ಶನಿವಾರ, ಮಾರ್ಚ್ 25, 2023
28 °C

ಚಾಮರಾಜನಗರ ದುರಂತ: ಪರಿಹಾರ ಮೊತ್ತದಲ್ಲಿ ಭೇದ ಮಾಡಲಾಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಕೋವಿಡ್ ಸೋಂಕಿತರ ಕುಟುಂಬಗಳಿಗೆ ಭಿನ್ನ ಮೊತ್ತದ ಪರಿಹಾರ ನೀಡುವುದನ್ನು ಒಪ್ಪಲಾಗದು’ ಎಂದು ಹೈಕೋರ್ಟ್‌ ಹೇಳಿದೆ.

2021ರ ಮೇ 2ರ ರಾತ್ರಿ 10.30ರಿಂದ ಮೇ 3ರ ಬೆಳಗಿನ ಜಾವ 2.30 ಗಂಟೆಯ ಅವಧಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಮಾತ್ರ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸರ್ಕಾರಕ್ಕೆ ನ್ಯಾಯಾಲಯ ವಿವರಣೆ ಸಲ್ಲಿಸಿದೆ.

‘ಮೇ 3 ರ ಬೆಳಗಿನ ಜಾವ 2.21 ರಿಂದ ಬೆಳಿಗ್ಗೆ 9 ಗಂಟೆಯ ಅವಧಿಯಲ್ಲಿ ಮೃತಪಟ್ಟ 10 ಸೋಂಕಿತರ ಕುಟುಂಬಗಳಿಗೆ ₹2 ಲಕ್ಷ ಪರಿಹಾರವನ್ನಷ್ಟೇ ನೀಡಲು ನಿರ್ಧರಿಸಲಾಗಿದೆ. ಮೇ 2ರಂದು ರಾತ್ರಿ 10.30ಕ್ಕೂ ಮೊದಲು ಮೃತಪಟ್ಟ 11 ಜನರ ಕುಟುಂಬಕ್ಕೂ ಈಗಾಗಲೇ ₹2 ಲಕ್ಷ ಪಾವತಿಸಲಾಗಿದೆ. ನ್ಯಾಯಮೂರ್ತಿ ಬಿ.ಎ. ಪಾಟೀಲ ಅವರ ನಡೆಸುತ್ತಿರುವ ತನಿಖಾ ವರದಿ ಬಂದ ಬಳಿಕ ಆ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ವಿವರಿಸಿದರು.

‘ಆಮ್ಲಜನಕ ಕೊರತೆಯಿಂದಲೇ ಸೋಂಕಿತರು ಮೃತಪಟ್ಟಿದ್ದಾರೆ ಎಂಬುದನ್ನು ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಎತ್ತಿ ತೋರಿಸಿದೆ. ಈ ದುರಂತದಲ್ಲಿ ಮೃತಪಟ್ಟ ಕುಟುಂಬಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕಾಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೇಳಿತು.

‘ಮೇ 3ರ ಬೆಳಗಿನ ಜಾವ 2.30ಕ್ಕೆ ಆಮ್ಲಜನಕ ಪೂರೈಕೆ ಆಗಿದ್ದರೂ, ಬಳಿಕ ಮೃತಪಟ್ಟವರ ಆರೋಗ್ಯದ ಮೇಲೆ ಆಮ್ಲಜನಕ ಕೊರತೆ ಪ್ರತಿಕೂಲ ಪರಿಣಾಮ ಬೀರಿರುತ್ತದೆ. ಹಾಗಾಗಿ, ಮೃತಪಟ್ಟವರ ನಡುವೆ ಯಾವುದೇ ವ್ಯತ್ಯಾಸ ಕಂಡು ಹಿಡಿಯಲು ಸಾಧ್ಯವಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು