ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ, ಜನೋಪಯೋಗಿ, ಜನಸ್ನೇಹಿ ಆಡಳಿತ ನನ್ನ ಸಂಕಲ್ಪ: ಸಿಎಂ ಬಸವರಾಜ ಬೊಮ್ಮಾಯಿ

Last Updated 15 ಆಗಸ್ಟ್ 2021, 9:10 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಆಡಳಿತ ಜನ‌ಪರ, ಜನೋಪಯೋಗಿ ಹಾಗೂ ಜನಸ್ನೇಹಿ ಆಗಿರಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾನುವಾರಮಾತನಾಡಿದ ಅವರು, ‘ವಿಧಾನಸೌಧ ಪ್ರಜಾಪ್ರಭುತ್ವದ ದೇವಾಲಯ. ಅಂಬೇಡ್ಕರ್ ನೀಡಿರುವ ಸಂವಿಧಾನವೇ ಈ ದೇಗುಲದ ಧರ್ಮ ಗ್ರಂಥ’ ಎಂದರು.

‘ಆಳುವ ವರ್ಗದವರು ಜನಸ್ನೇಹಿ ಆಗಿರಬೇಕು. ವಿಧಾನಸಭೆ, ವಿಧಾನ ಪರಿಷತ್ ಜನಸ್ನೇಹಿ ಕಾನೂನುಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನೆ ನಡೆಸಬೇಕು’ ಎಂದೂ ಅವರು ಆಶಿಸಿದರು.

‘ಜನಪರ ಆಡಳಿತ, ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಲು ನಾನು ಸಂಕಲ್ಪ ಮಾಡಿದ್ದೇನೆ‌. ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುತ್ತೇನೆ. ಜನಪ್ರಿಯರಾಗುವುದು ಸುಲಭ. ಆದರೆ, ಜನೋಪಯೋಗಿ ಆಗಬೇಕು. ನಮ್ಮ ಆಡಳಿತ ಜನೋಪಯೋಗಿ ಆಗಿರಬೇಕು ಎಂಬುದೇ ನನ್ನ ಉದ್ದೇಶ’ ಎಂದರು.

‘ರಾಜ್ಯದಲ್ಲಿ ಸಂಪನ್ಮೂಲ ಬೇಕಾದಗಿಷ್ಟಿದೆ. ಅದನ್ನು ನಾಡಿನ ಜನರಿಗಾಗಿ ಬಳಸಬೇಕು. ಜನರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಆಡಳಿತ ನಡೆಸಬೇಕು. ಜನಪ್ರಿಯಗಿಂತ ಆಡಳಿತಕ್ಕಿಂತ ಜನೋಪಯೋಗಿ ಆಡಳಿತ ಆಗಿರಬೇಕು’ ಎಂದರು.

‘ವ್ಯಕ್ತಿಯೊಬ್ಬರಿಗೆ 75 ವರ್ಷ ವಯಸ್ಸು ಎಂದರೆ ವೃದ್ದಾಪ್ಯ. ಆದರೆ, ಪ್ರದೇಶಕ್ಕೆ, ದೇಶಕ್ಕೆ ಚಿರಯೌವನದ ವಯಸ್ಸು‌. ಯೌವನದಲ್ಲಿ ಉತ್ಸಾಹ, ಸಾಧಿಸುವ ಹಂಬಲ, ಸ್ಫೂರ್ತಿ ಹೇಗೆ ಹೆಚ್ಚಿರುತ್ತದೊ, ಅಂಥ ಕಾಲಘಟ್ಟಕ್ಕೆ ನಮ್ಮ ದೇಶ ಬಂದು ಮುಟ್ಟಿದೆ. ಸ್ವತಂತ್ರ ಎನ್ನುವುದು ಎಲ್ಲ ಜೀವಿಗಳ ಸಹಜ ಗುಣ. ಅಂಥ ಸಹಜ ಗುಣವನ್ನು ಹತ್ತಿಕ್ಕಿ ಇಟ್ಟಿದ್ದರು ಅಂದರೆ ಅದರ ಪರಿಣಾಮಗಳೇನು ಎಂದು ಊಹೆ ಮಾಡಲು ಕೂಡಾ ಸಾಧ್ಯವಿಲ್ಲ’ ಎಂದು ಸ್ವಾತಂತ್ರ್ಯ ಹೋರಾಟ ಸಂದರ್ಭವನ್ನು ನೆನಪಿಸಿದರು.

‘‍ನಮ್ಮ ದೇಶದಲ್ಲಿ ದುಡಿಯುವ ವರ್ಗ ತಿರುಗಿಬಿತ್ತೊ ಆಗ ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಡಲೇ ಬೇಕಾಯಿತು. ಹೀಗಾಗಿ ರೈತರು ಮತ್ತು ಕಾರ್ಮಿಕರ ಹೋರಾಟವನ್ನು ನಾವು ಸ್ಮರಿಸಲೇಬೇಕಾಗಿದೆ’ ಎಂದೂ ಹೇಳಿದರು.

ಆಂತರಿಕವಾಗಿಯೂ ಅಪಾಯವಿದೆ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ನೆರೆಯ ರಾಷ್ಟ್ರಗಳಿಂದ ಮಾತ್ರ ಭಯೋತ್ಪಾದಕತೆ ಅಪಾಯವನ್ನು ನಾವು ಎದುರಿಸುತ್ತಿಲ್ಲ. ಆಂತರಿಕವಾಗಿಯೂ ಅಪಾಯವಿದೆ. ಮಾವೋವಾದಿಗಳ ರೂಪದಲ್ಲಿ, ನಕ್ಸಲರ ರೂಪದಲ್ಲಿ ಸಮಾಜ ಒಡೆಯುವ ಪ್ರಯತ್ನಗಳು ನಡೆದಿದೆ’ ಎಂದರು.

‘ನಮ್ಮ ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗಬೇಕಾಗಿದೆ. ನಮ್ಮ ಹಿಂದಿನ ಸರ್ಕಾರಗಳ ತಪ್ಪಿನಿಂದಾಗಿ ನಾವು ಇನ್ನೂ ಬ್ರಿಟಿಷ್ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನೇ ಅನುಸರಿಸುತ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು’ ಎಂದು ತಿಳಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ರಾಜಕಾರಣದಲ್ಲಿ ಹೆಚ್ಚುತ್ತಿರುವ ಅಪರಾಧೀಕರಣಕ್ಕೆ ಅಂತ್ಯ ಹಾಡುವ ಮೂಲಕ ಮುಂದಿನ ಪೀಳಿಗೆಯಲ್ಲಿ ರಾಜಕೀಯ ನೈತಿಕತೆ ಹಾಗು ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕಿದೆ. ಆ ಮೂಲಕ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಾಗಿದೆ’ ಎಂದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT