ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ: ಸಿ.ಎಂ.ಇಬ್ರಾಹಿಂ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಘೋಷಣೆ
Last Updated 27 ನವೆಂಬರ್ 2022, 13:49 IST
ಅಕ್ಷರ ಗಾತ್ರ

ವಿಜಯಪುರ: ‘ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗದೇ ಇದ್ದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ. ಈ ವಿಷಯದಲ್ಲಿ ಬೇಕಾದರೆ ನಾನು ಸವಾಲು ಹಾಕುತ್ತೇನೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಈ ಸವಾಲು ಸ್ವೀಕರಿಸಲು ಸಿದ್ದರಿದ್ದಾರೆಯೇ? ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಮ್ಮ ಸಮೀಕ್ಷೆ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳಲ್ಲಿ ಜೆಡಿಎಸ್‌ ಪ್ರಥಮ ಸ್ಥಾನದಲ್ಲಿದೆ ಎಂದರು.

ಮುಂಬರುವ ಚುನಾವಣೆ ಬಳಿಕ ಜೆಡಿಎಸ್‌ ಎದುರು ಕಾಂಗ್ರೆಸ್‌, ಬಿಜೆಪಿ ತಗ್ಗಿ, ಬಗ್ಗಿ ನಡೆಯುವ ಕಾಲ ಬರಲಿದೆ. ಜೆಡಿಎಸ್‌ ಯಾರ ಜೊತೆ ಮದುವೆ, ಸಂಸಾರ ಮಾಡಲಿದೆ ಎಂಬುದು ಕಾದು ನೋಡಿ ಎಂದು ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಖಚಿತ ಎಂದು ಪರೋಕ್ಷವಾಗಿ ತಿಳಿಸಿದರು.

ಜೆಡಿಎಸ್‌ನ 80 ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ. ನಮ್ಮ ಗುರುಗಳಾದ ರೇವಣ್ಣ ಹೇಳಿದ ಬಳಿಕ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ಹಳೇ ಮೈಸೂರು ಭಾಗಕ್ಕಿಂತ ಉತ್ತರ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್‌ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ. ಲಿಂಗಾಯತ–ಒಕ್ಕಲಿಗ, ಲಿಂಗಾಯತ–ಮುಸ್ಲಿಂ, ಲಿಂಗಾಯತ–ಕುರುಬರು ಸೇರಿದರೆ ರಾಜ್ಯದಲ್ಲಿ ಚುನಾವಣೆ ಫಲಿತಾಂಶ ವಿಭಿನ್ನವಾಗಿರಲಿದೆ ಎಂದು ಹೇಳಿದರು.

ಪಂಚರತ್ನ:

ಜೆಡಿಎಸ್‌ ಆರಂಭಿಸಿರುವ ‘ಪಂಚರತ್ನ’ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನವರಿಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಯಾತ್ರೆ ನಡೆಯಲಿದೆ ಎಂದರು.

ಡಿಸೆಂಬರ್‌ 18ರ ಬಳಿಕ ವಿಜಯಪುರ, ಬಾಗಲಕೋಟೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಜನರಿಗೆ ಉಚಿತ ಆರೋಗ್ಯ ಸೌಲಭ್ಯ, ಗುಣಮಟ್ಟದ ಶಿಕ್ಷಣ, ಮಹಿಳಾ ಸಬಲೀಕರಣ, ನೀರಾವರಿ ಯೋಜನೆಗಳ ಪೂರ್ಣ ಮಡುವ ಭರವಸೆಯನ್ನು ಜೆಡಿಎಸ್‌ ಈ ಬಾರಿ ರಾಜ್ಯದ ಜನತೆಗೆ ನೀಡಿದೆ. ಒಂದು ವೇಳೆ ಐದು ವರ್ಷದಲ್ಲಿ ಈ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಮುಂದೆಂದೂ ಚುನಾವಣೆಗೆ ಜೆಡಿಎಸ್‌ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ಮೋದಿ ವಿರುದ್ಧ ವಾಗ್ದಾಳಿ:

ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರು ಉದ್ಯಮಿಗಳಾದ ಅದಾನಿ, ಅಂಬಾನಿ ಜೊತೆಗೂಡಿ ‘ನಾವಿಬ್ಬರು ನಮಗಿಬ್ಬರು’ ಎಂಬ ನೀತಿ ಅನುಸರಿಸುತ್ತಿದ್ದಾರೆ. ದೇಶದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ, ತೈಲ ದರ ಗಗನಕ್ಕೆ ಏರಿದೆ, ರಸಗೊಬ್ಬರ ಬೆಲೆ ಏರಿಕೆಯಾಗಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ಸರ್ಕಾರಿ ಉದ್ದಿಮೆ, ಕಂಪನಿಗಳು ಖಾಸಗಿಯವರಿಗೆ ಮಾರಾಟವಾಗುತ್ತಿವೆ, ಸರ್ಕಾರಿ ಬ್ಯಾಂಕುಗಳು ಮುಚ್ಚುವ ಭೀತಿ ಎದುರಿಸುತ್ತಿವೆ ಈ ಬಗ್ಗೆ ಪ್ರಧಾನಿ ಮೋದಿ ಮನ್‌ ಕೀ ಬಾತ್‌ನಲ್ಲಿ ಎಲ್ಲಿಯೂ ಪ್ರಸ್ತಾಪಿಸುತ್ತಿಲ್ಲ. ಇದು ಜನರ ಮಾತಲ್ಲ, ಕೇವಲ ಮೋದಿ ಮಾತು, ಮನ್‌ ಕಿ ಬಾತ್‌ಗೆ ಯಾವುದೇ ಮಹತ್ವ ಇಲ್ಲ ಎಂದು ಹೇಳಿದರು.

ಅಧ್ಯಕ್ಷ ಹುದ್ದೆ ಹೆಚ್ಚು:

ಮುಖ್ಯಮಂತ್ರಿ ಹುದ್ದೆಗಿಂತ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಹೆಚ್ಚು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬಂದರೆ ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಎಂದಾದರೂ ಈ ಕೆಲಸ ಮಾಡಿದೆಯಾ? ಜೆಡಿಎಸ್‌ನಲ್ಲಿ ಮಾತ್ರ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ, ಮಲ್ಲಿಕಾರ್ಜುನ ಯಂಡಿಗೇರಿ, ಸ್ನೇಹಾ ಶೆಟ್ಟಿ, ಬಿಸ್ಮಿಲ್ಲಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

****

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹಿಂದುತ್ವ, ಕೇಶವಕೃಪ ಬಿಟ್ಟು ಯಾವತ್ತು ಬಸವ ತತ್ವಕ್ಕೆ ಬದಲಾಗುತ್ತಾರೋ ಅಂದು ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ

– ಸಿ.ಎಂ.ಇಬ್ರಾಹಿಂ, ಅಧ್ಯಕ್ಷ, ಜೆಡಿಎಸ್ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT