ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆಗೆ ಮನೆ ಕುಸಿತ, ಸೇತುವೆ ಮೇಲೆ ನೀರು ಹರಿದು ಸಂಪರ್ಕ ಸ್ಥಗಿತ

ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್‌ನಲ್ಲಿ ರಾತ್ರಿಯಿಡೀ ಮಳೆ
Last Updated 28 ಸೆಪ್ಟೆಂಬರ್ 2021, 16:46 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ಮನೆಗಳು ಕುಸಿದಿದ್ದು, ಸೇತುವೆ ಮೇಲೆ ಪ್ರವಾಹದ ನೀರು ಹರಿದಿದ್ದರಿಂದ ಕೆಲವೆಡೆ ಸಂಚಾರ ಸ್ಥಗಿತಗೊಂಡಿತ್ತು.

ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಬಳಿ ಕಾಗಿಣಾ‌ ನದಿಗೆ ಪ್ರವಾಹ ‌ಉಂಟಾಗಿ ಸೇತುವೆ ಮುಳುಗಿದ್ದರಿಂದ ಕಲಬುರ್ಗಿ-ಸೇಡಂ ಮಧ್ಯದ‌ ಸಂಪರ್ಕ ‌ಕಡಿತಗೊಂಡಿದೆ. ಸೇಡಂನ ಕಮಲಾವತಿ ನದಿಯೂ ಮೈದುಂಬಿ ಹರಿಯುತ್ತಿದೆ. ಭಾರಿ ಮಳೆ ಸುರಿದ ಪರಿಣಾಮ ಹಾಗೂ ನಾಗರಾಳ ಜಲಾಶಯದಿಂದ ನದಿಗೆ ನೀರು ಹರಿದು ಬಂದಿದ್ದರಿಂದ ಮಳಖೇಡ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಯಲ್ಲಿ ಪ್ರವಾಹ ಉಕ್ಕಿ ಬಂದು ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಚಿತ್ತಾಪುರದಿಂದ ದಂಡೋತಿ ಮಾರ್ಗದ ಸಾರಿಗೆ ಸಂಚಾರ ಸ್ತಬ್ಧಗೊಂಡಿತ್ತು. ಜಿಲ್ಲಾ ಕೇಂದ್ರ ಕಲಬುರ್ಗಿ ಹಾಗೂ ಕಾಳಗಿ ತಾಲ್ಲೂಕುಗಳ ಸಂಪರ್ಕ ಕಡಿದುಕೊಂಡಿದೆ.

ಜಿಲ್ಲೆಯ ಸೊನ್ನ ಭೀಮಾ ಬ್ಯಾರೇಜ್‌ನ ಆರು ಗೇಟ್‌ಗಳ ಮೂಲಕ 49,614 ಕ್ಯುಸೆಕ್, ಬೆಣ್ಣೆತೊರಾ ಜಲಾಶಯದಿಂದ 10 ಸಾವಿರ ಕ್ಯುಸೆಕ್, ನಾಗರಾಳ ಜಲಾಶಯದಿಂದ 4500 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಬೀದರ್‌ ಜಿಲ್ಲೆಯ ಚಿಟಗುಪ್ಪದಲ್ಲಿ 6 ಮನೆಗಳ ಗೋಡೆಗಳು ಕುಸಿದಿವೆ. ಹುಲಸೂರು ತಾಲ್ಲೂಕಿನ ವಾಜರಖೇಡನಲ್ಲಿ ಸರ್ಕಾರಿ ಶಾಲೆಯ ಹಳೆಯ ಕಟ್ಟಡದ ಮೇಲ್ಚಾವಣಿ ಕುಸಿದಿದೆ. ತೊರಿ ಬಸವಣ್ಣ ದೇಗುಲ ಜಲಾವೃತಗೊಂಡಿದೆ.

ಔರಾದ್‌ ತಾಲ್ಲೂಕಿನ ಬೋರ್ಗಿ ಸಮೀಪ ಸಂತಪುರ–ಜಮಗಿ ನಡುವಿನ ಹಳ್ಳದ ಸೇತುವೆ ಕುಸಿದು ಸಂಚಾರಕ್ಕೆ ಸಮಸ್ಯೆಯಾಗಿದೆ. ಬಾಬಳಿ ಗ್ರಾಮದ ಬಳಿ ಸೇತುವೆ ಹಾಳಾಗಿದೆ. ಭಾಲ್ಕಿ ತಾಲ್ಲೂಕಿನ ದಾಡಗಿ ಸಮೀಪ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೆಲಮಟ್ಟದ ಸೇತುವೆ ಮುಳುಗಿದೆ. ಭಾಲ್ಕಿಯಲ್ಲಿ ಸ್ಮಶಾನಕ್ಕೆ ಹೋಗುವ ದಾರಿ ಹಾಳಾಗಿರುವ ಕಾರಣ ಶವ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಕೆಸರಿನಲ್ಲಿ ಸಿಲುಕಿ‌ ಶವಸಂಸ್ಕಾರಕ್ಕೆ ಹೊರಟಿದ್ದವರು ತೊಂದರೆ ಅನುಭವಿಸಿದರು.

ಕಾರವಾರದಲ್ಲಿ ಗಾಳಿ, ಮಳೆ: ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಮಂಗಳವಾರ ಉತ್ತಮ ಮಳೆಯಾಗಿದ್ದರೆ ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಆಗಾಗ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT