ. ಬೀದರ್‌, ಕಲಬುರಗಿ, ತೆಲಂಗಾಣದ ಹೈದರಾಬಾದ್‌, ಮಂತ್ರಾಲಯ ಸೇರಿ ಪ್ರಮುಖ ನಗರಗಳಿಗೆ ವಾಹನ ಸಂಪರ್ಕ ಕಡಿತಗೊಂಡಿದೆ.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಅಪಾರ ಪ್ರಮಾಣದಲ್ಲಿಭತ್ತ, ತೊಗರಿ, ಹತ್ತಿ ಬೆಳೆಗಳು ಹಾನಿಯಾಗಿವೆ. ಭತ್ತದ ಚೀಲ ಸಾಗಣೆಯ ಲಾರಿಯು ಸೊಸೈಟಿ ಕ್ಯಾಂಪ್‌ ಬಳಿ ಮಗುಚಿದ್ದು, ಭತ್ತದ ಚೀಲಗಳು ನೀರು ಪಾಲಾಗಿವೆ. ಕಲಬುರಗಿ ನಗರದಲ್ಲಿ ಭಾನುವಾರ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು.

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದರಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಂಪಿ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥದ ಬಳಿ ಇನ್ನೂ ನೀರು ಕಡಿಮೆಯಾಗಿಲ್ಲ. ಹಂಪಿಯ ರಾಮ ಲಕ್ಷ್ಮಣ ದೇವಸ್ಥಾನದ ಅಂಗಳಕ್ಕೆ ನೀರು ಹೊಕ್ಕಿದೆ. ಜನರು ನದಿ ಪಾತ್ರದಲ್ಲಿ ಓಡಾಡದಂತೆ ಹಳ್ಳಿಗಳಲ್ಲಿ ಡಂಗೂರ ಸಾರಲಾಗಿದೆ.

ಬಳ್ಳಾರಿ: ಎಡೆಬಿಡದೇ ಸುರಿದ ಮಳೆ

ಬಳ್ಳಾರಿ: ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಂದ ಭಾನುವಾರ ಬೆಳಿಗ್ಗೆವರೆಗೂ ಸತತವಾಗಿ ಮಳೆಯಾಗಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಜಮೀನಿಗೆ ನೀರು ನುಗ್ಗಿದೆ. ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದು, ಪರಿಹಾರದ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ.

ಭಾನುವಾರ ಬೆಳಿಗ್ಗೆ ಮುಕ್ತಾಯವಾದ 48 ಗಂಟೆಗಳಲ್ಲಿ ಬಳ್ಳಾರಿಯಲ್ಲಿ 14.6 ಸೆಂ.ಮೀ., ಕುರುಗೋಡಿನಲ್ಲಿ 5.2 ಸೆಂ.ಮೀ., ಸಂಡೂರಿನಲ್ಲಿ 5 ಸೆಂ.ಮೀ., ಕಂ‍ಪ್ಲಿಯಲ್ಲಿ 4.5ಸೆಂ.ಮೀ., ಸಿರುಗುಪ್ಪದಲ್ಲಿ 3.5 ಸೆಂ.ಮೀ. ಮಳೆಯಾಗಿದೆ. ‘ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು ವ್ಯಾಪಕವಾಗಿ ಹಾನಿಗೊಂಡಿವೆ. 230 ಮನೆಗಳು ಜಖಂಗೊಂಡಿವೆ. 107 ಜಾನುವಾರುಗಳು ಸತ್ತಿವೆ’ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಭಾನುವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಕಾಲಿಕ ಮಳೆಯಿಂದಾದ ಬೆಳೆ ಹಾನಿ ಪರಿಶೀಲಿಸಿದರು.

‘ಭತ್ತ, ಕಡಲೆ ಸೇರಿ 13 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಬೆಳೆದಿದ್ದ ಕೃಷಿ ಉತ್ಪನ್ನಗಳು ನಷ್ಟವಾಗಿವೆ. 10,032 ಹೆಕ್ಟೇರ್ ಮೆಣಸಿನಕಾಯಿ ಬೆಳೆ ಕೊಳೆತಿದೆ’ ಎಂದು ಜಿಲ್ಲಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

571 ಜನರಿಗೆ ಆಶ್ರಯ: ಜಿಲ್ಲೆಯಲ್ಲಿ ಐದು ಕಡೆ ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದ್ದು, 571 ಜನರು ಆಶ್ರಯ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT