ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಣಿಯದ ಹಿಜಾಬ್ ಕಾವು; ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಪ್ರತಿಭಟನೆ

ಇಂದು ಬಂದ್‌ಗೆ ಕರೆ
Last Updated 16 ಮಾರ್ಚ್ 2022, 19:49 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ–ಕಾಲೇಜುಗಳಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ತೀರ್ಪು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ರಾಜ್ಯದ ವಿವಿಧ ಕಡೆ ಬುಧವಾರ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು, ಶಿವಮೊಗ್ಗ, ಮಧುಗಿರಿ ಸೇರಿದಂತೆ ರಾಜ್ಯದ ಹಲವೆಡೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಯಿತು. ಹಿಜಾಬ್‌ ತೆಗೆಯಲು ಒಪ್ಪದ ವಿದ್ಯಾರ್ಥಿನಿಯರು ಪರೀಕ್ಷೆಗೂ ಹಾಜರಾಗದೇ ಮನೆಗೆ ಮರಳಿದರು.

ಈ ಮಧ್ಯೆ, ಕೆಲವು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾದರು. ಹಿಜಾಬ್ ವಿವಾದದ ಮೂಲವಾಗಿದ್ದ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅನೇಕ ವಿದ್ಯಾರ್ಥಿನಿಯರು ಹಿಜಾಬ್‌ ಬಿಚ್ಚಿಟ್ಟು ತರಗತಿಗೆ ತೆರಳಿದರು. ಜಿಲ್ಲೆಯ ಕಾಪು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾದರು. ಆದರೆ ಉಡುಪಿ, ಹೊಸನಗರ, ಕುಂದಾಪುರ, ಬೈಂದೂರು, ಸಾಗರದಲ್ಲಿ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಗೈರಾಗಿದ್ದರು.

ಬಂದ್‌ಗೆ ಕರೆ: ‘ಹಿಜಾಬ್‌ ವಿಚಾರವಾಗಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಒಪ್ಪಲಾಗದು’ ಎಂದು ಪ್ರತಿಪಾದಿಸಿರುವ ಮುಸ್ಲಿಂ ಸಮುದಾಯದ ಕೆಲವು ಸಂಘಟನೆಗಳು ಗುರುವಾರ (ಮಾರ್ಚ್ 17) ರಾಜ್ಯ ಬಂದ್‌ಗೆ ಕರೆ ನೀಡಿವೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ‘ಅಮೀರ್‌ ಇ ಶರಿಯತ್‌ ಆಫ್ ಕರ್ನಾಟಕ’ದ (ಮೌಲ್ವಿಗಳ ಸಂಘಟನೆ) ಮೌಲಾನ ಸಘೀರ್‌ ಅಹ್ಮದ್‌ ಖಾನ್ ರಶದಿ ಅವರು, ‘ಹೈಕೋರ್ಟ್ ತೀರ್ಪು ನಿರಾಶಾದಾಯಕವಾಗಿದೆ. ಮುಸ್ಲಿಂ ಸಮುದಾಯದ ವಿದ್ವಾಂಸರು, ಮಹಿಳಾ ಸಂಘಟನೆಗಳು ಮತ್ತು ಮಸೀದಿಗಳ ಮುಖ್ಯಸ್ಥರೆಲ್ಲ ಗುರುವಾರ ಶಾಂತಿಯುತ ಬಂದ್‌ಗೆ ಕರೆ ನೀಡಿದ್ದೇವೆ’ ಎಂದರು.

‘ಹಿಜಾಬ್‌ ಕುರಿತಂತೆ ಹೈಕೋರ್ಟ್‌ ನೀಡಿರುವುದು ಅನ್ಯಾಯದ ತೀರ್ಪು. ಇದಕ್ಕೆ ಇಡೀ ಮುಸ್ಲಿಂ ಸಮುದಾಯದ ವಿರೋಧವಿದೆ.

ಬಂದ್‌ಗೆ ಬೆಂಬಲ ನೀಡುತ್ತೇವೆ’ ಎಂದು ‘ಪಾಪ್ಯುಲರ್‌ ಫ್ರಂಟ್‌ ಆಫ್‌’ ಇಂಡಿಯಾದ ಕರ್ನಾಟಕ ಘಟಕದ ಅಧ್ಯಕ್ಷ ಯಾಸಿರ್ ಹಸನ್ ಅವರು ತಿಳಿಸಿದರು.

‘ಜಮಾತ್‌ ಇ ಇಸ್ಲಾಮಿ ಹಿಂದ್– ಕರ್ನಾಟಕ’ದ ಉಪಾಧ್ಯಕ್ಷ ಮೊಹಮ್ಮದ್‌ ಯೂಸುಫ್‌ ಖನ್ನಿ, ‘ನಮ್ಮದು ಬಹು ಸಂಸ್ಕೃತಿ ಹಾಗೂ ಬಹುಧರ್ಮಗಳ ದೇಶ. ಹಿಜಾಬ್‌ ವಿಚಾರದಲ್ಲಿ ಮುಸ್ಲಿಂ ಧರ್ಮಕ್ಕೆ ತಾರತಮ್ಯ ಮಾಡಲಾಗುತ್ತಿದೆ.ಇದನ್ನು ವಿರೋಧಿಸಿ, ಸಮುದಾಯದವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಶಾಂತಿಯುತವಾಗಿ ಬಂದ್‌ ನಡೆಸಲಿದ್ದೇವೆ’ ಎಂದರು.

‘ಫೆಡರೇಷನ್ ಆಫ್ ಮುಸ್ಲಿಂ ಆರ್ಗನೈಜೇಷನ್ಸ್’ ಸಂಸ್ಥೆಯು ಮೈಸೂರು ಬಂದ್‌ ನಡೆಸಲು ಉದ್ದೇಶಿಸಿದೆ. ಭಟ್ಕಳದ ತಂಝೀಂ ಸಂಘಟನೆಯೂ ಬಂದ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.

ಪರೀಕ್ಷೆ ಬಹಿಷ್ಕಾರ
ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ 12 ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ನಿರಾಕರಿಸಿ, ಬುಧವಾರ ಆಂತ ರಿಕ ಪರೀಕ್ಷೆಗೆ ಹಾಜರಾಗಲಿಲ್ಲ ಕೆಲವರು ಪರೀಕ್ಷೆಗೆ ಹಾಜರಾ ದರು. ಉಡುಪಿ ಜಿಲ್ಲೆಯ ಕಾಪು ಸರ್ಕಾರಿ ಪದವಿ ಕಾಲೇಜಿನ 9 ವಿದ್ಯಾರ್ಥಿನಿಯರು ಆಂತರಿಕ ಪರೀಕ್ಷೆ ಬಹಿಷ್ಕರಿಸಿದರು.

ತ್ವರಿತ ವಿಚಾರಣೆಗೆ ‘ಸುಪ್ರೀಂ’ ನಕಾರ
ನವದೆಹಲಿ:
ಹಿಜಾಬ್‌ ಪ್ರಕ ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.

ಅನೇಕ ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಬೇಕಿದ್ದು, ಮೇಲ್ಮನವಿಯ ವಿಚಾರಣೆ ಯನ್ನು ತ್ವರಿತವಾಗಿ ನಡೆಸಬೇಕು ಎಂದು ಅರ್ಜಿದಾರರ ಪರ ವಕೀಲ ಸಂಜಯ್‌ ಹೆಗ್ಡೆ ಅವರು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ ದೆದುರು ಮನವಿ ಮಾಡಿದರು.

ಹೋಳಿ ರಜೆಯ ನಂತರ ವಿಚಾರಣೆಯ ದಿನಾಂಕ ನಿಗದಿ ಪಡಿಸಲಾಗುವುದು ಪೀಠವು ತಿಳಿಸಿತು.

ಗೋಡೆಬರಹಕ್ಕೆ ಎಫ್‌ಐಆರ್‌
ಹೊಸಪೇಟೆ (ವಿಜಯನಗರ):
ಹಿಜಾಬ್‌ ಧರಿಸುವುದನ್ನು ಸಮರ್ಥಿಸಿಕೊಂಡು ನಗರದ ತಲಾ ಎರಡು ಪ್ರೌಢಶಾಲೆ, ಕಾಲೇಜುಗಳ ಗೋಡೆ ಮೇಲೆ ಬರೆದ ಬರಹಕ್ಕೆ ಸಂಬಂಧಿಸಿ ಮೂರು ಠಾಣೆಗಳಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ಬುಧವಾರ ದಾಖಲಾಗಿವೆ.

ವಿಜಯನಗರ ಕಾಲೇಜು, ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಶಾಲೆಗಳ ಗೋಡೆಗಳ ಮೇಲೆ ‘ಹಿಜಾಬ್ ಇಸ್‌ ಅವರ್‌ ಡಿಗ್ನಿಟಿ’, ‘ಹಿಜಾಬ್‌ ಇಸ್‌ ಅವರ್‌ ರೈಟ್‌’ ಎಂದು ಇಂಗ್ಲಿಷ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಈ ಸಂಬಂಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಲ್ಲದೇ ನಗರದ ಜಿಲ್ಲಾ ಕ್ರೀಡಾಂಗಣದ ಗೋಡೆಗಳು, ಹರಿಹರ ರಸ್ತೆಯ ಗುರು ಪದವಿಪೂರ್ವ ಕಾಲೇಜು, ಮುನ್ಸಿಪಲ್‌ ಹೈಸ್ಕೂಲ್‌ ಗೋಡೆಗಳ ಮೇಲೆಯೂ ಹಿಜಾಬ್‌ ಬೆಂಬಲಿಸಿ ಬರಹ ಬರೆಯಲಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ನಗರಸಭೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಗೋಡೆ ಬರಹಗಳ ಮೇಲೆ ಸುಣ್ಣ, ಬಣ್ಣ ಬಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT