ಬುಧವಾರ, ಮೇ 18, 2022
24 °C

ಲಾಕ್‌ಡೌನ್‌ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ: ಹೋಂ ಡೆಲಿವರಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಭಾಗಶಃ ತೆರವು ಮಾಡಲಿರುವ ಜಿಲ್ಲೆಗಳಲ್ಲಿ ಇದೇ 14 ರಿಂದ ಜನರು ಹೊರಬರುವುದನ್ನು ತಪ್ಪಿಸಲು ದಿನದ 24 ಗಂಟೆಯೂ ಎಲ್ಲ ಬಗೆಯ ವಸ್ತುಗಳನ್ನು ಮನೆಗಳಿಗೆ ಪೂರೈಕೆ ಮಾಡುವ (ಹೋಂ ಡೆಲಿವರಿ) ಅವಕಾಶ ನೀಡಲಾಗಿದೆ.

ರಾಜ್ಯ ಸರ್ಕಾರ ಲಾಕ್‌ಡೌನ್‌ ಭಾಗಶಃ ತೆರವುಗೊಳಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಹಿಂದೆ ಹೋಂ ಡೆಲಿವರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈಗ ಅದನ್ನು ತೆರವುಗೊಳಿಸಲಾಗಿದೆ.

ಆಹಾರ, ದಿನಸಿ, ಹಣ್ಣು–ತರಕಾರಿ, ಮಾಂಸ,ಮೀನು, ಡೇರಿ ಉತ್ಪನ್ನಗಳು, ಹಾಲಿನಬೂತ್‌, ಪ್ರಾಣಿ ಆಹಾರ, ಬೀದಿ ಬದಿ ವ್ಯಾಪಾರ, ಪಡಿತರ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಬಹುದು. ಕನ್ನಡಕದ ಅಂಗಡಿಗಳಿಗೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

ಮಧ್ಯಾಹ್ನ 2 ರ ಬಳಿಕ ಅನಗತ್ಯವಾಗಿ ಯಾರೂ ರಸ್ತೆಗಿಳಿಯುವಂತಿಲ್ಲ. ಅಂಗಡಿ ಮುಂಗಟ್ಟುಗಳನ್ನು 2 ಗಂಟೆಗೆ ಸರಿಯಾಗಿ ಮುಚ್ಚಬೇಕು. ಉದ್ಯಾನಗಳಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ವಾಕ್‌ ಮತ್ತು ಜಾಗಿಂಗ್ ಮಾಡಬಹುದು. ಅಲ್ಲಿ ಗುಂಪುಗೂಡುವಂತಿಲ್ಲ.

ಕಟ್ಟಡ ನಿರ್ಮಾಣ ಚಟುವಟಿಕೆಗೆ ಅವಕಾಶ ನೀಡಿರುವುದರಿಂದ ನಿರ್ಬಂಧಿತ ವಲಯವನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ನಿರ್ಮಾಣ ಸಾಮಗ್ರಿಗಳ ಮಾರಾಟದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಕೃಷಿ ಇಲಾಖೆ ಮತ್ತು ಸಂಬಂಧಿತ ಕಚೇರಿಗಳು,ಲೋಕೋಪಯೋಗಿ ಇಲಾಖೆ, ವಸತಿ, ಸಹಕಾರ, ಕಂದಾಯ,ನಬಾರ್ಡ್‌ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಶೇ 50 ರಷ್ಟು ಸಿಬ್ಬಂದಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಮದುವೆ ಮತ್ತು ಶವಸಂಸ್ಕಾರಗಳಿಗೆ ಈ ಹಿಂದೆ ಹೊರಡಿಸಿರುವ ಆದೇಶವೇ ಅನ್ವಯವಾಗಲಿದೆ. ಮದುವೆಯನ್ನು ಮನೆಗಳಲ್ಲೇ ಕನಿಷ್ಠ ಜನರ ಸಮ್ಮುಖದಲ್ಲಿ ನಡೆಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು