ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌‌ ಬಳಿ ಅಕ್ರಮ ಗಣಿಗಾರಿಕೆಯ ದಾಖಲೆ ಸದ್ಯದಲ್ಲೇ ಬಹಿರಂಗ: ಅಶ್ವತ್ಥನಾರಾಯಣ

Last Updated 9 ಜುಲೈ 2021, 12:08 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆ ಕೆ.ಆರ್‌.ಎಸ್‌ ಸುತ್ತಮುತ್ತ ಸುಮಾರು 40ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಅಣೆಕಟ್ಟು ಮಾತ್ರವಲ್ಲದೆ, ರೈತರ ಜನ ಜೀವನಕ್ಕೂ ತೊಂದರೆ ಆಗಿದೆ. ಈ ಅಕ್ರಮ ದಂಧೆಯ ಸಂಪೂರ್ಣ ದಾಖಲೆಗಳನ್ನು ಮುಂದಿನ ವಾರ ಬಹಿರಂಗಪಡಿಸುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಒಬ್ಬ ವ್ಯಕ್ತಿ ಒಂದು ಗಣಿಗೆ ಪರವಾನಗಿ ಪಡೆದು 8–10 ಅಕ್ರಮ ಗಣಿ ನಡೆಸುತ್ತಾನೆ. ಇದರಲ್ಲಿ ರಾಜಕಾರಣಿಗಳೂ ಇದ್ದಾರೆ. ಅಕ್ರಮ ಗಣಿಗಾರಿಕೆಗೆಸಂಬಂಧಿಸಿದ ದಾಖಲೆಗಳನ್ನು ಮುಖ್ಯಮಂತ್ರಿ ಮತ್ತು ಗಣಿ ಸಚಿವರಿಗೆ ಸಲ್ಲಿಸುವುದಾಗಿ ತಿಳಿಸಿದರು.

ಗಣಗಾರಿಕೆಯ ಧೂಳಿನಿಂದ ಜನ ಮತ್ತು ಜಾನುವಾರುಗಳು ಸಾವನ್ನಪ್ಪುತ್ತಿವೆ. ಗಣಗಾರಿಕೆಯ ಪುಡಿ ಹೊಲಗಳ, ಸಸಿಗಳ ಮೇಲೆ ಪದರದಂತೆ ನಿಲ್ಲುತ್ತಿದೆ. ಇಂತಹ ಗಣಿಗಾರಿಕೆ ಮೇಲೆ ಯಾವುದೇ ನಿಯಂತ್ರಣವಿಲ್ಲವಾಗಿದೆ. ಕಾನೂನು ಬದ್ಧವಾಗಿಮತ್ತು ಪರಿಸರಕ್ಕೆ ಹಾನಿ ಆಗದಂತೆ ಗಣಿಗಾರಿಕೆ ನಡೆಸುವುದರಲ್ಲಿ ತಪ್ಪಿಲ್ಲ. ಆದರೆ ಅಕ್ರಮಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.

ಅಕ್ರಮ ಗಣಿಗಾರಿಕೆಗೆ ಕಣ್ಣು ಮುಚ್ಚಿಕೊಂಡು ಅಥವಾ ಯಾವುದೋ ಪ್ರಭಾವಕ್ಕೆ ಮಣಿದು ಸುಮ್ಮನಾದರೆ ಭವಿಷ್ಯದಲ್ಲಿ ಅಣೆಕಟ್ಟಿಗೆ ಅಪಾಯ ತಪ್ಪಿದ್ದಲ್ಲ. ಮೈಸೂರು ಮಹಾರಾಜರು ಕಟ್ಟಿಸಿದ ಅಣೆಕಟ್ಟಿಗೆ ಗಂಡಾಂತರ ಬರಬಹುದು ಎಂದು ಅಶ್ವತ್ಥನಾರಾಯಣ ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಮಂಡ್ಯ ಸಂಸದೆ ಸುಮಲತಾ ಅವರು ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂದು ಆರೋಪಿಸಿದ್ದರು. ಇದು ಜೆಡಿಎಸ್‌ ನಾಯಕರು ಮತ್ತು ಸುಮಲತಾ ನಡುವೆ ಸಾಕಷ್ಟು ವಾಗ್ವಾದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT