ಶುಕ್ರವಾರ, ಡಿಸೆಂಬರ್ 2, 2022
21 °C

ಪೇಸಿಎಂ ಮೂಲಕ ಜನರ ಅಪಮಾನ: ಅರುಣ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪೇ ಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್‌ ಪಕ್ಷವು ಜನಸಾಮಾನ್ಯರ ಮತ್ತು ಸಮಗ್ರ ಕರ್ನಾಟಕದ ಜನರ ಅಪಮಾನ ಮಾಡುತ್ತಿದೆ’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ರೀತಿಯ ಪ್ರಚಾರದ ಮೂಲಕ ಕಾಂಗ್ರೆಸ್‌ ಪಕ್ಷ ಸಣ್ಣತನವನ್ನು ತೋರಿಸಿದೆ. ಈ ಸಣ್ಣತನವನ್ನು ಜನರು ಕ್ಷಮಿಸುವುದಿಲ್ಲ. ಕಾಂಗ್ರೆಸ್‌ನ ಈ ಧೋರಣೆಗೆ ಬಡ ಜನರು, ರೈತರು ಸೇರಿ ಎಲ್ಲ ಮತದಾರರೂ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ರೈತ ವಿದ್ಯಾನಿಧಿ ಮೂಲಕ ವಿದ್ಯಾರ್ಥಿ ವೇತನ ನೀಡುತ್ತಿದೆ. ಎಸ್‌ಸಿ, ಎಸ್‌ಟಿ ವರ್ಗಕ್ಕೆ ವಿಶೇಷ ಪ್ಯಾಕೇಜ್‌ಗಳನ್ನು ನೀಡುವ ಮೂಲಕ ಜನಸಾಮಾನ್ಯರ ಸರ್ಕಾರವಾಗಿದೆ. ಬೊಮ್ಮಾಯಿ ಕಾಮನ್‌ಮ್ಯಾನ್‌ ಸಿಎಂ ಆಗಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಅವಧಿಯಲ್ಲಿ ರೀಡೂ, ಎಸ್‌ಸಿ ಹಾಸ್ಟೇಲ್‌ಗಳಲ್ಲಿ ಖರೀದಿ ಹಗರಣ, ಪಡಿತರದಲ್ಲಿ ಹಗರಣ, ಶಿಕ್ಷಕರ ಮತ್ತು ಪೊಲೀಸ್‌ ನೇಮಕಾತಿಯಲ್ಲೂ ಹಗರಣಗಳು ನಡೆದಿವೆ. ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರದ ಕೂಪ. ಭ್ರಷ್ಟರ ಪಕ್ಷವಾದ ಕಾಂಗ್ರೆಸ್‌, ಸಜ್ಜನ, ಅತ್ಯುತ್ತಮ ಆಡಳಿತ ನೀಡುತ್ತಿರುವ ಬೊಮ್ಮಾಯಿ ಹೆಸರು ಕೆಡಿಸಲು ವ್ಯರ್ಥ ಆರೋಪ ಮಾಡುತ್ತಿದೆ’ ಎಂದು ಅವರು ಟೀಕಿಸಿದರು.

‘ಪಂಜಾಬ್‌ನಲ್ಲಿ ಕಾಂಗ್ರೆಸ್‌ ಒಡೆಯಿತು. ಗೋವಾದಲ್ಲಿ 8 ಶಾಸಕರು ಕಾಂಗ್ರೆಸ್‌ ತೊರೆದರು, ರಾಜಸ್ಥಾನದಲ್ಲೂ ಕಾಂಗ್ರೆಸ್‌ ಒಳಜಗಳ ಮುಂದುವರೆದಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಮಧ್ಯೆ ಭಿನ್ನಮತ ಭುಗಿಲೇಳಲಿದೆ’ ಎಂದು ಅರುಣ್‌ ಸಿಂಗ್‌ ಹೇಳಿದರು.

ದೇಶಾದ್ಯಂತ ಗಲಭೆ, ದಂಗೆ ಎಬ್ಬಿಸುವ ಕಾರ್ಯದಲ್ಲಿ ಪಿಎಫ್‌ಐ ನಿರತವಾಗಿತ್ತು. ದೇಶವನ್ನು ಅಸ್ಥಿರಗೊಳಿಸಲು ವಿದೇಶಗಳಿಂದ ಹಣ ಪಡೆಯುತ್ತಿದ್ದ ಈ ಸಂಘಟನೆಯನ್ನು ನಿಷೇಧಿಸಿದ್ದು ಅತ್ಯುತ್ತಮ ನಿರ್ಧಾರ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಪಿಎಫ್‌ಐ ಗಲಭೆ ನಡೆಸಿ, ಹಿಂದೂಗಳ ಹತ್ಯೆಯನ್ನು ಮಾಡಿತ್ತು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಯೋಜಿತ ರೀತಿಯಲ್ಲಿ ಹಿಂದೂಗಳ ಹತ್ಯೆ ನಡೆಸಿತ್ತು. ದೇಶವನ್ನು ಅಖಂಡವಾಗಿ ಉಳಿಸಲು ಪಿಎಫ್‌ಐ ನಿಷೇಧ ಅನಿವಾರ್ಯವಾಗಿತ್ತು’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು