ಶುಕ್ರವಾರ, ಆಗಸ್ಟ್ 12, 2022
21 °C
ಉಕ್ಕಿ ಹರಿದ ಹಳ್ಳಗಳು l ಕಾಗಿಣಾ, ಮಾಂಜ್ರಾ ನದಿಗೆ ಹೆಚ್ಚಿದ ಪ್ರವಾಹ l ಸೇತುವೆ ಮುಳುಗಡೆ

ಕಲಬುರ್ಗಿ, ಬೀದರ್‌ನಲ್ಲಿ ನಿಲ್ಲದ ಮಳೆ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಕೊಡಗು ಭಾಗದಲ್ಲಿ ಗುರುವಾರ ಉತ್ತಮ ಮಳೆ ಸುರಿದಿದೆ. 

ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳ ಕೆಲ ತಾಲ್ಲೂಕುಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 200ಕ್ಕೂ ಹೆಚ್ಚು ಮನೆಗಳ ಗೋಡೆ ಬಿದ್ದಿದ್ದು, ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ.

ಬೀದರ್‌ ಜಿಲ್ಲೆಯ ಮಾಂಜ್ರಾ ನದಿ ಸೇರಿದಂತೆ ಅನೇಕ ಹಳ್ಳ, ನಾಲಾಗಳು ಉಕ್ಕಿ ಹರಿಯುತ್ತಿವೆ. ಬೀದರ್, ಭಾಲ್ಕಿ, ಔರಾದ್ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಸಾವಿರಾರು ಎಕರೆ ಬೆಳೆ ನೀರು ಪಾಲಾಗಿದೆ. ಕಾರಂಜಾ ಜಲಾಶಯದ ಒಳಹರಿವು ಹೆಚ್ಚಿದೆ.

ಕಮಲನಗರ ತಾಲ್ಲೂಕಿನ ಬೆಳಕುಣಿ, ದಾಡಗಿ ಬಳಿಯ ಸೇತುವೆಗಳು ಮುಳುಗಿವೆ. ಬೀದರ್‌ ತಾಲ್ಲೂಕಿನ ಬಗದಲ್‌ ಬಳಿ ಹಳೆಯ ಸೇತುವೆ ಮೇಲೆ ನೀರು ಬಂದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಚಿಲ್ಲರ್ಗಿ ಸಮೀಪದ ಮಾಂಜ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.

ಕಾಗಿಣಾ ನದಿಯು ಉಕ್ಕಿ ಹರಿಯುತ್ತಿದ್ದು, ಕಲಬುರ್ಗಿ ಜಿಲ್ಲೆಯ ಚಿತ್ತಾಪುರ, ಸೇಡಂ, ಕಾಳಗಿ ತಾಲ್ಲೂಕುಗಳ ಹಲವು ಸೇತುವೆಗಳು ಮುಳುಗಿದ್ದರಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಆಳಂದ ಮತ್ತು ಶಹಾಬಾದ್ ತಾಲ್ಲೂಕುಗಳಲ್ಲಿಯೂ ಹಲವು ಹಳ್ಳಗಳು ಉಕ್ಕಿ ಹರಿಯುತ್ತಿವೆ.

ರಾಜ್ಯಹೆದ್ದಾರಿ 15ರಲ್ಲಿನ ಐನೋಳ್ಳಿ‌ ಮತ್ತು ನಾಗಾಈದಲಾಯಿ ಬಳಿಯ ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರಿಂದ ಚಿಂಚೋಳಿ–ಬೀದರ್ ಮಧ್ಯೆ ಸಂಪರ್ಕ ಕಡಿತವಾಗಿದೆ. ಕಾಳಗಿ–ಕೊಡದೂರ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು, ಕಾಳಗಿ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ಅಮಾವಾಸ್ಯೆ ನಿಮಿತ್ತ ದರ್ಶನ ಪಡೆಯಲು ಬಂದಿದ್ದ ಭಕ್ತರು ಪರದಾಡಿದರು.

ಚಿಂಚೋಳಿಯಲ್ಲಿ ದಾಖಲೆಯ 18 ಸೆಂ.ಮೀ. ಮಳೆ ಸುರಿದಿದ್ದು, ಚಿಂಚೋಳಿ ಪಟ್ಟಣದಲ್ಲಿರುವ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಸಮಾಧಿ ಜಲಾವೃತವಾಗಿದೆ. ಕಲಬುರ್ಗಿ ನಗರದಲ್ಲಿಯೂ ಸಂಜೆ ಉತ್ತಮ ಮಳೆ ಸುರಿಯಿತು.

5 ಗಂಟೆ ಮನೆ ಮೇಲೆ ಕುಳಿತಿದ್ದ ಮಹಿಳೆಯರು: ಬೀದರ್‌ ಜಿಲ್ಲೆಯ ರಾಚಪ್ಪಾ ಗೌಡಗಾಂವ ಗ್ರಾಮದ ತಾಯಿ–ಮಗಳು ಮಳೆ ನೀರಿನಿಂದ ಜಲಾವೃತಗೊಂಡ ಮನೆಯಿಂದ ಜೀವ ರಕ್ಷಿಸಿಕೊಳ್ಳಲು 5 ಗಂಟೆಗಳ ಕಾಲ ಮನೆಯ ಮೇಲೆ ಕುಳಿತಿದ್ದರು.

ಗುರಮ್ಮಾ ಪಾರಣ್ಣ ಅವರ ಮನೆ ಹೊಲದಲ್ಲಿದೆ. ಹೊಲದ ಪಕ್ಕದ ಹಳ್ಳಕ್ಕೆ ಹೆಚ್ಚಿನ ನೀರು ಬಂದು ಮನೆಯನ್ನು ಆವರಿಸಿಕೊಂಡಿದೆ. ಜೀವ ಉಳಿಸಿಕೊಳ್ಳಬೇಕು ಎಂದು ತಾಯಿ, ಮಗಳು ಮನೆಯ ಚಾವಣಿ ಮೇಲೆ ಹತ್ತಿ ಕುಳಿತಿದ್ದರು. ಗ್ರಾಮಸ್ಥರಿಗೆ ಬೆಳಿಗ್ಗೆಯೇ ಈ ವಿಷಯ ಗೊತ್ತಾದರೂ ಹೊಲದ ತುಂಬೆಲ್ಲಾ ನೀರು ಇದ್ದುದದರಿಂದ ಅಸಹಾಯಕರಾಗಿದ್ದರು. ಹಳ್ಳದ ನೀರಿನ ಪ್ರಮಾಣ ಇಳಿಮುಖವಾದ ನಂತರ ಸಾರ್ವಜನಿಕರು, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಅವರನ್ನು ರಕ್ಷಿಸಿ ಗ್ರಾಮಕ್ಕೆ ಕರೆ ತಂದರು.

ಧಾರಾಕಾರ ಮಳೆ: ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ.  ಮೈಸೂರು ಹಾಗೂ ಹಾಸನ ಜಿಲ್ಲೆಯ ಹಲೆವೆಡೆ ಉತ್ತಮ ಮಳೆಯಾಗಿದೆ.

ಅಗಸ್ತ್ಯತೀರ್ಥ ಹೊಂಡ ಭರ್ತಿ: ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಪರಿಸರದ ಬೆಟ್ಟದಲ್ಲಿ ಬುಧವಾರ ಸುರಿದ ಮಳೆ, ಕಾರಂಜಿಯ ನೀರಿನಿಂದ ಇಲ್ಲಿನ ಅಗಸ್ತ್ಯತೀರ್ಥ ಹೊಂಡವು ಭರ್ತಿಯಾಗಿದೆ. ಬೆಳಗಾವಿ, ವಿಜಯಪುರ ಹಾಗೂ ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಒಂದು ತಾಸು ಬಿರುಸಿನ ಮಳೆಯಾಗಿದೆ. 

ಸಾಧಾರಣ ಮಳೆ: ಶಿವಮೊಗ್ಗ ಜಿಲ್ಲೆಯಲ್ಲಿ ಬಹುಪಾಲು ಮಳೆ ಬಿಡುವು ನೀಡಿದ್ದು, ಕೆಲವೆಡೆ ಆಗಾಗ್ಗೆ ಸಾಧಾರಣ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಚಿತ್ರದುರ್ಗದ ಚಳ್ಳಕೆರೆ, ಚಿಕ್ಕಜಾಜೂರಿನಲ್ಲಿ ಸಾಧಾರಣ ಮಳೆಯಾಗಿದ್ದು, ಹೊಸದುರ್ಗದಲ್ಲಿ ಜೋರಾಗಿ ಸುರಿದಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು